ಉಡುಪಿ ಪಿಪಿಸಿಯಲ್ಲಿ ಭೌತಶಾಸ್ತ್ರ ಪ್ರಾಯೋಗಿಕ ಕಾರ್ಯಕ್ರಮ
ಉಡುಪಿ, ಜ.4: ಉಡುಪಿ ಪೂರ್ಣ ಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ವತಿಯಿಂದ ವಿಜ್ಞಾನ ವಿಭಾಗದ ವಿದ್ಯಾರ್ಥಿಗಳಿಗಾಗಿ ಫಾರ್ ದ ಲವ್ ಆಫ್ ಫಿಸಿಕ್ಸ್ ಎಂಬ ಭೌತಶಾಸ್ತ್ರ ಪ್ರಾಯೋಗಿಕ ಕಾರ್ಯಕ್ರಮವನ್ನು ಇತ್ತೀಚೆಗೆ ಕಾಲೇಜಿ ನಲ್ಲಿ ಆಯೋಜಿಸಲಾಗಿತ್ತು.
ವಿಜ್ಞಾನದ ಅನೇಕ ವಿಭಾಗಗಳ 320 ವಿದ್ಯಾರ್ಥಿಗಳೊಂದಿಗೆ ಪದವಿ ಪೂರ್ವ ಕಾಲೇಜಿನ ಅಧ್ಯಾಪಕರು ಇದರಲ್ಲಿ ಪಾಲ್ಗೊಂಡಿದ್ದರು. ವಿಭಾಗದ ಪ್ರಾಧ್ಯಪಕ ಡಾ.ರಾಮು ಎಲ್. ಭೌತಶಾಸ್ತ್ರದಲ್ಲಿ ಉನ್ನತ ಶಿಕ್ಷಣದ ಬಗ್ಗೆ ವಿವರಿಸಿದರು. ವಿಭಾಗದ ಪ್ರಾಧ್ಯಪಕ ಅತುಲ್ ಭಟ್ ಭೌತಶಾಸ್ತ್ರದ ವಿವಿಧ ಪರಿ ಕಲ್ಪನೆಗಳನ್ನು ಪ್ರಾಯೋಗಿಕ ಪ್ರಾತ್ಯಕ್ಷಿಕೆಗಳೊಂದಿಗೆ ಸರಳವಾಗಿ ವಿವರಿಸಿದರು.
ಬೆಳಕು ಹಾಗೂ ವಿದ್ಯುತ್ಪ್ರಯೋಗಗಳ ಬಗ್ಗೆ ವಿಭಾಗದ ಅಧ್ಯಾಪಕರಾದ ಡಾ.ಬಿ.ಲಕ್ಷ್ಮೀಶ ರಾವ್, ದಿವ್ಯ ವಸಂತ ಕುಮಾರ್, ಚೈತ್ರ ಮಾಹಿತಿ ನೀಡಿದರು. ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವಿದ್ಯಾರ್ಥಿಗಳು ದೂರದರ್ಶಕದ ಮೂಲಕ ಸೌರಕಲೆಗಳನ್ನು ತೋರಿಸಿದರು.
ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀವಿಶ್ವಪ್ರಿಯತೀರ್ಥ ಸ್ವಾಮೀಜಿ, ಕಾಲೇಜಿನ ಉಪಪ್ರಾಂಶುಪಾಲ ಡಾ.ಪ್ರಕಾಶ್ ರಾವ್ ಉಪಸ್ಥಿತರಿದ್ದರು. ಭೌತ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಪ್ರತಿಭಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.