ಇರಾಕ್ : ಮತ್ತೆ 2 ಸಶಸ್ತ್ರ ಡ್ರೋನ್ ಹೊಡೆದುರುಳಿಸಿದ ಮಿತ್ರರಾಷ್ಟ್ರಗಳ ಪಡೆ

Update: 2022-01-04 18:29 GMT
File photo:PTI

ಬಗ್ದಾದ್, ಜ.4: ಇರಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಅಮೆರಿಕ ನೇತೃತ್ವದ ಮಿತ್ರರಾಷ್ಟ್ರಗಳ ಸೇನಾನೆಲೆಯನ್ನು ಕೇಂದ್ರೀಕರಿಸಿ ಮಂಗಳವಾರ ನಡೆದ ಡ್ರೋನ್ ದಾಳಿಯನ್ನು ವಿಫಲಗೊಳಿಸಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಇದು ಕಳೆದ 24 ಗಂಟೆಯಲ್ಲಿ(ಮಂಗಳವಾರ ಬೆಳಗ್ಗಿನವರೆಗಿನ) ನಡೆದ 2ನೇ ಡ್ರೋನ್ ದಾಳಿಯಾಗಿದೆ.

ಪಶ್ಚಿಮದ ಅನ್ಬರ್ ಪ್ರಾಂತದಲ್ಲಿರುವ ಸೇನಾ ನೆಲೆಯತ್ತ ಧಾವಿಸುತ್ತಿದ್ದ 2 ಸಶಸ್ತ್ರ ಡ್ರೋನ್‌ಗಳನ್ನು ಹೊಡೆದುರುಳಿಸಲಾಗಿದೆ ಎಂದು ಅಂತರಾಷ್ಟ್ರೀಯ ಮಿಲಿಟರಿ ಒಕ್ಕೂಟ ಮಂಗಳವಾರ ಹೇಳಿದೆ. ಇರಾಕ್ನ ಐನ್ ಅಲ್ ಅಸದ್ ವಾಯುನೆಲೆಯಲ್ಲಿನ ರಕ್ಷಣಾ ವ್ಯವಸ್ಥೆಯು ಸ್ಫೋಟಕದೊಂದಿಗೆ ಸಜ್ಜುಗೊಂಡಿದ್ದ 2 ಡ್ರೋನ್‌ಗಳನ್ನು ಪತ್ತೆಹಚ್ಚಿ ನಾಶಗೊಳಿಸಿದೆ. ಈ ಮೂಲಕ ದಾಳಿಯ ಪ್ರಯತ್ನವನ್ನು ವಿಫಲಗೊಳಿಸಿದ್ದು ವಾಯು ನೆಲೆಯಲ್ಲಿರುವ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವಾಯುನೆಲೆಯ ವಕ್ತಾರರನ್ನು ಉಲ್ಲೇಖಿಸಿ ಸುದ್ಧಿಸಂಸ್ಥೆಗಳು ವರದಿ ಮಾಡಿವೆ.

ಸೋಮವಾರ ಬಗ್ದಾದ್ ನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಅಮೆರಿಕ ಯೋಧರು ತಂಗಿರುವ ಕಟ್ಟಡವನ್ನು ಗುರಿಯಾಗಿಸಿ ಉಡಾಯಿಸಲಾದ 2 ಸಶಸ್ತ್ರ ಡ್ರೋನ್‌ಗಳನ್ನು ಹೊಡೆದುರುಳಿಸಿರುವುದಾಗಿ ಮಿತ್ರರಾಷ್ಟ್ರಗಳ ಪಡೆ ಹೇಳಿದೆ.

ಇರಾನ್ ಹಾಗೂ ಮಧ್ಯಪ್ರಾಚ್ಯದ ಅದರ ಮಿತ್ರ ದೇಶಗಳು ಸೋಮವಾರ ಇರಾನ್ನ ಉನ್ನತ ಸೇನಾಧಿಕಾರಿ ಖಾಸಿಂ ಸುಲೈಮಾನಿಯ ಹತ್ಯೆಯ 2ನೇ ವಾರ್ಷಿಕ ದಿನದ ಸಂದರ್ಭ ಭಾವನಾತ್ಮಕ ಶ್ರದ್ಧಾಂಜಲಿ ಕಾರ್ಯಕ್ರಮ ಹಮ್ಮಿಕೊಂಡಿರುವಂತೆಯೇ ಅಮೆರಿಕ ಹಾಗೂ ಅದರ ಮಿತ್ರರಾಷ್ಟ್ರಗಳ ಪಡೆಗಳನ್ನು ಗುರಿಯಾಗಿಸಿ ಇರಾಕ್‌ನಲ್ಲಿ ನಡೆಯುತ್ತಿರುವ ಡ್ರೋನ್ ದಾಳಿ ಪ್ರಕರಣ ಹೆಚ್ಚಿದೆ.

ಐಸಿಸ್ ಸಂಘಟನೆ ವಿರುದ್ಧದ ಅಂತರಾಷ್ಟ್ರೀಯ ಸೇನಾ ಒಕ್ಕೂಟದ ನೇತೃತ್ವವನ್ನು ಅಮೆರಿಕ ವಹಿಸಿದೆ. ಕಳೆದ ತಿಂಗಳು ಯುದ್ಧ ಕಾರ್ಯಾಚರಣೆ ಅಂತ್ಯಗೊಂಡಂದಿನಿಂದ ಅಂತರಾಷ್ಟ್ರೀಯ ಸೇನಾ ಒಕ್ಕೂಟ ಇರಾಕ್ ಯೋಧರಿಗೆ ತರಬೇತಿ ಮತ್ತು ಸಲಹೆ ನೀಡುವ ಕಾರ್ಯದಲ್ಲಿ ತೊಡಗಿದೆ. ಯುದ್ಧ ಕಾರ್ಯಾಚರಣೆ ಮುಕ್ತಾಯಗೊಂಡಿದ್ದರೂ, ಆತ್ಮರಕ್ಷಣೆಯ ಸಹಜ ಹಕ್ಕನ್ನು ಉಳಿಸಿಕೊಂಡಿದ್ದೇವೆ. ಇರಾಕ್‌ನ ಸ್ಥಾವರಗಳ ವಿರುದ್ಧದ, ಇರಾಕ್‌ನ ಜನತೆಯ ವಿರುದ್ಧದ ಮತ್ತು ಅವರನ್ನು ರಕ್ಷಿಸುವ ಸೇನೆಯ ವಿರುದ್ಧದ ದಾಳಿ ಇದಾಗಿದೆ. ಇರಾಕ್‌ನಲ್ಲಿ ನಾವು ಕನಿಷ್ಟ ಸೇನೆಯನ್ನು ಉಳಿಸಿಕೊಂಡಿದ್ದೇವೆ ಮತ್ತು ಇನ್ನು ಮುಂದೆ ಇಲ್ಲಿ ಅಂತರಾಷ್ಟ್ರೀಯ ಸೇನಾ ಒಕ್ಕೂಟ ಸ್ವಂತ ಸೇನಾನೆಲೆಯನ್ನು ಹೊಂದಿರುವುದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News