‌ಚೀನಾದ ಕ್ಸಿನ್ಜಿಯಾಂಗ್ ನಲ್ಲಿ ಶೋರೂಂ ಆರಂಭಿಸಿದ ಟೆಸ್ಲಾ: ವ್ಯಾಪಕ ಟೀಕೆ, ಖಂಡನೆ

Update: 2022-01-04 17:32 GMT
photo:twitter/@Tesla

ಶಾಂಘೈ, ಜ.4: ಚೀನಾದ ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಶೋರೂಂ ಆರಂಭಿಸಿರುವುದಾಗಿ ಅಮೆರಿಕದ ಇಲೆಕ್ಟ್ರಿಕ್ ವಾಹನಗಳ ಸಂಸ್ಥೆ ಟೆಸ್ಲಾ ಘೋಷಿಸಿರುವುದು ಅಮೆರಿಕ ಹಾಗೂ ಇತರ ಪಾಶ್ಚಿಮಾತ್ಯ ದೇಶಗಳ ಆಕ್ರೋಶಕ್ಕೆ ಕಾರಣವಾಗಿದೆ.

ಕ್ಸಿನ್ಜಿಯಾಂಗ್ ಪ್ರಾಂತದಲ್ಲಿ ಚೀನಾದ ಅಧಿಕಾರಿಗಳು ಅಲ್ಪಸಂಖ್ಯಾತ ಉಯಿಗರ್ ಮುಸ್ಲಿಮ್ ಸಮುದಾಯದ ವಿರುದ್ಧ ತಾರತಮ್ಯ ಮತ್ತು ದೌರ್ಜನ್ಯ ಎಸಗಿದ್ದಾರೆ. ಅಲ್ಲಿರುವ ಶಿಬಿರಗಳಲ್ಲಿ 1 ಮಿಲಿಯನ್‌ಗೂ ಅಧಿಕ ಜನರನ್ನು ಬಂಧನಲ್ಲಿರಿಸಿದ್ದು ಇದರಲ್ಲಿ ಹೆಚ್ಚಿನವರು ಉಯಿಗರ್ ಹಾಗೂ ಇತರ ಮುಸ್ಲಿಮ್ ಅಲ್ಪಸಂಖ್ಯಾತ ಸಮುದಾಯದವರು ಎಂದು ವಿಶ್ವಸಂಸ್ಥೆಯ ಅಧಿಕಾರಿಗಳು ಹಾಗೂ ಮಾನವ ಹಕ್ಕು ಸಂಘಟನೆ ವರದಿ ಮಾಡಿದೆ. ಈ ವರದಿಯ ಬಳಿಕ ಚೀನಾ ಹಾಗೂ ಪಾಶ್ಚಿಮಾತ್ಯ ಸರಕಾರಗಳ ಮಧ್ಯೆ ಬಿಕ್ಕಟ್ಟು ಮೂಡಿದೆ.

ಆದರೆ ಈ ಆರೋಪವನ್ನು ನಿರಾಕರಿಸಿರುವ ಚೀನಾ, ಈ ಶಿಬಿರದಲ್ಲಿ ಜೀತಪದ್ಧತಿ ಅಥವಾ ಇನ್ಯಾವುದೇ ದೌರ್ಜನ್ಯ ನಡೆದಿಲ್ಲ. ಇಲ್ಲಿ ವೃತ್ತಿಪರ ತರಬೇತಿ ಒದಗಿಸಲಾಗುತ್ತಿದೆ ಎಂದು ಪ್ರತಿಪಾದಿಸುತ್ತಿದೆ.

ಕ್ಸಿನ್ಜಿಯಾಂಗ್ ನ ಪ್ರಾದೇಶಿಕ ರಾಜಧಾನಿ ಉರುಂಖಿಯಲ್ಲಿ 2021ರ ಡಿ.31ರಂದು ತನ್ನ ಹೊಸ ಶೋರೂಂ ಆರಂಭವಾಗಿದೆ ಎಂದು ಟೆಸ್ಲಾ ಘೋಷಿಸಿದೆ. ಇದಕ್ಕೆ ಹಲವರಿಂದ ತೀವ್ರ ವಿರೋಧ ಮತ್ತು ಖಂಡನೆ ವ್ಯಕ್ತವಾಗಿದೆ. ಮಂಗಳವಾರ ಹೇಳಿಕೆ ನೀಡಿರುವ ಅಮೆರಿಕದ ಬೃಹತ್ ಮುಸ್ಲಿಂ ವಕಾಲತ್ತು ಸಂಸ್ಥೆ ‘ಕೌನ್ಸಿಲ್ ಆನ್ ಅಮೆರಿಕನ್-ಇಸ್ಲಾಮಿಕ್ ರಿಲೇಷನ್ಸ್’   , ಟೆಸ್ಲಾ ಸಂಸ್ಥೆ ಜನಾಂಗೀಯ ಹತ್ಯೆಯನ್ನು ಬೆಂಬಲಿಸುತ್ತಿದೆ ಎಂದು ಟೀಕಿಸಿದ್ದು ಎಲಾನ್ ಮಸ್ಕ್ ಅವರು ಕ್ಸಿನ್ಜಿಯಾಂಗ್ ಶೋರೂಂ ಅನ್ನು ಮುಚ್ಚಬೇಕು ಎಂದು ಆಗ್ರಹಿಸಿದೆ. 

ಅಮೆರಿಕನ್ ಟ್ರೇಡ್ ಗ್ರೂಫ್, ಅಲಯನ್ಸ್ ಫಾರ್ ಅಮೆರಿಕನ್ ಮ್ಯಾನುಫ್ಯಾಕ್ಚರಿಂಗ್ ಸಂಸ್ಥೆಗಳು ಹಾಗೂ ಅಮೆರಿಕದ ಸೆನೆಟರ್ ಮಾರ್ಕೊ ರೂಬಿಯೊ ಅವರೂ ಟೆಸ್ಲಾದ ಕ್ರಮವನ್ನು ಟೀಕಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News