ಕಡಬ - ಸುಳ್ಯ ವಿದ್ಯುತ್ ಕಾಮಗಾರಿಗಳ ಉದ್ಘಾಟನೆ
ಮಂಗಳೂರು : ರೈತರಿಗೆ, ಗ್ರಾಹಕರಿಗೆ, ಉದ್ಯಮಗಳಿಗೆ ಹಾಗೂ ಕಾರ್ಖಾನೆಗಳಿಗೆ ಇಂಧನ ಇಲಾಖೆಯಿಂದ ಉತ್ತಮ ರೀತಿಯ ಸೌಲಭ್ಯ, ಸಹಕಾರ ನೀಡುವಂತಹ ಮೂರು ಆಯಾಮಗಳನ್ನು ಮುಂದಿನ ದಿನಗಳಲ್ಲಿ ರೂಪಿಸಲಾಗುತ್ತಿದೆ ಎಂದು ರಾಜ್ಯ ಇಂಧನ, ಸಚಿವ ಸುನೀಲ್ ಕುಮಾರ್ ವಿಶ್ವಾಸ ವ್ಯಕ್ತಪಡಿಸಿದರು.
ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪೆನಿ ನಿಯಮಿತ ವತಿಯಿಂದ ಗುಣಮಟ್ಟದ ವಿದ್ಯುತ್ ಸರಬರಾಜಿಗಾಗಿ ಕಡಬ ಮತ್ತು ಸುಳ್ಯ ತಾಲೂಕಿನಲ್ಲಿ ಸಿದ್ಧಗೊಂಡಿರುವ ಭೂಗತ ಕೇಬಲ್ ಮಾರ್ಗ ಮತ್ತು 8 ಮೆಗಾ ವೋಲ್ಟ್ ಪರಿವರ್ತಕ, 11 ಕೆ.ವಿ. ಫೀಡರ್‌ನ್ನು ಸುಬ್ರಹ್ಮಣ್ಯ ಸಬ್ಸ್ಟೇಷನ್‌ನಲ್ಲಿ ಸೋಮವಾರ ಲೋಕಾರ್ಪಣೆಗೊಳಿಸಿದ ಬಳಿಕ ಸುಬ್ರಹ್ಮಣ್ಯದ ವಲ್ಲೀಶಾ ಸಭಾಭವನದಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅರಣ್ಯ ಪ್ರದೇಶಗಳಿರುವಲ್ಲಿ ಇಂಧನ ಇಲಾಖೆಯ ಅಭಿವೃದ್ಧಿ ಕೆಲಸಗಳನ್ನು ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆದರೆ ಇಂದು ರಾಜ್ಯ, ಕೇಂದ್ರ ಸರಕಾರದ ಪ್ರಯತ್ನದಿಂದ ಅರಣ್ಯ ಇಲಾಖೆಯಲ್ಲಿ ಸಣ್ಣ ಬದಲಾವಣೆಗಳನ್ನು ಮಾಡಿಕೊಂಡು ಅಭಿವೃದ್ಧಿ ಪರ ಕೆಲಸಗಳನ್ನು ಮಾಡುತ್ತಿದೆ ಎಂದು ಸಚಿವ ಸುನೀಲ್ ಕುಮಾರ್ ಹೇಳಿದರು.
ಗುತ್ತಿಗಾರಿನಿಂದ ಸುಬ್ರಹ್ಮಣ್ಯಕ್ಕೆ 11 ಕಿ.ಮೀ. ಭೂಗತ ಮಾರ್ಗ ಕಾಮಗಾರಿ ಜೆಲ್ಲೆಯ ಮೊದಲ ಕಾಮಗಾರಿ ಇದಾಗಿದೆ. ಬೆಳಕು ಯೋಜನೆ ಮೂಲಕ ದ.ಕ.ಜಿಲ್ಲೆಯಲ್ಲಿ ಎರಡುವರೆ ಸಾವಿರ ವಿದ್ಯುತ್ ರಹಿತರ ಪಟ್ಟಿಯನ್ನು ಮಾಡಲಾಗಿದ್ದು, 1700 ಜನರಿಗೆ ಈ ಯೋಜನೆಯಡಿ ಈಗಾಗಲೇ ವಿದ್ಯುತ್ ಸಂಪರ್ಕವನ್ನು ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಕಳೆದ ಒಂದುವರೆ ತಿಂಗಳಲ್ಲಿ ಇಪ್ಪತ್ತು ಸಾವಿರ ಟ್ರಾನ್ಸ್ಫಾರ್ಮರ್‌ಗಳನ್ನು ಹಾಳಾದ 24 ಗಂಟೆಗಳಲ್ಲಿ ಬದಲಾಯಿಸಲಾಗಿದೆ. ಕೇಂದ್ರ ಸರಕಾರದ ಆರ್‌ಡಿಎಸ್‌ಎಸ್ ಯೋಜನೆ ಮೂಲಕ ಮೆಸ್ಕಾಂನಲ್ಲಿ 1,100 ಕೋ.ರೂ. ಅನುದಾನ ಬರಲಿದ್ದು, 290 ಕೋ.ರೂ. ಮಂಗಳೂರಿನಲ್ಲಿ ಯೋಜನೆ ರೂಪಿಸಲಾಗಿದೆ. ಸುಬ್ರಹ್ಮಣ್ಯಕ್ಕೆ ಅಂಡರ್ ಗ್ರೌಂಡ್ ಕೇಬಲ್ ವ್ಯವಸ್ಥೆ ಕಲ್ಪಿಸುವ ಸಲುವಾಗಿ ಈಗಾಗಲೇ ನೀಲಿ ನಕಾಶೆಯನ್ನು ತಯಾರಿಸಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿಲಾಗಿದೆ ಎಂದರು.
ರಾಜ್ಯ ಮೀನುಗಾರಿಕೆ, ಬಂದರು ಮತ್ತು ಒಳನಾಡು ಜಲಸಾರಿಗೆ ಸಚಿವ ಎಸ್.ಅಂಗಾರ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಶ್ರೀ ನರಸಿಂಹ ಸ್ವಾಮಿ ಸುಬ್ರಹ್ಮಣ್ಯ ಮಠದ ಮಠದೀಶ ವಿದ್ಯಾಪ್ರಸನ್ನ ಸ್ವಾಮೀಜಿ ಆಶೀರ್ವಚನ ನೀಡಿದರು.
ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಬೋಜೆಗೌಡ, ದಿ.ಮೈಸೂರ್ ಇಲೆಕ್ಟ್ರಿಕಲ್ ಇಂಡಸ್ಟ್ರೀಸ್‌ನ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್, ಸುಬ್ರಹ್ಮಣ್ಯ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಮೋಹನ್‌ರಾಂ ಸುಳ್ಳಿ, ಸುಬ್ರಹ್ಮಣ್ಯ ಗಾಪಂ ಅಧ್ಯಕ್ಷೆ ಲಲಿತಾ ಜಿ., ಉಪಾಧ್ಯಕ್ಷೆ ಸವಿತಾ ಭಟ್, ಮೆಸ್ಕಾಂ ನಿರ್ದೇಶಕ ಕಿಶೋರ್ ಬಿ.ಆರ್., ಮುಖ್ಯ ಆರ್ಥಿಕ ಅಧಿಕಾರಿ ಗಂಗಾಧರ್ ಬಿ.ವಿ., ಮುಖ್ಯ ಇಂಜಿನಿಯರ್ ಮಂಜಪ್ಪ, ಕಾರ್ಯನಿರ್ವಹಕ ಇಂಜಿನಿಯರ್ ಉಪಸ್ಥಿತರಿದ್ದರು.
ಮೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್ ಕುಮಾರ್ ಮಿಶ್ರಾ ಸ್ವಾಗತಿಸಿದರು. ನಿರ್ದೇಶಕಿ ಡಿ.ಪದ್ಮಾವತಿ ವಂದಿಸಿದರು. ವಿಶ್ವನಾಥ ನಡುತೋಟ ಕಾರ್ಯಕ್ರಮ ನಿರೂಪಿಸಿದರು.