ಸಮವಸ್ತ್ರ ಬೇಕೇ ಬೇಡವೇ ಎಂಬುದನ್ನು ಸರಕಾರ ನಿರ್ಧರಿಸಲಿ : ಶಾಸಕ ರಘುಪತಿ ಭಟ್
ಉಡುಪಿ, ಜ.4: ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಸಮವಸ್ತ್ರ ಬೇಕೇ ಬೇಡವೇ ಎಂಬುದನ್ನು ಸರಕಾರ ನಿರ್ಧಾರ ಮಾಡಬೇಕು. ಸಮವಸ್ತ್ರ ಬೇಕಾದರೆ ಎಲ್ಲರು ಸಮಾನವಾದ ಸಮವಸ್ತ್ರ ಹಾಕಬೇಕು. ಈ ಬಗ್ಗೆ ಸರಕಾರ ಗಂಭೀರವಾಗಿ ತೆಗೆದುಕೊಳ್ಳಬೇಕು. ಈ ಸಂಬಂಧ ಸರಕಾರಕ್ಕೆ ಕಾಲೇಜು ಅಭಿವೃದ್ಧಿ ಸಮಿತಿಯಿಂದ ಪತ್ರ ಬರೆಯಲಾಗಿದೆ ಎಂದು ಸಮಿತಿ ಅಧ್ಯಕ್ಷ ಹಾಗೂ ಶಾಸಕ ಕೆ.ರಘುಪತಿ ಭಟ್ ತಿಳಿಸಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಮವಸ್ತ್ರ ಬೇಡದಿದ್ದರೆ ಕೇಸರಿ ಶಾಲು, ಜೀನ್ಸ್, ಸ್ಲೀವ್ ಲೇಸ್ ಯಾವ ರೀತಿಯ ಡ್ರೆಸ್ ಕೂಡ ಹಾಕಿಕೊಂಡು ಬರುವಂತಾಗಬೇಕು. ಇದರಿಂದ ಮಕ್ಕಳ ಭವಿಷ್ಯಕ್ಕೆ ತೊಂದರೆ ಬರುತ್ತದೆ. ಸಮವಸ್ತ್ರ ಇದ್ದರೆ ಶಿಸ್ತು, ಸಮಾನತೆ ಇರುತ್ತದೆ. ಶಿಕ್ಷಣದಲ್ಲಿ ಸಮಾನತೆ ಬೇಕು ಎಂದು ಅಂಬೇಡ್ಕರ್ ಹೇಳಿದ್ದಾರೆ.
ಆ ಸಮಾನತೆ ಅಂದರೆ ಇದುವೇ ಆಗಿದೆ. ಕೆಲವು ವಿದ್ಯಾರ್ಥಿಗಳು ಮಾತ್ರ ಸ್ಕಾರ್ಫ್ ಹಾಕಿ ಕೊಂಡು ಬರುವಾಗ ಮಕ್ಕಳ ಮಧ್ಯೆ ಧರ್ಮಬೇಧ ಬರುತ್ತದೆ ಎಂದರು. ಈ ಕಾಲೇಜಿನಲ್ಲಿ ಇತ್ತೀಚೆಗೆ ಕೆಲವು ದಿನಗಳಿಂದ ಸ್ಕಾರ್ಫ್ ವಿಚಾರದಲ್ಲಿ ಉದ್ದೇಶ ಪೂರ್ವಕವಾಗಿ ಗೊಂದಲವನ್ನು ಸೃಷ್ಟಿ ಮಾಡುತ್ತಿದ್ದಾರೆ. ಇಲ್ಲಿ 1985ರಿಂದಲೂ ಸಮವಸ್ತ್ರ ಕಡ್ಡಾಯವಾಗಿದೆ. ಈಗ ಕಾಲೇಜು ಪ್ರಾರಂಭವಾಗಿ ಆರು ತಿಂಗಳು ಆಗಿದೆ. ಕಳೆದ ಒಂದೂವರೆ ವರ್ಷಗಳಿಂದ ಸ್ಕಾರ್ಫ್ ಹಾಕದೆ ತರಗತಿಗೆ ಬರುತ್ತಿದ್ದ ವಿದ್ಯಾರ್ಥಿನಿಯರು, ಈಗ ಆರು ದಿನಗಳಿಂದ ಯಾರದೋ ಕುಮ್ಮಕ್ಕಿನಿಂದ ವಿವಾದ ಸೃಷ್ಠಿಸಿ ರಾಜಕೀಯಗೊಳಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ದೂರಿದರು.
ಈ ಪ್ರಕರಣದಲ್ಲಿ ಸರಕಾರ ಸಮವಸ್ತ್ರ ಬೇಕೆ ಬೇಡವೇ ಎಂಬುದನ್ನು ಸರಕಾರ ನಿರ್ಧಾರ ಮಾಡಬೇಕು. ಈ ಬಗ್ಗೆ ಸಮಿತಿಯಿಂದ ಪತ್ರ ಬರೆದಿದ್ದೇವೆ. ಸಮವಸ್ತ್ರ ಬೇಡ ಆದರೆ ಯಾವುದೂ ಬೇಡ. ದಿಲ್ಲಿ ಹೈಕೋರ್ಟ್ ಕೂಡ ಸ್ಕಾರ್ಫ್ ವಿಚಾರದಲ್ಲಿ ಸ್ಪಷ್ಟವಾದ ಆದೇಶ ನೀಡಿದೆ. ಆಯಾ ಶಿಕ್ಷಣ ಸಂಸ್ಥೆಗಳ ನಿಯಮ ವನ್ನು ಅಲ್ಪಸಂಖ್ಯಾತರು ಪಾಲಿಸಬೇಕು. ನಿಮ್ಮದೆ ಧರ್ಮದ ವೇಷಭೂಷಣ ಹಾಕಿ ಕೊಳ್ಳಬೇಕಾದರೆ ಅಲ್ಪಸಂಖ್ಯಾತರ ಶಿಕ್ಷಣ ಸಂಸ್ಥೆಗಳಿಗೆ ಹೋಗಬಹುದು ಎಂಬುದಾಗಿ ಹೈಟೋರ್ಟ್ ಆದೇಶದಲ್ಲಿ ಹೇಳಿದೆ ಎಂದು ರಘುಪತಿ ಭಟ್ ತಿಳಿಸಿದರು.