ಆರು ದಿನಗಳ ಹಿಂದೆ ಬಿಜೆಪಿ ಸೇರಿದ್ದ ಶಾಸಕ ಬಲ್ವಿಂದರ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ವಾಪಸ್!
ಚಂಡೀಗಢ: ವಿಧಾನಸಭಾ ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಪಂಜಾಬ್‌ನಲ್ಲಿ ಆರು ದಿನಗಳ ಹಿಂದೆ ಬಿಜೆಪಿಗೆ ಸೇರ್ಪಡೆಗೊಂಡಿದ್ದ ಕಾಂಗ್ರೆಸ್ ಪಕ್ಷದ ಶಾಸಕ ಮಾತೃ ಪಕ್ಷಕ್ಕೆ ಮರಳಿದ್ದಾರೆ.
ಹರಗೋವಿಂದಪುರದ ಕಾಂಗ್ರೆಸ್ ಶಾಸಕ ಬಲ್ವಿಂದರ್ ಸಿಂಗ್ ಲಡ್ಡಿ ಆರು ದಿನಗಳ ಹಿಂದೆ ಬಿಜೆಪಿ ಸೇರಿದ್ದರು.
ರವಿವಾರ ತಡರಾತ್ರಿ ಮುಖ್ಯಮಂತ್ರಿ ಚರನ್ ಜಿತ್ ಸಿಂಗ್ ಚನ್ನಿ, ಉಪಮುಖ್ಯಮಂತ್ರಿ ಸುಖಜೀಂದರ್ ಸಿಂಗ್ ಮತ್ತು ಎಐಸಿಸಿ ಉಸ್ತುವಾರಿ ಹರೀಶ್ ಚೌಧರಿ ಅವರ ಸಮ್ಮುಖದಲ್ಲಿ ಲಡ್ಡಿ ಅವರನ್ನು ಪಕ್ಷಕ್ಕೆ ಸೇರ್ಪಡೆಗೊಳಿಸಲಾಯಿತು. ಅವರು ಪಕ್ಷ ತೊರೆದ ನಂತರ ಕಾಂಗ್ರೆಸ್ ಅವರನ್ನು ಮರಳಿ ಪಕ್ಷಕ್ಕೆ ಸೇರಿಸಲು ಪ್ರಯತ್ನಿಸುತ್ತಿತ್ತು ಹಾಗೂ ಅವರ ಕ್ಷೇತ್ರದಿಂದ ಟಿಕೆಟ್ ನೀಡುವ ಭರವಸೆಯನ್ನೂ ನೀಡಿತ್ತು.
ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಸಾಕಷ್ಟು ಪಕ್ಷಾಂತರಗಳು ನಡೆಯುತ್ತಿವೆ. ಮತ್ತೊಬ್ಬ ಕಾಂಗ್ರೆಸ್ ಶಾಸಕ, ಪಕ್ಷದ ಹಿರಿಯ ನಾಯಕ ಮತ್ತು ಸಂಸದ ಪ್ರತಾಪ್ ಬಾಜ್ವಾ ಅವರ ಸಹೋದರ ಫತೇ ಜಂಗ್ ಸಿಂಗ್ ಬಾಜ್ವಾ ಇತ್ತೀಚೆಗೆ ಬಿಜೆಪಿಗೆ ಸೇರ್ಪಡೆಗೊಂಡಿದ್ದರು.
ಈ ಹಿಂದೆ ಕಾಂಗ್ರೆಸ್ ಜೊತೆಗಿದ್ದ ಮಾಜಿ ಮುಖ್ಯಮಂತ್ರಿ ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೊಂದಿಗೂ ಬಿಜೆಪಿ ಮೈತ್ರಿ ಮಾಡಿಕೊಂಡಿದೆ. ಅಮರಿಂದರ್ ಸಿಂಗ್ ಅವರು ಕಾಂಗ್ರೆಸ್ ತೊರೆದ ನಂತರ ಈಗ ತಮ್ಮದೇ ಆದ ಸಂಘಟನೆಯನ್ನು ನಡೆಸುತ್ತಿದ್ದಾರೆ.