×
Ad

ತೊಕ್ಕೊಟ್ಟು: ಬ್ಯಾರಿ ಅಕಾಡಮಿಯ ನೂತನ ಕಚೇರಿಗೆ ಶಿಲಾನ್ಯಾಸ

Update: 2022-01-03 14:21 IST

ಮಂಗಳೂರು, ಜ.3: ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡಮಿಯ ನೂತನ ಕಚೇರಿಗೆ ಶಿಲಾನ್ಯಾಸ ಕಾರ್ಯಕ್ರಮವು ಸೋಮವಾರ ಪೆರ್ಮನ್ನೂರು ಗ್ರಾಮದ ತೊಕ್ಕೊಟ್ಟು ಬಸ್ ನಿಲ್ದಾಣದ ಬಳಿ ನಡೆಯಿತು.

ಕರ್ನಾಟಕ ಗೃಹ ಮಂಡಳಿಯ ವತಿಯಿಂದ ನಡೆಯುತ್ತಿರುವ ಕಾಮಗಾರಿಯ ಶಿಲಾನ್ಯಾಸವನ್ನು ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್ ನೆರವೇರಿಸಿದರು.

ಬಳಿಕ ಮಾತನಾಡಿದ ಅವರು, ತುಳು, ಕೊಂಕಣಿ, ಕೊಡವ, ಅರೆಭಾಷೆ ಅಕಾಡಮಿಗಳಿಗೆ ಭವನಗಳನ್ನು ಸರಕಾರ ನೀಡಿದಂತೆ ಯಾವುದೇ ತಾರತಮ್ಯ ತೋರದೆ ಬ್ಯಾರಿ ಅಕಾಡಮಿಗೂ ಭವನ ನಿರ್ಮಾಣಕ್ಕೆ ಜಮೀನು ಮಂಜೂರು ಮಾಡಿ 6 ಕೋ.ರೂ.ಬಿಡುಗಡೆ ಮಾಡಿತ್ತು. ಇದೀಗ ಶಿಲಾನ್ಯಾಸ ನಡೆದ ಅಣತಿ ದೂರದಲ್ಲಿ ಅಬ್ಬಕ್ಕ ಭವನ ನಿರ್ಮಾಣವಾಗಲಿರುವುದರಿಂದ ಎರಡು ಭವನ ಜೊತೆಯಾಗಿರುವುದು ಬೇಡ ಎಂದು ಕೆಲವು ವ್ಯಕ್ತಿಗಳು ಹಾಗೂ ಸಂಘಟನೆಗಳ ಮುಖಂಡರು ಅಭಿಪ್ರಾಯ ವ್ಯಕ್ತಪಡಿಸಿದ್ದರು. ಇದೀಗ ಅವರ ಭಾವನೆಯನ್ನು ಗೌರವಿಸಿಕೊಂಡು ಭವನ ನಿರ್ಮಾಣದ ಉದ್ದೇಶವನ್ನು ಕೈ ಬಿಟ್ಟು, ಬಿಡುಗಡೆಯಾದ 6 ಕೋ.ರೂ. ಪೈಕಿ 3 ಕೋ.ರೂ. ವೆಚ್ಚದ ತಳಮಟ್ಟದಲ್ಲಿ ವಾಹನ ನಿಲುಗಡೆ ಹಾಗೂ ಒಂದನೇ ಮಹಡಿಯಲ್ಲಿ ಅಕಾಡಮಿಗೆ ಸರಕಾರಿ ಕಚೇರಿಯನ್ನು ಮಾತ್ರ ನಿರ್ಮಾಣ ಮಾಡುವ ಬಗ್ಗೆ ಯೋಚಿಸಿ ಹೊಸ ನಕ್ಷೆ ವಿನ್ಯಾಸಗೊಳಿಸಿ ಕಾಮಗಾರಿ ಆರಂಭಿಸಲು ಇಲಾಖೆಯು ಆಡಳಿತಾತ್ಮಕ ಅನುಮೋದನೆ ಪಡೆದುಕೊಳ್ಳಲಾಗಿದೆ ಎಂದರು.

ಈ ಕಟ್ಟಡದಲ್ಲಿ 2 ಸಾವಿರ ಚ.ಅಡಿಯ ಪೆರ್ಮನ್ನೂರು ಗ್ರಾಮಕರಣಿಕರ ಮತ್ತು ಸರ್ವೇಯರ್ ಕಚೇರಿಯು ನಿರ್ಮಾಣವಾಗಲಿದೆ. ಇಲ್ಲಿ ಯಾವುದೇ ಭವನ ನಿರ್ಮಾಣವಾಗದೆ ಕೇವಲ ಸರಕಾರಿ ಕಚೇರಿ ನಿರ್ಮಾಣವಾಗುವುದಾದರೆ ತಮ್ಮ ಯಾವುದೇ ಅಭ್ಯಂತರವಿಲ್ಲ ಎಂಬ ಸಂಘಟನೆಯ ಅಭಿಪ್ರಾಯಕ್ಕೆ ಪೂರಕವಾಗಿ ಶಿಲಾನ್ಯಾಸ ನೆರವೇರಿಸಿದ್ದು ಗೊಂದಲ ಉಂಟಾಗದಿರಲಿ ಎಂಬ ಕಾರಣಕ್ಕಾಗಿ ಹಿಂದೂ ಧರ್ಮದ ಅರ್ಚಕರ ಮೂಲಕ ಭೂಮಿ ಪೂಜೆ ಹಾಗೂ ಇಸ್ಲಾಂ ಧರ್ಮದ ಪ್ರಕಾರ ದುಆವನ್ನು ಜಂಟಿಯಾಗಿ ನಡೆಸಲಾಯಿತು ಎಂದು ರಹೀಂ ಉಚ್ಚಿಲ್ ತಿಳಿಸಿದರು.

ಅಕಾಡಮಿಯ ನೂತನ ಕಚೇರಿಯು ಹಜ್ ಮತ್ತು ವಕ್ಫ್ ಇಲಾಖೆ ಅಥವಾ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ಅಧೀನದಲ್ಲಿ ಕಾರ್ಯನಿರ್ವಹಿಸುವುದಿಲ್ಲ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧೀನದಲ್ಲಿರುವ ಕಟ್ಟಡ ಇದಾಗಿದ್ದು, ಈ ಕಚೇರಿಯಲ್ಲಿ ಯಾವುದೇ ಧಾರ್ಮಿಕ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ ಎಂದು ರಹೀಂ ಉಚ್ಚಿಲ್ ಸ್ಪಷ್ಟಪಡಿಸಿದರು,

ತಿರುಮಲೇಶ್ ಭಟ್ ಭೂಮಿ ಪೂಜೆ ನೆರವೇರಿಸಿದರು. ಸೈಯದ್ ಮುಸ್ತಫಾ ತಂಙಳ್ ದುಆಗೈದರು. ಅಕಾಡಮಿಯ ರಿಜಿಸ್ಟ್ರಾರ್ ಪೂರ್ಣಿಮಾ ಸ್ವಾಗತಿಸಿದರು. ಕರ್ನಾಟಕ ಗೃಹ ಮಂಡಳಿಯ ಇಂಜಿನಿಯರ್ ವಿಜಯ್ ಕುಮಾರ್ ವಂದಿಸಿದರು. ಗುತ್ತಿಗೆದಾರ ಪ್ರಭಾಕರ್ ಯೆಯ್ಯಾಡಿ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News