ರಾಜಕೀಯ ಬಿಕ್ಕಟ್ಟಿನ ನಡುವೆ ರಾಜೀನಾಮೆ ಘೋಷಿಸಿದ ಸುಡಾನ್ ಪ್ರಧಾನಿ

Update: 2022-01-03 16:08 GMT
ಅಬ್ದಲ್ಲಾ ಹಮ್ದೋಕ್(photo:twitter/@SudanPMHamdok)
 

ಖಾರ್ಟಮ್, ಜ.3: ಸುಡಾನ್‌ನಲ್ಲಿ ಸೇನೆಯ ಕ್ಷಿಪ್ರಕ್ರಾಂತಿಯನ್ನು ವಿರೋಧಿಸಿ ನಡೆಯುತ್ತಿರುವ ವ್ಯಾಪಕ ಪ್ರತಿಭಟನೆಯಿಂದಾಗಿ ರಾಜಕೀಯ ಬಿಕ್ಕಟ್ಟು ತೀವ್ರಗೊಂಡಿರುವ ಮಧ್ಯೆ ಪ್ರಧಾನಿ ಅಬ್ದಲ್ಲಾ ಹಮ್ದೋಕ್ ರಾಜೀನಾಮೆ ಘೋಷಿಸಿದ್ದಾರೆ ಎಂದು ವರದಿಯಾಗಿದೆ.

ನನಗೆ ನೀಡಲಾಗಿರುವ ಜವಾಬ್ದಾರಿಗಳನ್ನು ಹಿಂತಿರುಗಿಸಲು ಮತ್ತು ರಾಜೀನಾಮೆಯನ್ನು ಘೋಷಿಸಲು ನಿರ್ಧರಿಸಿದ್ದೇನೆ. ಇದರಿಂದ ಇನ್ನೊಬ್ಬ ವ್ಯಕ್ತಿಗೆ ದೇಶವನ್ನು ಮುನ್ನಡೆಸುವ ಮತ್ತು ನಾಗರಿಕ ಪ್ರಜಾಪ್ರಭುತ್ವ ದೇಶವಾಗಿ ಪರಿವರ್ತನೆಯಾಗುವುದನ್ನು ಪೂರ್ಣಗೊಳಿಸುವ ಅವಕಾಶ ಸಿಗಲಿದೆ ಎಂದು ರವಿವಾರ ದೇಶವನ್ನುದ್ದೇಶಿಸಿ ಮಾಡಿದ ಭಾಷಣದಲ್ಲಿ ಹಮ್ದೋಕ್ ಹೇಳಿದ್ದಾರೆ. ತಮ್ಮ ಉತ್ತರಾಧಿಕಾರಿಯನ್ನು ಅವರು ಹೆಸರಿಸಲಿಲ್ಲ.

ಅಂತರವನ್ನು ಕಿರಿದಾಗಿಸಲು ಮತ್ತು ರಾಜಕೀಯ ಪಕ್ಷಗಳ ನಡುವಿನ ವಿವಾದವನ್ನು ಇತ್ಯರ್ಥಗೊಳಿಸುವ ತನ್ನ ಪ್ರಯತ್ನ ವಿಫಲವಾಗಿದೆ ಎಂದರು. ‘ದೇಶ ದುರಂತದೆಡೆಗೆ ಜಾರದಂತೆ ನನ್ನಿಂದ ಸಾಧ್ಯವಾದಷ್ಟು ಪ್ರಯತ್ನಿಸಿದೆ. ಈಗ ನಮ್ಮ ದೇಶವು ಅಪಾಯಕಾರಿ ತಿರುವಿನಲ್ಲಿದೆ. ಅದನ್ನು ತುರ್ತಾಗಿ ಸರಿಪಡಿಸದಿದ್ದರೆ ದೇಶದ ಅಸ್ತಿತ್ವಕ್ಕೇ ಅಪಾಯ ಎದುರಾಗಬಹುದು’ ಎಂದು ಹಮ್ದೋಕ್ ಹೇಳಿದರು.

ವಿಶ್ವಸಂಸ್ಥೆಯ ಮಾಜಿ ಅಧಿಕಾರಿಯಾಗಿರುವ ಹಮ್ದೋಕ್ ಸುಡಾನ್‌ನ ಪರಿವರ್ತನಾ ಸರಕಾರದ ನಾಗರಿಕ ಮುಖವಾಗಿದ್ದರು. ಅಕ್ಟೋಬರ್‌ನಲ್ಲಿ ನಡೆದ ಕ್ಷಿಪ್ರಕ್ರಾಂತಿಯಲ್ಲಿ ಸೇನೆ ಅಧಿಕಾರ ಕೈವಶ ಮಾಡಿಕೊಂಡ ಬಳಿಕದ ಒಪ್ಪಂದದಂತೆ ನವೆಂಬರ್‌ನಲ್ಲಿ ಹಮ್ದೋಕ್‌ರನ್ನು ಪ್ರಧಾನಿಯನ್ನಾಗಿ ಮರು ನಿಯೋಜಿಸಲಾಗಿತ್ತು. ಆದರೆ ಸಚಿವ ಸಂಪುಟ ರಚಿಸಲು ಅವರು ವಿಫಲವಾಗಿದ್ದರು. ಭದ್ರತೆ ಮತ್ತು ಆರ್ಥಿಕ ಸಮಸ್ಯೆ ಬಿಗಡಾಯಿಸಿರುವ ಸಂದರ್ಭದಲ್ಲೇ ಪ್ರಧಾನಿ ರಾಜೀನಾಮೆ ನೀಡಿರುವುದರಿಂದ ದೇಶದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ಮುಂದುವರಿಯುವ ಸಾಧ್ಯತೆ ನಿಚ್ಚಳವಾಗಿದೆ ಎಂದು ಮಾಧ್ಯಮಗಳು ಹೇಳಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News