ಪೆಲೆಸ್ತೀನ್ ಕೈದಿಗಳಿಂದ ಇಸ್ರೇಲ್ ನ ಸೇನಾ ನ್ಯಾಯಾಲಯ ಬಹಿಷ್ಕಾರ ಅಭಿಯಾನ

Update: 2022-01-04 18:24 GMT
ಸಾಂದರ್ಭಿಕ ಚಿತ್ರ:PTI

ರಮಲ್ಲಾ, ಜ.4: ಆಕ್ರಮಿತ ಪಶ್ಚಿಮ ದಂಡೆಯಲ್ಲಿ ವಿಚಾರಣೆ ಅಥವಾ ಆರೋಪ ದಾಖಲಿಸದೆ ಬಂಧಿಸಲ್ಪಟ್ಟಿರುವ ಪೆಲೆಸ್ತೀನಿಯನ್ ಕೈದಿಗಳು ಇಸ್ರೇಲ್ ನ ಸೇನಾ ನ್ಯಾಯಾಲಯವನ್ನು ಬಹಿಷ್ಕರಿಸುವ ಅಭಿಯಾನಕ್ಕೆ ಚಾಲನೆ ನೀಡಿದ್ದಾರೆ. ಈ ಮಧ್ಯೆ, ಉಪವಾಸ ಸತ್ಯಾಗ್ರಹ ನಿರತನಾಗಿರುವ ಪೆಲೆಸ್ತೀನಿಯನ್ ಕೈದಿಯ ಆರೋಗ್ಯಸ್ಥಿತಿ ಬಿಗಡಾಯಿಸಿದ್ದು ಪ್ರಾಣಕ್ಕೆ ಅಪಾಯವಿದೆ ಎಂದು ಕೈದಿಗಳ ಹಕ್ಕುಗಳಿಗಾಗಿ ಹೋರಾಡುವ ಸಂಘಟನೆ ಎಚ್ಚರಿಸಿದೆ.

ತಥಾಕಥಿತ ಆಡಳಿತಾತ್ಮಕ ಬಂಧನದಡಿ ಇಸ್ರೇಲ್ ಅಧಿಕಾರಿಗಳು ಸೆರೆಯಲ್ಲಿಟ್ಟಿರುವ 500 ಕೈದಿಗಳು ಹೊಸ ವರ್ಷದ ಆರಂಭದ ದಿನದಂದು ನ್ಯಾಯಾಲಯದ ಕಲಾಪಕ್ಕೆ ಹಾಜರಾಗದಿರುವ ಮೂಲಕ ವಿನೂತನ ರೀತಿಯ ಪ್ರತಿಭಟನೆ ಆರಂಭಿಸಿದ್ದಾರೆ. ಆಡಳಿತಾತ್ಮಕ ಬಂಧನದ ಆದೇಶವನ್ನು ಎತ್ತಿಹಿಡಿಯುವ ಪ್ರಾಥಮಿಕ ವಿಚಾರಣೆ, ಕೈದಿಗಳು ಸಲ್ಲಿಸುವ ಮೇಲ್ಮನವಿ ವಿಚಾರಣೆ ಹಾಗೂ ಸುಪ್ರೀಂಕೋರ್ಟ್‌ನಲ್ಲಿ ಮುಂದುವರಿಯುವ ಕಾರ್ಯಕಲಾಪಗಳನ್ನು ಬಹಿಷ್ಕರಿಸುವುದಾಗಿ ಕೈದಿಗಳ ಪರ ಕಾರ್ಯನಿರ್ವಹಿಸುವ ಸಂಘಟನೆ ಹೇಳಿದೆ.

ನಮ್ಮ ನಿರ್ಧಾರ ಸ್ವಾತಂತ್ರ್ಯ, ಆಡಳಿತಾತ್ಮಕ ಬಂಧನವಲ್ಲ’   ಎಂಬ ಬ್ಯಾನರ್‌ನಡಿ ಪ್ರತಿಭಟನೆ ನಡೆಸಲಾಗುತ್ತಿದೆ. ಆಕ್ರಮಣ ಪಡೆಗಳು ನಮ್ಮ ಜನರ ವಿರುದ್ಧ ನಡೆಸಿರುವ ಅನ್ಯಾಯದ ಆಡಳಿತಾತ್ಮಕ ಬಂಧನ ಪ್ರಕ್ರಿಯೆಯನ್ನು ಅಂತ್ಯಗೊಳಿಸುವ ಉದ್ದೇಶದಿಂದ ನಡೆಯುತ್ತಿರುವ ಪೆಲೆಸ್ತೀನಿಯರ ಪ್ರಯತ್ನಗಳನ್ನು ಮುಂದುವರಿಸುವ ಕ್ರಮ ಇದಾಗಿದೆ . ಇತ್ತೀಚಿನ ದಿನಗಳಲ್ಲಿ ಇಸ್ರೇಲ್ ನ ಈ ಕಾರ್ಯನೀತಿ(ಆಡಳಿತಾತ್ಮಕ ಬಂಧನ)ದ ವ್ಯಾಪ್ತಿಗೆ ಮಹಿಳೆಯರು, ಮಕ್ಕಳು, ವೃದ್ಧರನ್ನೂ ಸೇರಿಸಲಾಗಿದೆ. ಮಿಲಿಟರಿ ನ್ಯಾಯಾಲಯಗಳು ಇಸ್ರೇಲ್ ನ ದಬ್ಬಾಳಿಕೆ ವ್ಯವಸ್ಥೆಯಲ್ಲಿನ ಪ್ರಮುಖ ಅಂಶಗಳಾಗಿವೆ ಎಂದು ಕೈದಿಗಳು ಹೇಳಿದ್ದಾರೆ.

ಇಸ್ರೇಲ್ ನ ಮಿಲಿಟರಿ ನ್ಯಾಯಾಲಯಗಳು ‘ನಾಮಮಾತ್ರ ಮತ್ತು ಕಾಲ್ಪನಿಕ ನ್ಯಾಯಾಲಯಗಳ ಮೂಲಕ, ಆಡಳಿತಾತ್ಮಕ ಬಂಧನ ಎಂಬ ಹೆಸರಿನಡಿ ನಮ್ಮ ಜನರ ನೂರಾರು ಜೀವಿತಾವಧಿಯನ್ನು ನುಂಗಿ ಹಾಕಿದ ಅನಾಗರಿಕ, ಜನಾಂಗೀಯ ಸಾಧನವಾಗಿದೆ. ಈ ನ್ಯಾಯಾಲಯಗಳ ತೀರ್ಪನ್ನು ಈ ವಲಯದ ಸೇನಾ ಕಮಾಂಡರ್‌ಗಳು ಪೂರ್ವ ನಿರ್ಧರಿಸಿರುತ್ತಾರೆ’ ಎಂದು ಪೆಲೆಸ್ತೀನ್ ಕೈದಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News