ಕಾಂಗ್ರೆಸ್ ನಿಂದ ಪ್ರಜಾಪ್ರಭುತ್ವದ ಕಗ್ಗೊಲೆ : ನಳಿನ್ ಕುಮಾರ್ ಆರೋಪ
ಪುತ್ತೂರು: ಕಾಂಗ್ರೆಸ್ ಪಕ್ಷ ನಿರಂತರ ಹಿಂದೂ ವಿರೋಧಿ ನೀತಿ ಅನುಸರಿಸುತ್ತಿದ್ದು, ಹಿಂದೂಪರ ಕಾನೂನು ಜಾರಿಗೆ ತಂದಾಗಲೆಲ್ಲಾ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದೆ. ಕಾಂಗ್ರೆಸ್ ಪ್ರಜಾಪ್ರಭುತ್ವದ ಕಗ್ಗೊಲೆ ನಡೆಸುತ್ತಿದೆ. ಕಾಂಗ್ರೆಸ್ ಗೆ ಸಂವಿಧಾನ, ಪ್ರಜಾಪ್ರಭುತ್ವದ ಮೇಲೆ ವಿಶ್ವಾಸವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.
ಅವರು ಮಂಗಳವಾರ ಪುತ್ತೂರಿನಲ್ಲಿ ಸುದ್ಧಿಗಾರರ ಜೊತೆ ಮಾತನಾಡಿ ರಾಜ್ಯದಲ್ಲಿ ಮತಾಂತರ ಕಾಯ್ದೆ ಜಾರಿಗೆ ತಂದಾಗಲೂ ಕಾಂಗ್ರೆಸ್ ವಿರೋಧಿಸಿತ್ತು. ಇದೀಗ ದೇವಸ್ಥಾನಗಳಿಗೆ ಸ್ವಾಯುತ್ತತೆ ನೀಡುವ ವಿಚಾರದಲ್ಲೂ ವಿರೋಧಿಸುತ್ತಿದೆ. ಕಾಂಗ್ರೆಸ್ ಗೆ ಹಿಂದೂಗಳ ಮತ ಬೇಕೇ, ಬೇಡವೇ ಎನ್ನುವುದನ್ನು ಜನತೆಯ ಮುಂದೆ ಸ್ಪಷ್ಟಪಡಿಸಬೇಕು. ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಮಯದಲ್ಲಿ ಟಿಪ್ಪು ಜಯಂತಿಯನ್ನು ಯಾರ ಸಂತೃಪ್ತಿಗಾಗಿ, ಶಾದಿ ಭಾಗ್ಯ ಯಾರನ್ನು ಓಲೈಸಲು ತಂದಿರಿ ಎನ್ನುವುದನ್ನು ಸ್ಪಷ್ಟಪಡಿಸಬೇಕು. ಕೇವಲ ಒಂದು ಮತಧರ್ಮಕ್ಕಾಗಿ ಯೋಜನೆಗಳನ್ನು ತಂದವರು ದೇವಸ್ಥಾನಗಳ ಸ್ವಾಯುತ್ತತೆ ಕಾನೂನಿಗೆ ಬಗ್ಗೆಯೂ ವಿರೋಧ ವ್ಯಕ್ತಪಡಿಸುವ ಮೂಲಕ ನಿಜ ಬಣ್ಣ ಬಯಲು ಮಾಡಿದ್ದಾರೆ ಎಂದರು.
ರಾಮನಗರದಲ್ಲಾದ ಘಟನೆಯನ್ನು ಖಂಡಿಸಿದ ನಳಿನ್ ಕುಮಾರ್ ಕಾಂಗ್ರೆಸ್ ರಾಜ್ಯದಲ್ಲಿ ಗೂಂಡ ಪ್ರವೃತ್ತಿಯನ್ನು ಬೆಳೆಸುತ್ತಿದೆ ಎಂದು ಆರೋಪಿಸಿದರು.