×
Ad

ಸೋದ್ 5 ರಿಯಾಲಿಟಿ ಶೋ: ವೈಭವ್ ಕಾಮತ್- ಸೋನಲ್ ಮೊಂತೇರೊ ಆಯ್ಕೆ

Update: 2022-01-03 20:07 IST

ಮಂಗಳೂರು : ಮಾತೃಭಾಷೆಗೆ ಕೊಡುಗೆ ನೀಡಿದ ಯುವ ಪ್ರತಿಭೆಗಳನ್ನು ಗುರುತಿಸುವ ಹಾಗೂ ಹಿರಿಯರನ್ನು ಗೌರವಿಸುವ ಕಾರ್ಯ ಉತ್ತಮವಾದುದು. ಒಂದು ಭಾಷೆ ಕಲಿಯುವಾಗ ಆ ಜನರ ಸಂಸ್ಕೃತಿ ಮತ್ತು ಯೋಚನಾ ರೀತಿಯೂ ತಿಳಿಯುತ್ತದೆ. ಭಾಷೆಯ ಮುಖಾಂತರ ಮನುಷ್ಯನ ವ್ಯಕ್ತಿತ್ವದ ಅರಿವಾಗುತ್ತದೆ. ಭಾಷೆಯ ಕೆಲಸದಲ್ಲಿ, ಪ್ರತಿಭೆಗಳ ಹುಡುಕಾಟದಲ್ಲಿ ಮಾಂಡ್ ಸೊಭಾಣ್ ಕಾರ್ಯ ಪ್ರಶಂಸನೀಯ ಎಂದು ಮಂಗಳೂರು ಬಿಷಪ್ ಅ.ವಂ.ಡಾ. ಪೀಟರ್ ಪೌಲ್ ಸಲ್ಡಾನ್ಹಾ ಅಭಿಪ್ರಾಯಪಟ್ಟರು.

ನಗರದ ಕಲಾಂಗಣದಲ್ಲಿ ರವಿವಾರ ನಡೆದ ಕಾರ್ಯಕ್ರಮದಲ್ಲಿ ಕೊಂಕಣಿಯ ಪ್ರಖ್ಯಾತ ರಿಯಾಲಿಟಿ ಶೋ ‘ಎಂಸಿಸಿ ಬ್ಯಾಂಕ್ ಲಿ. ಸೋದ್ 5 ಮ್ಯಾಂಗೋವಾ’ದ ವಿಜೇತರನ್ನು ಗೌರವಿಸಿ ಅವರು ಮಾತನಾಡುತ್ತಿದ್ದರು.

ರಾಯ್ ಕೊಗುಳ್ (ರಾಜ ಕೋಗಿಲೆ) ಆಗಿ ಆಯ್ಕೆಯಾದ ವೈಭವ್ ವಿಶ್ವಾಸ್ ಕಾಮತ್ ಗೋವಾ ಹಾಗೂ ರಾಣಿ ಕೊಗುಳ್ (ರಾಣಿ ಕೋಗಿಲೆ) ಆಗಿ ಆಯ್ಕೆಯಾದ ಸೋನಲ್ ಆಗ್ನೆಸ್ ಮೊಂತೇರೊ ಮಂಗಳೂರು ಅವರಿಗೆ ತಲಾ 50,000 ರೂ. ನಗದು ನೀಡಿ, ಕಿರೀಟ ತೊಡಿಸಿ ಹಾಗೂ ಸ್ಮರಣಿಕೆ ನೀಡಿ ಮಂಗಳೂರು ಬಿಷಪ್ ಹಾಗೂ ಮರಾಠಿ ಸಿನೆಮ ಕ್ಷೇತ್ರದ ಸಂಗೀತ ನಿರ್ದೇಶಕ ಅಶೋಕ್ ಪಾತ್ಕಿ ಗೌರವಿಸಿದರು.

ಈ ಸಂದರ್ಭ ವಿಜೇತರಿಗೆ ಎಸ್‌ಕೆಎ ಲಂಡನ್ ವತಿಯಿಂದ ಕಾರ್ಯಕ್ರಮ ನೀಡಲು ಅವಕಾಶ ಲಭಿಸಿರುವುದನ್ನು ಘೋಷಿಸಲಾಯಿತು. ಅಲ್ಲದೆ ಗೋವಾದ ಗಾಯನ ಕೋಗಿಲೆ ಲೋರ್ನಾ ಕೊರ್ಡೆರೊರಿಗೆ ಜೀವಮಾನ ಸಾಧನೆ ಪುರಸ್ಕಾರವನ್ನು ಬಿಷಪ್ ಘೋಷಿಸಿದರು. ವೇದಿಕೆಯಲ್ಲಿ ಅತಿಥಿಗಳಾಗಿ ಎಂಸಿಸಿ ಬ್ಯಾಂಕ್ ಅಧ್ಯಕ್ಷ ಅನಿಲ್ ಲೋಬೊ, ದಾಯ್ಜಿವರ್ಲ್ಡ್ ಆಡಳಿತ ನಿರ್ದೇಶಕ ವಾಲ್ಟರ್ ಡಿಸೋಜ, ಗೋವನ್ ವರ್ಲ್ಡ್ ಡಾಟ್.ಕಾಮ್ ಇದರ ನಿರ್ದೇಶಕ ಜೊಯ್ ಫೆರ್ನಾಂಡಿಸ್, ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ಮತ್ತು ಅಧ್ಯಕ್ಷ ಲುವಿ ಪಿಂಟೊ, ಮಂಗಳೂರು ಧರ್ಮಪ್ರಾಂತದ ಸಾರ್ವಜನಿಕ ಸಂಪರ್ಕಾಧಿಕಾರಿ ರಾಯ್ ಕ್ಯಾಸ್ತೆಲಿನೊ ಉಪಸ್ಥಿತರಿದ್ದರು.

ಗಾಯಕಿ ಸೋನಿಯಾ ಶಿರ್ಸಾಟ್ ಗೋವಾ, ಸಂಗೀತಗಾರರಾದ ಕ್ಯಾಜಿಟನ್ ಡಾಯಸ್ ಬೆಂಗಳೂರು ಹಾಗೂ ನಿತಿನ್ ಕೂಟೂಂಗಳ್ ಕೇರಳ ತೀರ್ಪುದಾರರಾಗಿ ಸಹಕರಿಸಿದರು.

ಕಾರ್ಯಕ್ರಮದಲ್ಲಿ ಬಸ್ತಿ ವಾಮನ್ ಶೆಣೈ ಅವರಿಗೆ ಸಂತಾಪ ಸೂಚಿಸಲಾಯಿತು. ಅರುಣ್ ರಾಜ್ ರಾಡ್ರಿಗಸ್, ಡಾ.ಮೋನಾ ಮೆಂಡೊನ್ಸಾ, ಪ್ರಿಥುಮಾ ಮೊಂತೆರೊ ಕಾರ್ಯಕ್ರಮಗಳನ್ನು ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News