ದ್ವಿತೀಯ ಟೆಸ್ಟ್: ಭಾರತ 202 ರನ್‌ಗೆ ಆಲೌಟ್

Update: 2022-01-03 18:03 GMT
photo:PTI

ಜೋಹಾನ್ಸ್‌ಬರ್ಗ್, ಜ.3: ಮಾರ್ಕೊ ಜಾನ್ಸನ್, ಕಾಗಿಸೊ ರಬಾಡ ಹಾಗೂ ಡುವಾನ್ ಒಲಿವಿಯರ್ ಸಂಘಟಿತ ದಾಳಿಗೆ ತತ್ತರಿಸಿದ ಭಾರತ ಕ್ರಿಕೆಟ್ ತಂಡ ಸೋಮವಾರ ಇಲ್ಲಿ ಆರಂಭವಾಗಿರುವ ದ್ವಿತೀಯ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 202 ರನ್ ಗಳಿಸಿ ಆಲೌಟಾಗಿದೆ.

ಕೊನೆಯ ಕ್ಷಣದಲ್ಲಿ ಗಾಯದ ಸಮಸ್ಯೆಯಿಂದಾಗಿ ಪಂದ್ಯದಿಂದ ಹೊರಗುಳಿದ ವಿರಾಟ್ ಕೊಹ್ಲಿ ಅನುಪಸ್ಥಿತಿಯಲ್ಲಿ ತಂಡದ ನೇತೃತ್ವ ವಹಿಸಿದ ಹಂಗಾಮಿ ನಾಯಕ ಕೆ.ಎಲ್.ರಾಹುಲ್ ವಾಂಡರರ್ಸ್‌ ಸ್ಟೇಡಿಯಂನಲ್ಲಿ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ಆರಂಭಿಕ ಆಟಗಾರನಾಗಿ ಕಣಕ್ಕಿಳಿದ ರಾಹುಲ್ (50,133 ಎಸೆತ, 9 ಬೌಂಡರಿ) ತಂಡದ ಪರ ಅಗ್ರ ಸ್ಕೋರರ್ ಎನಿಸಿಕೊಂಡರು. ಇನಿಂಗ್ಸ್ ಅಂತ್ಯದಲ್ಲಿ ಆಲ್‌ರೌಂಡರ್ ಆರ್.ಅಶ್ವಿನ್(46, 50 ಎಸೆತ, 6 ಬೌಂಡರಿ)ನಿರ್ಣಾಯಕ ಸ್ಕೋರ್ ಗಳಿಸಿದರು. ಈ ಇಬ್ಬರನ್ನು ಹೊರತುಪಡಿಸಿ ಉಳಿದ ಆಟಗಾರರು ದಕ್ಷಿಣ ಆಫ್ರಿಕಾದ ಕರಾರುವಾಕ್ ದಾಳಿಯನ್ನು ದಿಟ್ಟವಾಗಿ ಎದುರಿಸುವಲ್ಲಿ ಎಡವಿದರು.

ರಾಹುಲ್‌ರೊಂದಿಗೆ ಇನಿಂಗ್ಸ್ ಆರಂಭಿಸಿದ ಮಯಾಂಕ್ ಅಗರ್ವಾಲ್(26), ಕೊಹ್ಲಿ ಬದಲಿಗೆ ಆಡುವ 11ರ ಬಳಗಕ್ಕೆ ಆಯ್ಕೆಯಾದ ಹನುಮ ವಿಹಾರಿ (20),ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್(17)ಹಾಗೂ ಉಪ ನಾಯಕ ಜಸ್‌ಪ್ರೀತ್ ಬುಮ್ರಾ(ಔಟಾಗದೆ 14) ಎರಡಂಕೆಯ ಸ್ಕೋರ್ ಗಳಿಸಿದರು. ಹಿರಿಯ ಬ್ಯಾಟರ್‌ಗಳಾದ ಚೇತೇಶ್ವರ ಪೂಜಾರ(3) ಹಾಗೂ ಅಜಿಂಕ್ಯ ರಹಾನೆ(0)ಮತ್ತೊಮ್ಮೆ ನಿರಾಶಾದಾಯಕ ಪ್ರದರ್ಶನ ನೀಡಿ ಭಾರತವನ್ನು ಸಂಕಷ್ಟಕ್ಕೆ ಸಿಲುಕಿಸಿದರು.

ಮಯಾಂಕ್, ಪೂಜಾರ ಹಾಗೂ ರಹಾನೆ ಬೆನ್ನುಬೆನ್ನಿಗೆ ಔಟಾದಾಗ ಭಾರತದ ಸ್ಕೋರ್ 49ಕ್ಕೆ3. ಆಗ ರಾಹುಲ್ ಹಾಗೂ ಹನುಮ ವಿಹಾರಿ 4ನೇ ವಿಕೆಟ್‌ಗೆ 42 ರನ್ ಜೊತೆಯಾಟ ನಡೆಸಿದರು. ಇದು ಭಾರತದ ಇನಿಂಗ್ಸ್ ನ ಗರಿಷ್ಠ ಜೊತೆಯಾಟ ಎನಿಸಿಕೊಂಡಿತು.

ಭಾರತವು ಟೀ ವಿರಾಮದ ವೇಳೆಗೆ 5 ವಿಕೆಟ್‌ಗಳ ನಷ್ಟಕ್ಕೆ 146 ರನ್ ಗಳಿಸಿತ್ತು. ಆದರೆ, ದಿನದ ಕೊನೆಯ ಅವಧಿಯಲ್ಲಿ ಉಳಿದ 5 ವಿಕೆಟ್‌ಗಳನ್ನು ಕಳೆದುಕೊಂಡಿತು. ಆತಿಥೇಯರ ಬೌಲಿಂಗ್ ವಿಭಾಗದಲ್ಲಿ ಎಡಗೈ ವೇಗದ ಬೌಲರ್ ಮಾರ್ಕೊ ಜಾನ್ಸನ್(4-31)ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದರು. ರಬಾಡ(3-64) ಹಾಗೂ ಒಲಿವಿಯರ್(3-64)ತಲಾ ಮೂರು ವಿಕೆಟ್‌ಗಳನ್ನು ಪಡೆದು ಭಾರತದ ಇನಿಂಗ್ಸ್ 202 ರನ್‌ಗೆ ಕೊನೆಗೊಳ್ಳಲು ಕಾರಣರಾದರು.

ದಕ್ಷಿಣ ಆಫ್ರಿಕಾ 35/1

ಭಾರತವನ್ನು 202 ರನ್‌ಗೆ ನಿಯಂತ್ರಿಸಿದ ದಕ್ಷಿಣ ಆಫ್ರಿಕಾ ಮೊದಲ ದಿನದಾಟದಂತ್ಯಕ್ಕೆ 18 ಓವರ್‌ಗಳಲ್ಲಿ 1 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದೆ. ಆರಂಭಿಕ ಬ್ಯಾಟರ್ ಹಾಗೂ ನಾಯಕ ಡೀನ್ ಎಲ್ಗರ್(11 ರನ್,57 ಎಸೆತ)ಹಾಗೂ ಕೀಗನ್ ಪೀಟರ್ಸನ್(14 ರನ್,39 ಎಸೆತ) ಕ್ರೀಸ್ ಕಾಯ್ದುಕೊಂಡಿದ್ದಾರೆ. ಏಡೆನ್ ಮರ್ಕ್ರಮ್(7) ಮುಹಮ್ಮದ್ ಶಮಿ(1-15) ಬೀಸಿದ ಎಲ್ಬಿಡಬ್ಲು ಬಲೆಗೆ ಬಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News