×
Ad

ಹರಿದ್ವಾರದ ದ್ವೇಷ ಭಾಷಣಕಾರರ ವಿರುದ್ಧ ಕಾನೂನು ವಿದ್ಯಾರ್ಥಿಯ ದಿಟ್ಟ ಹೋರಾಟ

Update: 2022-01-03 18:00 IST
ಗುಲ್ಬಹಾರ ಕುರೇಶಿ (scroll.in)

ಹರಿದ್ವಾರ,ಜ.3: ಇತ್ತೀಚಿಗೆ ಉತ್ತರಾಖಂಡದ ಹರಿದ್ವಾರದಲ್ಲಿ ನಡೆದ ಧರ್ಮ ಸಂಸದ್ನಲ್ಲಿ ಮಾಡಲಾಗಿದ್ದ ದ್ವೇಷ ಭಾಷಣಗಳು ಈ ದೇಶದ ಪ್ರಜ್ಞಾವಂತ ನಾಗರಿಕರಲ್ಲಿ ಕಳವಳಗಳನ್ನು ಸೃಷ್ಟಿಸಿವೆ. ಮೂರು ದಿನಗಳ ಕಾಲ ನಡೆದಿದ್ದ ಸಮಾವೇಶದಲ್ಲಿ ಸರಣಿ ಭಾಷಣಕಾರರು ಮುಸ್ಲಿಮರ ನರಮೇಧಕ್ಕೆ ಕರೆಗಳನ್ನು ನೀಡಿದ್ದರು. ಈ ದ್ವೇಷ ಭಾಷಣಗಳ ವೀಡಿಯೊಗಳು ತಕ್ಷಣ ವೈರಲ್ ಆಗಿದ್ದವು. ದ್ವೇಷ ಭಾಷಣಗಳ ವಿರುದ್ಧ ಪೊಲೀಸ್ ದೂರು ದಾಖಲಿಸಿರುವ ಸ್ಥಳೀಯ ಕಾನೂನು ವಿದ್ಯಾರ್ಥಿ ಗುಲ್ಬಹಾರ ಕುರೇಶಿ ನೇರ ಹೋರಾಟಕ್ಕಿಳಿಯುವ ಮೂಲಕ ಗಮನವನ್ನು ಸೆಳೆದಿದ್ದಾರೆ  ಎಂದು scroll.in ವರದಿ ಮಾಡಿದೆ.

‘ಈ ದ್ವೇಷ ಭಾಷಣಗಳನ್ನು ಕೇಳಿದ ನಂತರ ನಮ್ಮ ಸಂವಿಧಾನ ಮತ್ತು ಅದರ ಆತ್ಮದ ಮೇಲೆ ದಾಳಿ ನಡೆಯುತ್ತಿದೆ ಎನ್ನುವುದು ನನ್ನ ತಕ್ಷಣದ ಪ್ರತಿಕ್ರಿಯೆಯಾಗಿತ್ತು. ಈ ಬಗ್ಗೆ ನಾನೇನಾದರೂ ಮಾಡದಿದ್ದರೆ ಈ ಜನರಿಗೆ ಇಂತಹ ಕರೆಗಳನ್ನುನೀಡಲು ಇನ್ನಷ್ಟು ಧೈರ್ಯ ಬರುತ್ತದೆ ಎಂದು ನಾನು ಭಾವಿಸಿದ್ದೆ’ ಎಂದು ಕುರೇಶಿ ಹೇಳಿದರು.

ಡಿ.23ರಂದು ತನ್ನಿಬ್ಬರು ಸ್ನೇಹಿತರೊಂದಿಗೆ ಕೋತವಾಲಿ ಪೊಲೀಸ್ ಠಾಣೆಗೆ ತೆರಳಿದ್ದ ಕುರೇಶಿ ದೂರನ್ನು ದಾಖಲಿಸುವ ಜೊತೆಗೆ ಪೆನ್-ಡ್ರೈವ್ ಅನ್ನು ಪೊಲೀಸರಿಗೆ ಒಪ್ಪಿಸಿದ್ದರು. ‘ನಮ್ಮಲ್ಲಿ ನೂರು ಜನರು 20 ಲಕ್ಷ ಮುಸ್ಲಿಮರನ್ನು ಕೊಲ್ಲಲು ಸಿದ್ಧರಾದರೆ ನಾವು ಜಯಶಾಲಿಯಾಗುತ್ತೇವೆ ’ಎಂದು ಹಿಂದು ಮಹಾಸಭಾದ ಸಾಧ್ವಿ ಅನ್ನಪೂರ್ಣಾ ಮಾಡಿದ್ದ ಭಾಷಣ ಸೇರಿದಂತೆ ಕಾರ್ಯಕ್ರಮದ ವೀಡಿಯೊಗಳು ಪೆನ್-ಡ್ರೈವ್ನಲ್ಲಿದ್ದವು.

ಇನ್ನೋರ್ವ ಸಂತ ಧರ್ಮದಾಸ ಮಹಾರಾಜ್ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಹತ್ಯೆಗೆ ಕರೆ ನೀಡಿದ್ದರೆ, ಧರ್ಮ ಸಂಸದ್ ನ ಆಯೋಜಕರಲ್ಲೋರ್ವರಾಗಿದ್ದ ಯತಿ ನರಸಿಂಹಾನಂದ ಮುಸ್ಲಿಮರನ್ನು ಗುರಿಯಾಗಿಸಿಕೊಳ್ಳಲು ಪ್ರಭಾಕರನ್ ಅಥವಾ ಭಿಂದ್ರನವಾಲೆ ಆಗುವ ಯಾರಿಗೇ ಆದರೂ ಒಂದು ಕೋ.ರೂ.ಬಹುಮಾನದ ಭರವಸೆ ನೀಡಿದ್ದರು.

ದ್ವೇಷ ಭಾಷಣಕಾರರ ವಿರುದ್ಧ ದೂರು ದಾಖಲಿಸುವುದು ಧೈರ್ಯದ ಕೆಲಸ ಎನ್ನುವುದು ಕುರೇಶಿಗೆ ಗೊತ್ತಿತ್ತು. ವೀಡಿಯೊಗಳು ವೈರಲ್ ಆದ ಬೆನ್ನಿಗೇ ಉತ್ತರಾಖಂಡ ಮುಖ್ಯಮಂತ್ರಿ ಕಾರ್ಯಕ್ರಮದ ಆಯೋಜಕರೋರ್ವರ ಪಾದವನ್ನು ಸ್ಪರ್ಶಿಸಿದ್ದ ಫೋಟೊಗಳು ಹೊರಬಿದ್ದಿದ್ದವು.

‘ನನಗೆ ಭಯವಾಗಿತ್ತು, ನಾನದನ್ನು ನಿರಾಕರಿಸುವುದಿಲ್ಲ. ನನಗೆ ಅನುಮಾನಗಳೂ ಇವೆ, ಆದರೆ ನಾನು ಏನನ್ನು ಮಾಡುತ್ತಿದ್ದೇನೋ ಅದು ಭೀತಿಗಿಂತಲೂ ಹೆಚ್ಚು ಮಿಗಿಲಾಗಿದೆ, ನಾನು ದೇಶದ ಸಂವಿಧಾನವನ್ನು ರಕ್ಷಿಸುತ್ತಿದ್ದೇನೆ ಎಂದು ನನಗೆ ನಾನೇ ಹೇಳಿಕೊಂಡಿದ್ದೆ. ಪೊಲೀಸ್ ಠಾಣೆಯಲ್ಲಿ ವಿಧ್ಯುಕ್ತ ದೂರನ್ನು ಸಲ್ಲಿಸಲು ಯಾರಾದರೂ ಧೈರ್ಯವನ್ನು ಮಾಡಬೇಕಿತ್ತು’ ಎಂದು ಕುರೇಶಿ ಹೇಳಿದರು. ಆರಂಭದಲ್ಲಿ ಎಫ್ಐಆರ್ನಲ್ಲಿ ಇತ್ತೀಚಿಗೆ ಹಿಂದು ಧರ್ಮಕ್ಕೆ ಮತಾಂತರಗೊಂಡು ಜಿತೇಂದ್ರ ತ್ಯಾಗಿ ಎಂದು ಹೆಸರು ಬದಲಿಸಿಕೊಂಡಿರುವ ವಸೀಂ ರಿಝ್ವಿ ಅವರನ್ನು ಮಾತ್ರ ಹೆಸರಿಸಿದ್ದ ಪೊಲೀಸರು, ನಂತರ ಯತಿ ನರಸಿಂಹಾನಂದ ಮತ್ತು ಸಾಧ್ವಿ ಅನ್ನಪೂರ್ಣಾ ಸೇರಿದಂತೆ ಇನ್ನೂ ನಾಲ್ವರ ಹೆಸರುಗಳನ್ನು ಸೇರಿಸಿದ್ದಾರೆ.

ಆದರೆ ಈ ಪೈಕಿ ಒಬ್ಬರನ್ನೂ ಪೊಲೀಸರು ಬಂಧಿಸಿಲ್ಲ ಎಂದು ಕುರೇಶಿ ಬೆಟ್ಟು ಮಾಡಿದರು.

ಹರಿದ್ವಾರದ ಹೊರವಲಯದಲ್ಲಿ ಹುಟ್ಟಿ ಬೆಳೆದ ಕುರೇಶಿಯವರ ಕುಟುಂಬ ತಲೆಮಾರುಗಳಿಂದಲೂ ಅಲ್ಲಿ ವಾಸವಾಗಿದೆ. ಸಾಮಾಜಿಕ ಸೇವೆಯ ಬಗ್ಗೆ ಒಲವು ಬೆಳೆಸಿಕೊಂಡಿದ್ದ ಕುರೇಶಿ ತನ್ನ 20ರ ಹರೆಯದಲ್ಲಿ ಬಡಮಕ್ಕಳ ಶಿಕ್ಷಣಕ್ಕೆ ನೆರವಾಗುವ ಸಂಸ್ಥೆಯೊಂದರಲ್ಲಿ ಸ್ವಯಂಸೇವಕನಾಗಿದ್ದರು. 2020ರಲ್ಲಿ ಕೋವಿಡ್ ಬಿಕ್ಕಟ್ಟು ಸೃಷ್ಟಿಯಾದ ಬಳಿಕ ಸ್ಥಳೀಯ ಸಮುದಾಯದ ಆರೋಗ್ಯ ರಕ್ಷಣೆ ಅಗತ್ಯಗಳಿಗೆ ನೆರವಾಗಲು ‘ಖಿದ್ಮತ್-ಎ-ಕಲ್ಕ್’ ಉಪಕ್ರಮವನ್ನು ಆರಂಭಿಸಿದ್ದರು ಎಂದು scroll.in ವರದಿ ಮಾಡಿದೆ.

ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಕೊಂಡಿದ್ದು ಸಾರ್ವಜನಿಕ ಜೀವನದಲ್ಲಿರುವ ಇತರರರೊಂದಿಗೆ ಅವರ ನಂಟನ್ನು ಬೆಸೆದಿತ್ತು. ಹೀಗಾಗಿ ಅವರು ಪೊಲೀಸ್ ಠಾಣೆಗೆ ದೂರು ಸಲ್ಲಿಸಲು ತೆರಳಿದ್ದಾಗ ಭೀಮ್ ಆರ್ಮಿಯ ಹರಿದ್ವಾರ ಘಟಕದ ಅಧ್ಯಕ್ಷ ವಿಶಾಲ ಪ್ರಧಾನ ಮತ್ತು ಭಾರತೀಯ ವಾಲ್ಮೀಕಿ ಧರ್ಮ ಸಮಾಜದ ಸದಸ್ಯ ಆಶಿಷ್ ರಾಜೂರ್ ಅವರೂ ಜೊತೆಯಲ್ಲಿದ್ದರು.

ಸಂವಿಧಾನದ ಮೇಲೆ ದಾಳಿ ನಡೆಯುತ್ತಿದೆ ಎಂದು ಪ್ರಧಾನ ಮತ್ತು ರಾಜೂರ್ ಕೂಡ ಭಾವಿಸಿದ್ದರು. ಅವರೊಂದಿಗೆ ಚರ್ಚೆಯ ಸಂದರ್ಭ ಪೊಲೀಸ್ ದೂರು ಸಲ್ಲಿಸುವ ನಿರ್ಧಾರ ಕುರೇಶಿಯವರಲ್ಲಿ ಗಟ್ಟಿಯಾಗಿತ್ತು.

‘ನಾವು ಹಿಂಸೆಯಲ್ಲಿ ನಂಬಿಕೆಯನ್ನು ಹೊಂದಿಲ್ಲ. ನಾವು ಅಂಬೇಡ್ಕರ್ ಮತ್ತು ಮಹಾತ್ಮಾ ಗಾಂಧೀಜಿಯವರ ಸಿದ್ಧಾಂತಗಳನ್ನು ಅನುಸರಿಸುತ್ತೇವೆ. ಹರಿದ್ವಾರದಲ್ಲಿ ಧರ್ಮ ಸಂಸದ್ ಅಲ್ಲ, ಭಯೋತ್ಪಾದನೆ ಸಂಸದ್ ನಡೆದಿತ್ತು. ಇನ್ನೊಂದು ಧರ್ಮದ ವಿರುದ್ಧ ಇಂತಹ ಕೀಳು ಭಾಷೆಯನ್ನು ಬಳಸಬಾರದು ಎಂದು ಸಂವಿಧಾನವು ಸ್ಪಷ್ಟಪಡಿಸಿದೆ’ ಎಂದು ಪ್ರಧಾನ ಹೇಳಿದರೆ, ಹರಿದ್ವಾರದಲ್ಲಿ ಜನರು ಸದಾ ಶಾಂತಿಯುತವಾಗಿ ಬದುಕುತ್ತಿದ್ದಾರೆ. ಇದನ್ನು ಬದಲಿಸಲು ನಾವು ಅವಕಾಶ ನೀಡುವುದಿಲ್ಲ ಎಂದು ರಾಜೂರ್ ತಿಳಿಸಿದರು.

ತನ್ನ ಹುಟ್ಟೂರು ದ್ವೇಷ ಭಾಷಣಗಳ ತಾಣವಾಗಿ ಜಾಗತಿಕ ಮಾಧ್ಯಮಗಳಲ್ಲಿ ಬಿಂಬಿಸಲ್ಟಟ್ಟಿದ್ದು ಕುರೇಶಿಯವರನ್ನು ತಳಮಳಕ್ಕೀಡು ಮಡಿದೆ. ಜಾಗತಿಕವಾಗಿ ದೇಶದ ಪ್ರತಿಷ್ಠೆಗೆ ಪೆಟ್ಟು ಬಿದ್ದಿದೆ. ದೇಶದ ಪ್ರತಿಷ್ಠೆಯನ್ನು ನಾವು ರಕ್ಷಿಸಲೇಬೇಕಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News