ಬ್ರಿಟನ್: ಭಾರತೀಯ ಮೂಲದ ಸಮಾಜಸೇವಕನಿಗೆ ಹೊಸ ವರ್ಷದ ಗೌರವದ ಹಿರಿಮೆ

Update: 2022-01-02 18:22 GMT

ಲಂಡನ್, ಜ.2: ಕೊರೋನ ಸೋಂಕಿನ ಮಹಾಮಾರಿ ಆರಂಭವಾದಂದಿನಿಂದ ತುರ್ತು ನೆರವಿನ ಅಗತ್ಯ ಇರುವವರಿಗೆ 2 ಲಕ್ಷಕ್ಕೂ ಅಧಿಕ ಊಟ ಒದಗಿಸಿದ ಸಮಾಜಸೇವಕ, ಭಾರತೀಯ ಮೂಲದ ಅಮೃತ್ಪಾಲ್ ಸಿಂಗ್ ಮಾನ್ ಬ್ರಿಟನ್ ರಾಣಿ ನೀಡುವ 2022ರ ಹೊಸವರ್ಷದ ಗೌರವ ಪಡೆದ ಪಟ್ಟಿಯಲ್ಲಿ ಸ್ಥಾನಪಡೆದಿದ್ದಾರೆ.

1946ರಲ್ಲಿ ಮಾನ್ ಅವರ ಮುತ್ತಜ್ಜ ಲಂಡನ್‌ನ ವೆಸ್ಟ್ಎಂಡ್ ಪ್ರದೇಶದಲ್ಲಿ ಕೊವೆಂಟ್ ಗಾರ್ಡನ್ ಎಂಬ ಪಂಜಾಬಿ ರೆಸ್ಟಾರೆಂಟ್ ಅನ್ನು ಆರಂಭಿಸಿದ್ದು ಬ್ರಿಟನ್‌ನ ಪ್ರಥಮ ಪಂಜಾಬಿ ರೆಸ್ಟಾರೆಂಟ್ ಎಂದು ಗುರುತಿಸಿಕೊಂಡಿದೆ. ಇದೀಗ 3ನೇ ತಲೆಮಾರಿನಲ್ಲಿ ಈ ರೆಸ್ಟಾರೆಂಟ್‌ನ ಆಡಳಿತ ನಿರ್ದೇಶಕರಾಗಿರುವ ಅಮೃತ್ಪಾಲ್ ಸಿಂಗ್ ಕೊಡುಗೈ ದಾನಿ ಎಂದು ಗುರುತಿಸಿಕೊಂಡವರು. ಬ್ರಿಟನ್ ಸರಕಾರದ ಕಾರ್ಯಕ್ರಮ, ಸಮುದಾಯ ಕಾರ್ಯಕ್ರಮ, ವಸ್ತುಪ್ರದರ್ಶ, ಉಪನ್ಯಾಸ ಕಾರ್ಯಕ್ರಮ ಇತ್ಯಾದಿಗಳಿಗೆ ಇದುವರೆಗೆ ಸುಮಾರು 1 ಮಿಲಿಯನ್ ಮೌಲ್ಯದ ಊಟದ ಪ್ರಾಯೋಜಕತ್ವ ವಹಿಸಿದ್ದಾರೆ. 

ನಿರಾಶ್ರಿತರಿಗೆ ನೆರವಾಗುವ, ಸಶಸ್ತ್ರ ಪಡೆಗಳಲ್ಲಿರುವವರಿಗೆ, ಪರಂಪರೆ ಮತ್ತು ಕಲೆಯನ್ನು ಪ್ರೋತ್ಸಾಹಿಸುವ ಕಾರ್ಯಕ್ರಮಗಳಲ್ಲಿ ಊಟದ ಪ್ರಾಯೋಜಕತ್ವ ವಹಿಸಿಕೊಳ್ಳುವ ಕಾರ್ಯವನ್ನು ಹಲವು ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದು ಈ ಮೂಲಕ ಅವರನ್ನು ಪ್ರೋತ್ಸಾಹಿಸುತ್ತಿದ್ದಾರೆ. 

ಕೊರೋನ ಸಾಂಕ್ರಾಮಿಕ ಆರಂಭವಾದ 2020ರ ಮಾರ್ಚ್ನಿಂದ ಆಹಾರದ ತುರ್ತು ನೆರವಿನ ಅಗತ್ಯ ಇರುವವರಿಗೆ, ಅಸಹಾಯಕರಿಗೆ 2 ಲಕ್ಷಕ್ಕೂ ಹೆಚ್ಚು ಊಟವನ್ನು ಒದಗಿಸಿದ್ದಾರೆ. ವಕೀಲರೂ ಆಗಿರುವ ಮಾನ್, ಅಪರಾಧ ಮತ್ತು ಆಘಾತಕಾರಿ ಘಟನೆಗಳ ಬಲಿಪಶುಗಳಿಗೆ ಉಚಿತ ಕಾನೂನು ಸಲಹೆ, ಸಣ್ಣ ಉದ್ದಿಮೆ, ಸಂಘಟನೆಗಳಿಗೆ ವ್ಯವಹಾರದ ಬಗ್ಗೆ ಸಲಹೆ ನೀಡುತ್ತಿದ್ದಾರೆ ಎಂದು ಬ್ರಿಟನ್ ಅರಮನೆಯ ಹೇಳಿಕೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News