ಹೂಡಿಕೆದಾರರಿಗೆ ವಂಚನೆ ಪ್ರಕರಣದಲ್ಲಿ ಉದ್ಯಮಿ ಎಲಿಜಬೆತ್ ಹೋಮ್ಸ್ ಅಪರಾಧಿ: ನ್ಯಾಯಾಲಯ ಘೋಷಣೆ

Update: 2022-01-04 18:12 GMT
ಎಲಿಜಬೆತ್ ಹೋಮ್ಸ್(photo:twitter/@eholmes2003)

ವಾಷಿಂಗ್ಟನ್, ಜ.4: ರಕ್ತ ಪರೀಕ್ಷೆ ನಡೆಸುವ ನವೋದ್ಯಮ ಥೆರನಾಸ್‌ನ ಸಂಸ್ಥಾಪಕಿ ಎಲಿಜಬೆತ್ ಹೋಮ್ಸ್ ಹೂಡಿಕೆದಾರರಿಗೆ ವಂಚನೆ ಮತ್ತು ಪಿತೂರಿ ಪ್ರಕರಣದಲ್ಲಿ ಅಪರಾಧಿ ಎಂದು ಅಮೆರಿಕದ ನ್ಯಾಯಾಧೀಶರು ಸೋಮವಾರ ಘೋಷಿಸಿದ್ದಾರೆ.

ಎಲಿಜಬೆತ್ ವಿರುದ್ಧ 11 ಕೌಂಟ್ಸ್ ಪ್ರಕರಣ ದಾಖಲಾಗಿದ್ದು ಇದರಲ್ಲಿ 3 ಕೌಂಟ್ ಪ್ರಕರಣ(ರೋಗಿಗಳಿಗೆ ವಂಚನೆ) ಮತ್ತು 1 ಕೌಂಟ್ ಪ್ರಕರಣ(ಪಿತೂರಿ) ದಿಂದ ಅವರನ್ನು ಖುಲಾಸೆಗೊಳಿಸಿದ್ದು ಇತರ 3 ಕೌಂಟ್ ಪ್ರಕರಣಗಳ ತೀರ್ಪು ಪ್ರಕಟಿಸಿಲ್ಲ. ಇತರ 4 ಕೌಂಟ್ ಪ್ರಕರಣಗಳಲ್ಲಿ ಅವರ ಅಪರಾಧ ಸಾಬೀತಾಗಿದೆ ಎಂದು ನ್ಯಾಯಾಧೀಶರು ಹೇಳಿದ್ದಾರೆ.

ಸ್ವಲ್ಪ ಹನಿ ರಕ್ತದ ಪರೀಕ್ಷೆಯಿಂದ ಹಲವು ರೋಗಗಳನ್ನು ಪತ್ತೆಹಚ್ಚುವ ಸಾಧನ ಅಭಿವೃದ್ಧಿಪಡಿಸಿರುವುದಾಗಿ ಎಲಿಜಬೆತ್ ಹೂಡಿಕೆದಾರರನ್ನು ವಂಚಿಸಿದ್ದರು ಎಂದು ಎಪಿ ಸುದ್ಧಿಸಂಸ್ಥೆ ವರದಿ ಮಾಡಿದೆ. ಥೆರನಾಸ್ ಸಂಸ್ಥೆ 2018ರಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದೆ. 18 ವರ್ಷವಿದ್ದಾಗ ಸಂಸ್ಥೆ ಸ್ಥಾಪಿಸಿದ್ದ ಎಲಿಜಬೆತ್, ವಂಚನೆಯ ಮೂಲಕ 900 ಡಾಲರ್ಗೂ ಅಧಿಕ (ಸುಮಾರು 6,700 ಕೋಟಿ ರೂ.) ಹಣ ಸಂಗ್ರಹಿಸಿದ್ದರು. ಮಾಧ್ಯಮ ದೊರೆ ರೂಪರ್ಟ್ ಮರ್ಡೋಕ್, ಸಾಫ್ಟ್ ವೇರ್ ಕ್ಷೇತ್ರದ ದಿಗ್ಗಜ ಲ್ಯಾರಿ ಎಲಿಸನ್ ಮುಂತಾದವರು ಇವರ ಮಾತು ನಂಬಿ ಹಣ ಹೂಡಿಕೆ ಮಾಡಿದ್ದರು.

ಯಾರನ್ನೂ ವಂಚಿಸುವ ಉದ್ದೇಶ ತನ್ನದಲ್ಲ. ಸಂಸ್ಥೆಯ ಪ್ರಯೋಗಾಲಯದ ನಿರ್ದೇಶಕರು ಪರೀಕ್ಷೆಯ ಗುಣಮಟ್ಟಕ್ಕೆ ಹೊಣೆಗಾರರು ಎಂದು ಎಲಿಜಬೆತ್ ಹೇಳಿದ್ದಾರೆ.

ಪ್ರತೀ ಕೌಂಟ್ ಅಪರಾಧಕ್ಕೆ 20 ವರ್ಷದವರೆಗೆ ಜೈಲುಶಿಕ್ಷೆಗೆ ಒಳಗಾಗಬಹುದು. ಆದರೆ ಎಲಿಜಬೆತ್‌ಗೆ ಗರಿಷ್ಟ ಶಿಕ್ಷೆಯಾಗುವ ಸಾಧ್ಯತೆಯಿಲ್ಲ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಥೆರನಾಸ್ ನ ಮಾಜಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಮೇಶ್ ‘ಸನ್ನಿ’ ಬಲ್ವಾನಿ ವಿರುದ್ಧದ ವಿಚಾರಣೆ ಮುಗಿಸಿದ ಬಳಿಕ ಎಲಿಜಬೆತ್ ಅವರ ಶಿಕ್ಷೆಯನ್ನು ಘೋಷಿಸುವುದಾಗಿ ನ್ಯಾಯಾಧೀಶರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News