×
Ad

ಕ್ರಿಸ್ಮಸ್‌ ದಿನದಂದು 175 ಮಿಲಿಯನ್‌ ಡಾಲರನ್ನು ತಪ್ಪಾಗಿ ಪಾವತಿಸಿದ ಬ್ರಿಟನ್‌ ಬ್ಯಾಂಕ್;‌ ಮರುಪಾವತಿಗೆ ಹರಸಾಹಸ

Update: 2022-01-02 22:57 IST
Photo: Bloomberg

ಬ್ರಿಟನ್‌ನ ಸ್ಯಾಂಟಂಡರ್‌ (Santander) ಬ್ಯಾಂಕ್‌ ಸರಿ ಸುಮಾರು 175 ಮಿಲಿಯನ್‌ ಡಾಲರನ್ನು ತಪ್ಪಾಗಿ ಪಾವತಿಸಿದೆ. ಕ್ರಿಸ್‌ಮಸ್‌ ದಿನದಿಂದ ಮಾಡಿಕೊಂಡ ಈ ಎಡವಟ್ಟನ್ನು ಸರಿ ಪಡಿಸಲು ಬ್ಯಾಂಕ್‌ ಈಗ ಹೆಣಗಾಡುತ್ತಿದ್ದು, ಈಗಾಗಲೇ ತಪ್ಪಾಗಿ ಪಾವತಿಗೊಂಡ ಹಣವನ್ನು ಮರುಪಡೆಯಲು ಪ್ರಯತ್ನಿಸುತ್ತಿದೆ. 

ತಾಂತ್ರಿಕ ದೋಷದಿಂದಾಗಿ 2,000 ಕಾರ್ಪೊರೇಟ್‌ ಮತ್ತು ಕಮರ್ಷಿಯಲ್‌ ಖಾತೆದಾರರ ಸುಮಾರು 75,000 ದಷ್ಟು ಪಾವತಿಗಳು ಎರಡು ಬಾರಿ ಪುನರಾವರ್ತಿತಗೊಂಡಿದೆ ಎಂದು ಬ್ಯಾಂಕ್‌ ಸುದ್ದಿ ಏಜೆನ್ಸಿ ಎಎಫ್‌ಪಿಗೆ ಮಾಹಿತಿ ನೀಡಿದ್ದು, ಟೈಮ್ಸ್‌ ಈ ಸುದ್ದಿಯನ್ನು ಧೃಡೀಕರಿಸಿದೆ. 
 
ಅದಾಗ್ಯೂ, ಠೇವಣಿದಾರರ ಖಾತೆಯಿಂದಲ್ಲದೆ ಬ್ಯಾಂಕಿನ ಸ್ವಂತ ಖಾತೆಯಿಂದಲೇ ಈ ಪುನರಾವರ್ತಿತ ಪಾವತಿ ನಡೆದಿದೆ. ಬ್ಯಾಂಕಿನ ಗ್ರಾಹಕರ ಖಾತೆಗಳು ಸುರಕ್ಷಿತವಾಗಿದೆ ಎಂದು ಬ್ಯಾಂಕ್‌ ತಿಳಿಸಿದೆ. 

ಹೀಗೆ ಹೆಚ್ಚುವರಿ ಪಾವತಿಯಾದ ಮೊತ್ತವನ್ನು ಹಿಂಪಡೆಯುವ ಸಲುವಾಗಿ ಯುಕೆಯಾದ್ಯಂತ ಬ್ಯಾಂಕುಗಳೊಂದಿಗೆ ಶ್ರಮಪಟ್ಟು ಕೆಲಸ ಮಾಡಲಿದ್ದೇವೆ ಎಂದು ಬ್ಯಾಂಕ್‌ ಹೇಳಿದೆ. ದಿ ಟೈಮ್ಸ್‌ ವರದಿ ಮಾಡಿರುವ ಪ್ರಕಾರ, ಯುಕೆಯ ವಿವಿಧ ಬ್ಯಾಂಕ್‌ಗಳಲ್ಲಿರುವ ಖಾತೆಗಳಿಗೆ ಈ ತಪ್ಪಾದ ಪಾವತಿಯು ಜಮೆಯಾಗಿದ್ದು, ಮರುಪಾವತಿಗಾಗಿ ಸ್ಯಾಂಟೆಂಡರ್‌ ಬ್ಯಾಂಕ್‌ ಈ ಎಲ್ಲಾ ಬ್ಯಾಂಕುಗಳ ಜೊತೆಗೆ ನಿರಂತರ ಸಂಪರ್ಕದಲ್ಲಿದೆ. 

ಖಾತೆದಾರರಿಗೆ ಅನಿರೀಕ್ಷಿತವಾಗಿ ಬಂದ ಈ ಹಣವನ್ನು ಅವರು ಈಗಾಗಲೇ ಖರ್ಚು ಮಾಡಿದ್ದರೆ ಮರುಪಾವತಿಗೆ ಅವರು ಹಿಂಜರಿಯಬಹುದು. ಇದು ಬ್ಯಾಂಕ್‌ಗೆ ಸಮಸ್ಯೆಯಾಗಿ ತಲೆದೋರಬಹುದು ಎಂದು ಬ್ಯಾಂಕ್‌ ತಿಳಿಸಿರುವುದಾಗಿ ಟೈಮ್ಸ್‌ ವರದಿ ಮಾಡಿದೆ. 

ವೇಳಾಪಟ್ಟಿಯ ನಿಗದಿಪಡಿಸುವಿಕೆಯಲ್ಲಾದ ಸಮಸ್ಯೆಯಿಂದಾಗಿ ಈ ಪ್ರಮಾದ ನಡೆದಿದ್ದು, ತಕ್ಷಣವೇ ಈ ತಪ್ಪನ್ನು ಗುರುತಿಸಿ ಕಾರ್ಯಪ್ರವೃತ್ತವಾಗಿರುವುದಾಗಿ ಬ್ಯಾಂಕ್‌ ಹೇಳಿದೆ.  ಬ್ರಿಟನ್ನಿನ ಪ್ರಮುಖ ಬ್ಯಾಂಕ್‌ಗಳಲ್ಲೊಂದಾದ ಸ್ಯಾಂಟೆಂಡರ್‌ ನಲ್ಲಿ 1.40 ಕೋಟಿ ಖಾತೆದಾರರಿದ್ದು, 2021ರ ಮೊದಲ ತ್ರೈಮಾಸಿಕದಲ್ಲಿ ಬ್ಯಾಂಕಿನ ನಿವ್ವಳ ಲಾಭವು ಒಂದು ಬಿಲಿಯನ್‌ ಪೌಂಡ್‌ ಆಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News