×
Ad

ಗಲ್ವಾನ್ ಕಣಿವೆಯಲ್ಲಿ ಚೀನಾ ರಾಷ್ಟ್ರಧ್ವಜ: "ಮೋದೀಜಿ ಮೌನ ಮುರಿಯಿರಿ" ಎಂದ ರಾಹುಲ್ ಗಾಂಧಿ

Update: 2022-01-03 18:34 IST
Photo: Twitter/@shen_shiwei

ಹೊಸದಿಲ್ಲಿ: ಹೊಸ ವರ್ಷ ಆರಂಭಗೊಳ್ಳುತ್ತಿದ್ದಂತೆಯೇ ಗಲ್ವಾನ್ ಕಣಿವೆಯ ಪ್ರದೇಶ ತನ್ನದೆಂದು ಹೇಳಿಕೊಳ್ಳುವ ಯತ್ನದಲ್ಲಿ ಚೀನಾ ಅಲ್ಲಿ ಜನವರಿ 1ರಂದು ತನ್ನ ರಾಷ್ಟ್ರಧ್ವಜವನ್ನು ಅರಳಿಸಿದೆ. ಈ ಕುರಿತಾದ ಹಲವು ವೀಡಿಯೋಗಳನ್ನು ಚೀನಾ ಸರಕಾರದ ಮುಖವಾಣಿಗಳು ಬಿಡುಗಡೆಗೊಳಿಸಿವೆ  ಎಂದು indiatoday.in ವರದಿ ಮಾಡಿದೆ.

"ಭಾರತದ ಜತೆಗಿನ ಗಡಿಯ ಸಮೀಪದ ಗಲ್ವಾನ್ ಕಣಿವೆಯಲ್ಲಿ, ಚೀನಾದ "ಒಂದೇ ಒಂದು ಇಂಚು ಜಮೀನು ಬಿಟ್ಟುಕೊಡಬಾರದು'' ಎಂಬ ಸಿದ್ಧಾಂತದಡಿಯಲ್ಲಿ ಪಿಎಲ್‍ಎ ಸೈನಿಕರು ಜನವರಿ 1, 2022ರಂದು ಚೀನಾದ ಜನರಿಗೆ ಹೊಸ ವರ್ಷದ ಶುಭಾಶಯ ಕಳುಹಿಸುತ್ತಿದ್ದಾರೆ,'' ಎಂದು ಗ್ಲೋಬಲ್ ಟೈಮ್ಸ್ ಟ್ವೀಟ್ ಮಾಡಿದೆ.

ಚೀನಾದ ಮಾಧ್ಯಮ ಪ್ರತಿನಿಧಿ ಶೆನ್ ಶಿವೇಯ್ ಕೂಡ ಟ್ವೀಟ್ ಮಾಡಿ "2022ರ ಹೊಸ ವರ್ಷ ದಿನದಂದು ಚೀನಾದ ರಾಷ್ಟ್ರ ಧ್ವಜ ಗಲ್ವಾನ್ ಕಣಿವೆಯಲ್ಲಿ ಹಾರಾಡುತ್ತಿದೆ. ಈ ರಾಷ್ಟ್ರಧ್ವಜ ಈ ಹಿಂದೆ ಒಮ್ಮೆ ಬೀಜಿಂಗ್ ಟಿಯಾನನ್ಮೆನ್ ಸ್ಕ್ವೇರ್‍ನಲ್ಲೂ ಹಾರಾಡಿದ್ದರಿಂದ ಇದು ಬಹಳ ವಿಶೇಷ'' ಎಂದು ಬರೆದಿದ್ದಾರೆ.

ಚೀನಾದ ರಾಷ್ಟ್ರಧ್ವಜ ಗಲ್ವಾನ್ ಕಣಿವೆ ಪ್ರದೇಶದಲ್ಲಿ ಹಾರಾಡುತ್ತಿದೆ ಎಂದು ತಿಳಿದ ಬೆನ್ನಿಗೇ ಈ ವಿಷಯವನ್ನು ಕೈಗೆತ್ತಿಕೊಂಡ ವಿಪಕ್ಷಗಳು ಕೇಂದ್ರ ಸರಕಾರವನ್ನು ತರಾಟೆಗೆ ತೆಗೆದುಕೊಂಡಿವೆ.

ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ, "ನಮ್ಮ ತ್ರಿವರ್ಣವೇ ಗಲ್ವಾನ್‍ನಲ್ಲಿ ಚೆನ್ನಾಗಿ ಕಾಣಬಹುದು. ಚೀನಾಗೆ ಪ್ರತಿಕ್ರಿಯಿಸಬೇಕಿದೆ. ಮೋದೀಜಿ, ಮೌನ ಮುರಿಯಿರಿ,'' ಎಂದು ಟ್ವೀಟ್ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News