×
Ad

ಕೊರಗರ ದೌರ್ಜನ್ಯದ ಹಿಂದಿನ ಕಾಣದ ಕೈಗಳ ಕುರಿತು ತನಿಖೆಗೆ ಶ್ರೀಧರ್ ನಾಡ ಆಗ್ರಹ

Update: 2022-01-03 19:16 IST

ಕುಂದಾಪುರ, ಜ.3: ಕೋಟ ಆದಿವಾಸಿ ಕೊರಗ ಸಮುದಾಯದ ಮೇಲಿನ ಪೊಲೀಸ್ ದೌರ್ಜನ್ಯ ಖಂಡಿಸಿ ಹಾಗೂ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ಹಕ್ಕುಗಳ ಸಮನ್ವಯ ಸಮಿತಿ, ಉಡುಪಿ ಜಿಲ್ಲಾ ಸಂಘಟನಾ ಸಮಿತಿಯ ನೇತೃತ್ವದಲ್ಲಿ ಕುಂದಾಪುರ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಪ್ರತಿಭಟನಾ ಪ್ರದರ್ಶನ ಹಾಗೂ ಹಕ್ಕೊತ್ತಾಯವನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಾಕಾರರನ್ನುದ್ದೇಶಿಸಿ ಮಾತನಾಡಿದ ಸಮಿತಿಯ ಜಿಲ್ಲಾ ಸಂಚಾಲಕ ಶ್ರೀಧರ್ ನಾಡ, ಕಳೆದ ಹಲವು ದಶಕಗಳಿಂದ ಕೊರಗ ಸಮುದಾಯದ ಜನಸಂಖ್ಯೆ ಅತ್ಯಂತ ಗಂಭೀರ ಸ್ಥಿತಿಯಲ್ಲಿ ಕಡಿಮೆ ಆಗುತ್ತಿದೆ. ಸಮುದಾಯ ವಿನಾಶದ ಅಂಚಿಗೆ ಸರಿದಿದೆ. ಸಮುದಾಯದ ವಿನಾಶದೊಂದಿಗೆ ಭಾಷೆ, ಬದುಕು, ಕಲೆ, ಸಂಸ್ಕೃತಿ ನಾಶವಾಗಲಿದೆ. ಈಗಾಗಲೇ ಕೊರಗ ಸಮುದಾಯದಲ್ಲಿ ಕೇವಲ ನಾಲ್ಕು ಸಾವಿರ ಜನ ಮಾತ್ರ ಕೊರಗ ಭಾಷೆಯನ್ನು ಮಾತನಾಡುತ್ತಾರೆ ಎಂದು ತಿಳಿಸಿದರು.

ಕೇಂದ್ರ ಸರಕಾರ ಕೊರಗ ಸಮುದಾಯವನ್ನು ಪಿ.ವಿ.ಟಿ.ಜೆ ಸಮುದಾಯದ ಪಟ್ಟಿಗೆ ಸೇರಿಸಿದೆ. ಅಂದರೆ ಅತ್ಯಂತ ಅಂಚಿಗೆ ತಳ್ಳಲ್ಪಟ, ಧಮನಕೆ ಒಳಾಗದ ಸಮುದಾಯವೆಂದು ಸರಕಾರವೇ ಗುರುತಿಸಿದೆ. ಅಂತಹ ಸಮುದಾಯವನ್ನು ಆಡಳಿತ ವ್ಯವಸ್ಥೆ ಉಳಿಸಿ ಬೆಳಸಲು ನಿರಂತರವಾಗಿ ಕಾರ್ಯಕ್ರಮ ರೂಪಿಸಿ ಜಾರಿಗೆ ತರುವ ಬದಲು ಆಡಳಿತವೆ ಅವರ ಮೇಲೆ ದೌರ್ಜನ್ಯ ನಡೆಸಿರುವುದು ಕ್ಷಮಗೆ ಅರ್ಹವಲ್ಲ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.

ದೌರ್ಜನ್ಯ ಎಸಗಿರುವ ಎಸ್ಸೈ ಅಮಾನತು ಮಾಡಿದ ಕ್ಷಣ ಶಿಕ್ಷೆ ಆಗಿದೆ ಎಂದು ಅರ್ಥವಲ್ಲ. ಸಂಬಂಧಿಸಿದ ಪೊಲೀಸರ ಮೇಲೆ ದಲಿತ ದೌರ್ಜನ್ಯ ಕಾಯ್ದೆಯಡಿ ಕೇಸು ದಾಖಲಿಸಿ ಬಂಧಿಸಬೇಕು. ನೊಂದ ಕೊರಗ ಸಮುದಾಯದ ಬಂಧುಗಳಿಗೆ ಪೂರ್ಣ ಪ್ರಮಾಣದ ಪರಿಹಾರ ಕೂಡಲೇ ನೀಡಬೇಕು. ದೌರ್ಜನ್ಯ ನಡೆಸಿರುವ ಪೊಲೀಸ್ ಅಧಿಕಾರಿಗಳು ಇಡೀ ಕೊರಗ ಸಮುದಾಯದ ಕುರಿತು ಕ್ಷಮೆ ಕೇಳಬೇಕು. ಈ ಘಟನೆ ಹಿಂದೆ ಕೊರಗರ ಕುರಿತು ಕೀಳು ಮನೋಭಾವ ಹೊಂದಿರುವ ಕಾಣದ ಕೈ ಕುರಿತು ತನಿಖೆ ಆಗಬೇಕು ಮತ್ತು ಅವರಿಗೂ ಶಿಕ್ಷೆ ಆಗಬೆೀಕು ಎಂದು ಅವರು ಒತ್ತಾಯಿಸಿದರು.

ಬಳಿಕ ವಿವಿಧ ಬೇಡಿಕೆಗಳ ಕುರಿತ ಮನವಿಯನ್ನು ಕುಂದಾಪುರ ತಹಶೀಲ್ದಾರ್ ಕಿರಣ್ ಗೌರಯ್ಯರ ಮೂಲಕ ಜಿಲ್ಲಾಧಿಕಾರಿಗೆ ಸಲ್ಲಿಸಲಾಯಿತು. ಪ್ರಮುಖರಾದ ಶಿವರಾಜ ನಾಡ, ಗಣೇಶ ಆಲೂರು, ಮಾಲತಿ ಆಲೂರು, ಸುರೇಂದ್ರ ಹೇರೂರು, ನಾಗೇಶ್ ಬಾರಂದಾಡಿ, ಬಸವ ಮುದೂರು, ಆಶಾ ಬಂಟ್ವಾಡಿ, ಗೋಪಾಲ ಕೊಣ್ಕಿ, ವಿಮಲ ಮರವಂತೆ, ಡಿವೈಎಫ್‌ಐ ಕಾರ್ಯದರ್ಶಿ ರಾಜೇಶ ವಡೆರಹೋಬಳಿ, ಕುಂದಾಪುರ ದಲಿತ ಹಕ್ಕುಗಳ ಸಮಿತಿಯ ಮಹಾಬಲ ವಡೆರಹೋಬಳಿ, ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ವಿ.ಚಂದ್ರಶೇಖರ, ರವಿ ಗುಲ್ಲಾಡಿ ಮೊದಲಾದವರು ಉಪಸ್ಥಿತರಿದ್ದರು.

ಸುಳ್ಳು ಕೇಸು ವಾಪಾಸ್ಸು ಪಡೆಯಲು ಒತ್ತಾಯ

ಕೊರಗ ಸಮುದಾಯದ ಮೇಲೆ ದೌರ್ಜನ್ಯ ಎಸಗಿದ ಪೋಲಿಸರನ್ನು ಖಾಯಂ ಕರ್ತವ್ಯದಿಂದ ವಜಾಗೊಳಿಸಬೇಕು. ದೌರ್ಜನ್ಯಕ್ಕೆ ಒಳಗಾದ ಕೊರಗ ಬಂಧುಗಳಿಗೆ ಪರಿಹಾರ ನೀಡಬೇಕು ಮತ್ತು ಸಮಗ್ರ ತನಿಖೆಯಾಗಬೇಕು. ತಪ್ಪಿಸ್ಥರನ್ನು ಕೂಡಲೇ ಬಂಧಿಸಬೇಕು. ಅಮಾಯಕ ಕೊರಗ ಸಮುದಾಯದವರ ಮೇಲೆ ಸುಳ್ಳು ಕೇಸು ದಾಖಲಿಸಿದ್ದನ್ನು ಕೂಡಲೇ ಸರಕಾರ ಹಿಂದಕ್ಕೆ ಪಡೆಯ ಬೇಕು. ಕೊರಗರ ಭೂಮಿಗೆ ಸಂಬಂಧಿಸಿದ ಖಾತೆ ಬದಲಾವಣೆ ಮತ್ತು ಇತರೆ ಸಮಸ್ಯೆಗಳನ್ನು ಕೂಡಲೇ ಪರಿಹರಿಸಬೇಕು. ಕೇಂದ್ರ, ರಾಜ್ಯ ಸರಕಾರ ಕಳೆದ 6 ವರ್ಷಗಳಿಂದ ಕೊರಗರಿಗೆ ನೀಡಬೇಕಿರುವ ಅನುದಾನಗಳನ್ನು ಕೂಡಲೇ ಬಿಡುಗಡೆಗೊಳಿಸಬೇಕು. ಮನೆ, ನೀರಾವರಿ, ವಿದ್ಯಾರ್ಥಿವೇತನ ಇತರ ಸೌಲಭ್ಯಕ್ಕೆ ಐಟಿಡಿಪಿಗೆ ಅರ್ಜಿ ಸಲ್ಲಿಸಿದ ಕೊರಗರಿಗೆ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು. ನಿರುದ್ಯೋಗಿ ಕೊರಗ ಯುವಜನರಿಗೆ 2 ವರ್ಷದಿಂದ ನೀಡ ಬೇಕಾದ ನಿರುದ್ಯೋಗ ಭತ್ಯೆ ನೀಡಬೇಕು. ಆಲೂರು ಕೊರಗ ಸಮುದಾಯವನ್ನು ಅಜಲು ಮುಕ್ತಗೊಳಿಸಿ, ಮುಹಮ್ಮದ್ ಪೀರ್ ವರದಿ ಪ್ರಕಾರ ಕನಿಷ್ಠ 2.50 ಎಕರೆ ಭೂಮಿ ಪ್ರತಿ ಕುಟುಂಬಕ್ಕೆ ನೀಬೇಕು ಎಂದು ಸಮಿತಿ ಒತ್ತಾಯಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News