ಮಂಗಳೂರು ವಿವಿ ಪರೀಕ್ಷಾ ಫಲಿತಾಂಶದಲ್ಲಿ ಗೊಂದಲವಿಲ್ಲ; ಪರೀಕ್ಷಾಂಗ ಕುಲ ಸಚಿವರ ಸ್ಪಷ್ಟನೆ
ಮಂಗಳೂರು, ಜ.3: ಮಂಗಳೂರು ವಿಶ್ವದ್ಯಾನಿಲಯವು ಕಳೆದ ಆಗಸ್ಟ್-ಸೆಪ್ಟೆಂಬರ್ ಹಾಗೂ ಸೆಪ್ಟಂಬರ್-ಅಕ್ಟೋಬರ್‌ನಲ್ಲಿ ನಡೆಸಿದ ಪದವಿ ಪರೀಕ್ಷೆಗಳ ಫಲಿತಾಂಶಗಳಲ್ಲಿ ಯಾವುದೇ ಗೊಂದಲವಿಲ್ಲ ಎಂದು ಮಂಗಳೂರು ವಿವಿ ಪರೀಕ್ಷಾಂಗ ಕುಲ ಸಚಿವರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೆಲವು ಪತ್ರಿಕೆಗಳಲ್ಲಿ ಫಲಿತಾಂಶದ ಕುರಿತು ಏಕಪಕ್ಷೀಯವಾದ ಅಭಿಪ್ರಾಯಗಳನ್ನು ಒಳಗೊಂಡ ವರದಿಗಳು ಪ್ರಕಟವಾಗಿದೆ. ಇದರಿಂದ ವಿದ್ಯಾರ್ಥಿಗಳು ಹಾಗೂ ಪೋಷಕರಲ್ಲಿ ಗೊಂದಲ ಉಂಟಾಗಿದೆ. ಮಂಗಳೂರು ವಿವಿಯು MuLinx ಎಂಬ Open Source Software ಬಳಸಿಕೊಂಡು ಅತ್ಯಂತ ಸಂಕಷ್ಟದ ಪರಿಸ್ಥಿತಿಯಲ್ಲಿ ಸವಾಲುಗಳನ್ನು ಎದುರಿಸಿ ಎಲ್ಲರ ಬೆಂಬಲದೊಂದಿಗೆ ಪರೀಕ್ಷೆಗಳನ್ನು ನಡೆಸಿ ಫಲಿತಾಂಶ ಪ್ರಕಟಿಸಿದೆ.
ಕೋವಿಡ್ ಹಿನ್ನಲೆಯಲ್ಲಿ ನಿರಂತರವಾಗಿ ಪರೀಕ್ಷೆಗಳನ್ನು ನಡೆಸಿರುವುದರಿಂದ ಹಾಗೂ ಹೊಸ ಸಾಫ್ಟ್‌ವೇರ್‌ನ ಬಳಕೆಯಲ್ಲಿ ಮತ್ತು ಈ ಹಿಂದಿನ ಪರೀಕ್ಷಾ ದತ್ತಾಂಶಗಳು ಹೊಸ ಸಾಫ್ಟ್‌ವೇರ್‌ಗೆ ಹೊಂದಾಣಿಕೆಯಾಗುವ ಹಂತದ ಪ್ರಕ್ರಿಯೆಯಿಂದಾಗಿ ಅಧಿಕ ಸಮಯಾವಕಾಶದ ಅಗತ್ಯವಿದ್ದ ಕಾರಣ ಫಲಿತಾಂಶ ಪ್ರಕಟನೆಯು ವಿಳಂಬವಾಗಿರುತ್ತದೆ ಎಂದು ಕುಲಸಚಿವರು ಸ್ಪಷ್ಟಪಡಿಸಿದ್ದಾರೆ.
ವಿದ್ಯಾರ್ಥಿಗಳ ಫಲಿತಾಂಶವನ್ನು ಸರಿಯಾಗಿ ಪರಿಶೀಲಿಸಿ ನೀಡುವುದು ವಿವಿಯ ಜವಾಬ್ದಾರಿಯಾದ ಕಾರಣ ಗೌಪ್ಯತೆ ಕಾಪಾಡುವ ಎಲ್ಲಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಯಾವ ಕಾರಣಕ್ಕೂ ವಿದ್ಯಾರ್ಥಿಗಳು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇರುವುದಿಲ್ಲ. ವಿದ್ಯಾರ್ಥಿಗಳಿಗೆ ಪ್ರಕಟವಾದ ಫಲಿತಾಂಶದ ಬಗ್ಗೆ ಗೊಂದಲವಿದ್ದಲ್ಲಿ ಉತ್ತರ ಪತ್ರಿಕೆಗಳ ವೈಯಕ್ತಿಕ ವೀಕ್ಷಣೆಗೆ ನಿಯಮಾನುಸಾರ ಅವಕಾಶ ಕಲ್ಪಿಸಲಾಗಿದೆ. ವಿದ್ಯಾರ್ಥಿಗಳು ತಮ್ಮ ಸಮಸ್ಯೆಗಳನ್ನು ಕಾಲೇಜು ಪ್ರಾಂಶುಪಾಲರ ಮೂಲಕ ಪರೀಕ್ಷಾಂಗ ಕುಲಸಚಿವರ ಕಚೇರಿಗೆ ಪತ್ರ ಬರೆದು ಪರಿಹರಿಸಿಕೊಳ್ಳಬಹುದು ಎಂದು ಸ್ಪಷ್ಟಪಡಿಸಿದ್ದಾರೆ.