ಮಂಗಳೂರು ವಿವಿ ಪರೀಕ್ಷಾ ಫಲಿತಾಂಶದ ಬಗ್ಗೆ ಗೊಂದಲ; ಸ್ಪಷ್ಟನೆ ನೀಡಲು ಸಿಂಡಿಕೇಟ್ ಸದಸ್ಯರ ಆಗ್ರಹ
ಮಂಗಳೂರು : ಮಂಗಳೂರು ವಿವಿಯ ಪರೀಕ್ಷಾ ಫಲಿತಾಂಶದ ಬಗ್ಗೆ ಗೊಂದಲಮಯ ವರದಿಗಳು ಮಾಧ್ಯಮ ಗಳಲ್ಲಿ ಪ್ರಕಟವಾಗುತ್ತಿದ್ದು, ಈ ಬಗ್ಗೆ ಪರೀಕ್ಷಾಂಗ ಕುಲಸಚಿವರು ಸ್ಪಷ್ಟನೆ ನೀಡಬೇಕು ಎಂದು ಸಿಂಡಿಕೇಟ್ ಸದಸ್ಯರು ಮಂಗಳೂರು ವಿವಿ ಕುಲಪತಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
ಪರೀಕ್ಷೆಯ ಫಲಿತಾಂಶಕ್ಕೆ ಇದಕ್ಕೆ ಸಂಬಂಧಿಸಿದಂತೆ ಡಿ.20ರಂದು ನಡೆದ ಸಿಂಡಿಕೇಟ್ ಸಭೆಯಲ್ಲಿ ಸುದೀರ್ಘವಾದ ಚರ್ಚೆಗಳು ನಡೆದಿದೆ. Mulinx ಸಾಫ್ಟ್‌ವೇರನ್ನು ಮುಂದಿನ ದಿನಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ವಿದ್ಯಾರ್ಥಿಗಳ ಪರೀಕ್ಷಾ ಫಲಿತಾಂಶ ಪ್ರಕಟಿಸಲು ಮುಂದುವರಿಸುವಂತೆ ಅಭಿಪ್ರಾಯ ವ್ಯಕ್ತಪಡಿಸಿ ನಿರ್ಣಯಿಸಲಾಗಿತ್ತು. ಆದರೆ ಕೆಲವು ಮಾಧ್ಯಮಗಳಲ್ಲಿ ಬಂದಿರುವ ವರದಿಯ ಬಗ್ಗೆ ಸಾರ್ವಜನಿಕ ವಲಯದಲ್ಲಿ ಗೊಂದಲಗಳು ನಿರ್ಮಾಣವಾಗಿದೆ. ಹಾಗಾಗಿ ಪರೀಕ್ಷಾ ಫಲಿತಾಂಶ ಪ್ರಕಟಿಸುವಲ್ಲಿ ತಪ್ಪುಗಳು ನಡೆದಿದ್ದಲ್ಲಿ ತಕ್ಷಣ ಪರೀಕ್ಷಾಂಗ ಕುಲಸಚಿವರು ಮಾಧ್ಯಮಗಳ ಮೂಲಕ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳ ಗೊಂದಲ ನಿವಾರಿಸಬೇಕೆಂದು ಸಿಂಡಿಕೇಟ್ ಸದಸ್ಯರಾದ ರಮೇಶ್ ಕೆ., ಪ್ರೊ. ಕರುಣಾಕರ್ ಕೋಟೆಕಾರ್, ರವಿಚಂದ್ರ ಪಿ.ಎಂ., ಮೋಹನ ಪಡಿವಾಲ್, ವಿವೇಕಾನಂದ ಪಣಿಯಾಲ್, ಡಾ. ಪಾರ್ವತಿ ಅಪ್ಪಯ್ಯ, ಡಾ. ಎಂ.ಎಸ್ ತಲ್ವಾರ್, ರವೀಂದ್ರನಾಥ್ ರೈ ಆಗ್ರಸಿದ್ದಾರೆ.