ನಿಮ್ಮ ಧರ್ಮ ಅನುಸರಿಸಿ, ಆದರೆ ದ್ವೇಷದ ಭಾಷಣ, ಬರಹಗಳಲ್ಲಿ ತೊಡಗಿಸಿಕೊಳ್ಳಬೇಡಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು
ಕೊಟ್ಟಾಯಂ: "ನಿಮ್ಮ ಧರ್ಮವನ್ನು ಅನುಸರಿಸಿ ಆದರೆ ಇತರರನ್ನು ನಿಂದಿಸದಿರಿ ಹಾಗೂ ದ್ವೇಷದ ಭಾಷಣ ಅಥವಾ ಬರಹಗಳಲ್ಲಿ ತೊಡಗಿಸಿಕೊಳ್ಳಬೇಡಿ,'' ಎಂಬ ಸಲಹೆಯನ್ನು ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ನೀಡಿದ್ದಾರೆ.
ಇಲ್ಲಿಗೆ ಸಮೀಪದ ಮಣ್ಣನಂ ಎಂಬಲ್ಲಿ ಆಧ್ಯಾತ್ಮಿಕ ನಾಯಕ ಹಾಗೂ ಸಮಾಜ ಸುಧಾರಕ ಸಂತ ಕುರಿಯಾಕೋಸ್ ಎಲಿಯಾಸ್ ಚವರ ಅವರ 150ನೇ ಪುಣ್ಯತಿಥಿ ಸಮಾರಂಭದಲ್ಲಿ ಅವರು ಮಾತನಾಡುತ್ತಿದ್ದರು.
"ದ್ವೇಷದ ಭಾಷಣ ಅಥವಾ ಬರಹಗಳು ನಮ್ಮ ಸಂಸ್ಕೃತಿ, ಪರಂಪರೆ, ಸಂವಿಧಾನಿಕ ಹಕ್ಕುಗಳ ವಿರುದ್ಧವಾಗಿದೆ,'' ಎಂದು ಹೇಳಿದ ಉಪರಾಷ್ಟ್ರಪತಿ, "ಜಾತ್ಯತೀತತೆ ಪ್ರತಿಯೊಬ್ಬ ಭಾರತೀಯನ ರಕ್ತದಲ್ಲಿದೆ ಹಾಗೂ ನಮ್ಮ ದೇಶ ತನ್ನ ಸಂಸ್ಕೃತಿ ಮತ್ತು ಪರಂಪರಗೆ ಜಗತ್ತಿನಾದ್ಯಂತ ಮನ್ನಣೆ ಪಡೆದಿದೆ,'' ಎಂದು ಅವರು ಹೇಳಿದರು.
"ಇಂದು ನಮ್ಮ ಯುವಜನತೆಯಲ್ಲಿ ಸೇವಾ ಮನೋಭಾವ ಮೂಡಿಸುವ ಅಗತ್ಯವಿದೆ. ಈ ಸಾಂಕ್ರಾಮಿಕ ಅಂತ್ಯಗೊಂಡ ನಂತರ ಸರಕಾರಿ ಮತ್ತು ಖಾಸಗಿ ಶಾಲೆಗಳ ವಿದ್ಯಾರ್ಥಿಗಳೆಲ್ಲರಿಗೂ ಕನಿಷ್ಠ ಎರಡು-ಮೂರು ವಾರಗಳ ಸಮುದಾಯ ಸೇವೆ ಕಡ್ಡಾಯಗೊಳಿಸಬೇಕೆಂಬ ಸಲಹೆ ನನ್ನದು,'' ಎಂದು ಉಪರಾಷ್ಟ್ರಪತಿಗಳು ಹೇಳಿದರು.
ಸಂತ ಚವರ ಅವರ ಬಗ್ಗೆ ಮಾತನಾಡಿದ ವೆಂಕಯ್ಯ ನಾಯ್ಡು, ಸಂತ ಚವರ ಅವರು ಸಮಾಜಕ್ಕೆ ನೀಡಿದ ಕೊಡಯಗೆಯನ್ನು ಶ್ಲಾಘಿಸಿದರಲ್ಲದೆ ಅವರನ್ನೊಬ್ಬ ನಿಜವಾದ ದಾರ್ಶನಿಕ ಎಂದು ಬಣ್ಣಿಸಿದರು.