ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ: ವಿನಯಕುಮಾರ್ ಸೊರಕೆ ಸವಾಲು

Update: 2022-01-03 17:13 GMT

ಕಾಪು : ನನ್ನ ಅವಧಿಯಲ್ಲಿ 150 ಕೋಟಿ  ರೂ. ಬಿಡುಗಡೆ ಆಗಿರುವುದು ಸುಳ್ಳು ಅಂತ ಶಾಸಕ ಲಾಲಾಜಿ ಮೆಂಡನ್ ಹಾಗೂ ಬಿಜೆಪಿ ಜಿಲ್ಲಾಧ್ಯಕ್ಷ ಕೊಯಿಲಾಡಿ ಸುರೇಶ್ ನಾಯಕ್ ಹೇಳುತಿದ್ದಾರೆ. ಧೈರ್ಯ ಇದ್ದರೆ ಬಹಿರಂಗ ಚರ್ಚೆಗೆ ಬನ್ನಿ ಎಂದು ಮಾಜಿ ಶಾಸಕ ವಿನಯಕುಮಾರ್ ಸೊರಕೆ ಅವರು ಸವಾಲು ಹಾಕಿದ್ದಾರೆ. 

ಕಾಪುವಿನ ಕಾಂಗ್ರೆಸ್ ಕಚೇರಿ ರಾಜೀವ್ ಭವನದಲ್ಲಿ ಸೋಮವಾರ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಿಜೆಪಿಗರು ಸುಳ್ಳನ್ನೇ ಬಂಡವಾಳವನ್ನಾಗಿ ಮಾಡಿ, ಸುಳ್ಳನ್ನು ಸತ್ಯವನ್ನಾಗಿ ಮಾಡಲು ನೋಡುತ್ತಿದೆ. 

ಕುಡಿಯುವ ನೀರಿನ ಯೋಜನೆಗೆ 61 ಕೋಟಿ ರೂ. ಮೀನು ಮಾರ್ಕೆಟ್, ಕಸ ವಿಲೇವರಿ, ಒಳಚರಂಡಿ, ರಸ್ತೆ ನಿರ್ಮಾಣ ಸಹಿತ ವಿವಿಧ ಯೋಜನೆಗಳಿಗೆ ಕಾಪು ಪುರಸಭೆಗೆ ಒಟ್ಟು 156 ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಈ ಬಗ್ಗೆ ಅವರು ಚರ್ಚೆಗೆ ಬರಲಿ. ದಾಖಲೆ ಸಮೇತ ನಾನು ನೀಡಲು ಸಿದ್ಧ. ಬಿಜೆಪಿಗರು ತಮ್ಮ ಅವಧಿಯಲ್ಲಿ ಅನುದಾನ ಬಿಡುಗಡೆಯ ಬಗ್ಗೆಯೂ ಸತ್ಯವನ್ನು ಹೇಳಲಿ ಎಂದು ಹೇಳಿದರು.

ಮತದಾರರ ಖರೀದಿ: ಗುತ್ತಿಗೆದಾರರಿಂದ ಶೇ. 40ರಷ್ಟು ಕಮೀಷನ್ ಪಡೆದು ಆ ಹಣವನ್ನು ಕಾಪು ಪುರಸಭಾ ಚುನಾವಣೆಗೆ ಬಳಸುವ ಮೂಲಕ ಮತದಾರರನ್ನು ಬಿಜೆಪಿಗರು ಖರೀದಿ ಮಾಡಿದ್ದಾರೆ. ಈ ಮೂಲಕ ಬಿಜೆಪಿ ಜಯಗಳಿಸಿದೆ ಎಂದರು.

ಕೆಲಸ ಆಗದಿದ್ದಲ್ಲಿ ಪ್ರತಿಭಟನೆ: ಬಿಜೆಪಿಯ ಪ್ರಣಾಳಿಕೆಯಂತೆ ಪ್ರಾಧಿಕಾರ ರದ್ದು ಮಾಡುವುದು. ತೆರಿಗೆ ಕಡಿಮೆ ಮಾಡುವುದು, 1100 ಕೋಟಿ ರೂ. ಯೋಜನೆಗಳಿಗೆ ಅನುದಾನ ನೀಡುವುದಾಗಿ ಹೇಳಿದ್ದಾರೆ. ಅದರಂತೆ ಕಾಪು ಪುರಸಭೆಯಲ್ಲಿ ಕೆಲಸ ಮಾಡಬೇಕು. ಈ ಕೆಲಸ ಮಾಡಲು ಕಾಲಾವಕಾಶ ನೀಡಲಾಗುವುದು. ಇಲ್ಲದಿದ್ದಲ್ಲಿ ಮುಂದಿನ ದಿನಗಳಲ್ಲಿ ಸಕ್ರಿಯವಾಗಿ ವಿರೋಧ ಪಕ್ಷದ ಕೆಲಸವನ್ನು ಮಾಡುವುದಾಗಿ ನುಡಿದರು. 

ಸಾಂಪ್ರದಾಯಿಕ ಮತ ವಿಭಜನೆ: ಕಾಂಗ್ರೆಸ್‍ನ ಸಾಂಪ್ರದಾಯಿಕ ಮತಗಳ ವಿಭಜನೆಯಿಂದ ಸೋಲಾಗಿದೆ. ಎಸ್‍ಡಿಪಿಐ ಪಕ್ಷವು ಬಿಜೆಪಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡು ಚುನಾವಣೆಯಲ್ಲಿ ಸ್ಪರ್ಧಿಸಿದೆ. ಇದಕ್ಕೆ ವಿಜಯೋತ್ಸವವನ್ನು ಕಾಪು ಪೇಟೆಯಲ್ಲಿ ಒಂದೇ ಸಮಯದಲ್ಲಿ ಒಂದೇ ಸ್ಥಳದಲ್ಲಿ ನಡೆಸಿರುವುದು ಸ್ಪಷ್ಟವಾಗುತ್ತದೆ.

ಮುಂದಿನ ದಿನಗಳಲ್ಲಿ ಈಗ ಆಗಿರುವ ಕೆಲವೊಂದು ಲೋಪದೋಷಗಳನ್ನು ಸರಿಪಡಿಸಿಕೊಂಡು ಮತ್ತೆ ಕಾಂಗ್ರೆಸ್ ಪಕ್ಷವು ಉತ್ತಮ ಸಾಧನೆ ಮಾಡಲಿದೆ ಎಂದು ಸೊರಕೆ ಹೇಳಿದರು.

ಬ್ಲಾಕ್ ಅಧ್ಯಕ್ಷ ನವೀನ್‍ ಚಂದ್ರ ಸುವರ್ಣ, ಪಕ್ಷದ ಮುಖಂಡರಾದ ದೇವಿಪ್ರಸಾದ್, ಹರೀಶ್ ನಾಯಕ್, ಶರ್ಫುದ್ದೀನ್, ಫಹಾದ್, ವಿಜೇತ ಅಭ್ಯರ್ಥಿಗಳಾದ ಮುಹಮ್ಮದ್ ಆಸೀಫ್, ಸತೀಶ್‍ ಚಂದ್ರ, ಲಕ್ಷ್ಮೀಶ ತಂತ್ರಿ, ಅಶೋಕ್ ನಾಯರಿ ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News