2 ವರ್ಷ ವೇತನ ದೊರೆಯದೆ ಆತ್ಮಹತ್ಯೆ ಮಾಡಿಕೊಂಡ ಕಾರ್ಮಿಕ: 3 ಬಿಎಂಸಿ ಉದ್ಯೋಗಿಗಳು ಸಸ್ಪೆಂಡ್

Update: 2022-01-04 17:48 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ:  ಬೃಹನ್ ಮುಂಬೈ ಮುನಿಸಿಪಲ್ ಕಾರ್ಪೊರೇಷನ್ ಅಧೀನದ ಘನ ತ್ಯಾಜ್ಯ ನಿರ್ವಹಣಾ ಇಲಾಖೆಯ ಉದ್ಯೋಗಿಯೊಬ್ಬ `ಕಿರುಕುಳ ಹಾಗೂ ಎರಡು ವರ್ಷದಿಂದ ವೇತನ ಬಾಕಿ'ಯಿಂದ ಬೇಸತ್ತು ಇತ್ತೀಚೆಗೆ ಆತ್ಮಹತ್ಯೆ ಮಾಡಿಕೊಂಡ ಘಟನೆಯ ನಂತರ ಮೂವರು ಬಿಎಂಸಿ ಉದ್ಯೋಗಿಗಳನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ.

ಎರಡು ವರ್ಷ ಸಫಾಯಿ ಕಾರ್ಮಿಕನಾಗಿ ಸೇವೆ ಸಲ್ಲಿಸಿದ್ದರೂ ಒಂದೇ ಒಂದು ದಿನದ ವೇತನ ದೊರಕಿಲ್ಲ ಎಂದು ದೂರಿದ್ದ 27 ವರ್ಷದ ರಮೇಶ್ ಪರ್ಮಾರ್ ಎಂಬ ಕಾರ್ಮಿಕ ಡಿಸೆಂಬರ್ 23ರಂದು ಆತ್ಮಹತ್ಯೆಗೈದಿದ್ದ. ಈತನ ಆತ್ಮಹತ್ಯೆಗೆ ಬಾಕಿಯಿರಿಸಲಾಗಿದ್ದ ವೇತನವೇ ಕಾರಣ ಎಂದು ತಿಳಿದು ಒಬ್ಬ ಆಡಳಿತಾಧಿಕಾರಿ, ಮುಖ್ಯ ಕ್ಲರ್ಕ್ ಹಾಗೂ ಇನ್ನೊಬ್ಬ ಕ್ಲರ್ಕ್ ಸೇರಿದಂತೆ ಮೂವರನ್ನು ಆಡಳಿತಾತ್ಮಕ ತನಿಖೆ ಪೂರ್ಣಗೊಳ್ಳುವ ತನಕ ಅಮಾನತುಗೊಳಿಸಲಾಗಿದೆ.

ಕಾರ್ಮಿಕನ ಕುಟುಂಬಕ್ಕೆ ತಕ್ಷಣದ ಪರಿಹಾರವಾಗಿ ರೂ 1 ಲಕ್ಷ ನೀಡಲು ತೀರ್ಮಾನಿಸಲಾಗಿದೆ. ರಮೇಶ್ ಪರ್ಮಾರ್ ತಂದೆ ಕೂಡ ಸ್ವಚ್ಛತಾ ಕಾರ್ಮಿಕರಾಗಿ 30 ವರ್ಷ ಸೇವೆ ಸಲ್ಲಿಸಿ 2019ರಲ್ಲಿ ಗೋರೆಗಾಂವ್ ಪ್ರವಾಹ ಸಂದರ್ಭ ಸೇವೆ ಸಲ್ಲಿಸುತ್ತಿರುವಾಗ ಮೃತಪಟ್ಟಿದ್ದರು. ನಂತರ ರಮೇಶ್‍ಗೆ ಅನುಕಂಪ ಆಧಾರದಲ್ಲಿ ಕೆಲಸ ದೊರಕಿತ್ತು.

ಭಾಗಶಃ ಅಂಗವೈಕಲ್ಯ ಹೊಂದಿದ್ದ ರಮೇಶ್‍ಗೆ ಆರಂಭದಲ್ಲಿ ಕಸಗುಡಿಸುವ ಕೆಲಸ ನೀಡಲಾಗಿದ್ದರೂ ಕೈಗಳ ಬಳಕೆಯಲ್ಲಿ ಸಮಸ್ಯೆ ಇದೆ ಎಂದು ತಿಳಿದ ನಂತರ ಆತನಿಗೆ ಕಚೇರಿ ಕೆಲಸ ವಹಿಸಲಾಗಿತ್ತು. ಆದರೆ ಆತನ ಸೇವಾ ದಾಖಲೆ ಕುರಿತು ಒಬ್ಬ ಅಧಿಕಾರಿ ಪ್ರಶ್ನಿಸಿದ ನಂತರ ರಮೇಶ್‍ಗೆ ಮಾಸಿಕ ರೂ 28000 ವೇತನ ದೊರಕಿರಲೇ ಇಲ್ಲ. ಆತನ ತಂದೆಗೆ ಸಿಗಬೇಕಾಗಿದ್ದ ಪಿಎಫ್ ನಿಧಿ ಕೂಡ ದೊರಕಿಲ್ಲ ಎಂದು ದೂರಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News