×
Ad

ಉಪ್ಪಿನಂಗಡಿಯಲ್ಲಿ ಪ್ರತಿಭಟನೆ, ಲಾಠಿಚಾರ್ಜ್ ಪ್ರಕರಣ: ಬಂಧಿತ ಆರೋಪಿಗಳಿಗೆ ಜಾಮೀನು

Update: 2022-01-05 10:54 IST

ಪುತ್ತೂರು: ಉಪ್ಪಿನಂಗಡಿ ಪ್ರತಿಭಟನೆ ಮತ್ತು ಲಾಠಿಚಾರ್ಜ್ ವೇಳೆ ದಾಖಲಾದ ಪ್ರಕರಣದಲ್ಲಿ ಬಂಧಿತರಾದ 10 ಮಂದಿ ಆರೋಪಿಗಳಿಗೆ ಪುತ್ತೂರು 5ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ನೀಡಿದೆ.

ಬಂಟ್ವಾಳ ತಾಲೂಕಿನ ಕಾರಿಂಜ ನಿವಾಸಿ ಮೊಹಮ್ಮದ್ ತ್ವಾಹಿರ್, ಬೆಳ್ತಂಗಡಿ ತಾಲೂಕಿನ ಮಚ್ಚಿನ ನಿವಾಸಿ ಸಾಧಿಕ್, ಬಂಟ್ವಾಳದ ಅಬ್ದುಲ್ ಮುಬಾರಕ್, ಅಬ್ದುಲ್, ಪುತ್ತೂರು ಪಾಲ್ತಾಡ್ ನಿವಾಸಿ ಮೊಹಮ್ಮದ್ ಜಾಹಿದ್, ಬೆಳ್ತಂಗಡಿ ತಾಲೂಕಿನ ಬಾರ್ಯ ನಿವಾಸಿ ಸ್ವಾಜೀರ್ ಮೊಹಮ್ಮದ್ ಫೈಝಲ್, ಮಂಗಳೂರಿನ ಮೊಹಮ್ಮದ್ ಹನೀಫ್, 34 ನೆಕ್ಕಿಲಾಡಿಯ ಎನ್.ಕಾಸಿಂ, ಬಂಟ್ವಾಳದ ಮೊಹಮ್ಮದ್ ಆಶೀಫ್, ಕಡಬ ಕೊಯ್ಲ ನಿವಾಸಿ ತೌಫೀಲ್ ಮೊಹಮ್ಮದ್ ಜಾಮೀನು ಪಡೆದುಕೊಂಡವರು.

ಡಿ.14ರಂದು ಉಪ್ಪಿನಂಗಡಿ ಠಾಣೆಯ ಮುಂಭಾಗದಲ್ಲಿ ನಡೆದ ಪ್ರತಿಭಟನೆ ವೇಳೆ ಪೊಲೀಸರು ಪ್ರತಿಭಟನಾನಿರತರ ಮೇಲೆ ಲಾಠಿ ಚಾರ್ಜ್ ನಡೆಸಿದ್ದರು. ಈ ವೇಳೆ ಕರ್ತವ್ಯದಲ್ಲಿದ್ದ ಪೊಲೀಸ್ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ ಕರ್ತವ್ಯಕ್ಕೆ ಅಡ್ಡಿ ಪಡಿಸಿರುವ ಬಗ್ಗೆ 10 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು.

ಡಿ.14 ಮತ್ತು ಡಿ.15ರಂದು ಉಪ್ಪಿನಂಗಡಿ ಪೊಲೀಸರು ಅವರನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬಂಧಿತರಿಗೆ  ನ್ಯಾಯಾಂಗ ಬಂಧನ ವಿಧಿಸಲಾಗಿತ್ತು.

ಆರೋಪಿಗಳ ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಪುತ್ತೂರಿನ 5 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆರೋಪಿಗಳಿಗೆ ಶರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.

ಆರೋಪಿ ಮೊಹಮ್ಮದ್ ಜಾಹಿದ್ ಪರ ನ್ಯಾಯವಾದಿ ನೂರುದ್ದೀನ್ ಸಾಲ್ಮರ ಮತ್ತು ಉಳಿದ 9 ಮಂದಿ ಅರೋಪಿಗಳ ಪರ ನ್ಯಾಯವಾದಿಗಳಾದ ಅಶ್ರಫ್ ಕೆ ಅಗ್ನಾಡಿ, ಅಬ್ದುಲ್ ಮಜೀದ್ ಖಾನ್ ಮತ್ತು ಅಬ್ದುಲ್ ರಹಿಮಾನ್ ಹಿರೇಬಂಡಾಡಿ ವಾದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News