×
Ad

ರಾತ್ರಿ ಕರ್ಫ್ಯೂಗೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ: ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್

Update: 2022-01-05 14:34 IST
ಸೌಮ್ಯಾ ಸ್ವಾಮಿನಾಥನ್ (PTI)

ಹೊಸದಿಲ್ಲಿ: ಭಾರತದಲ್ಲಿ ಹೇರಲಾಗುತ್ತಿರುವ ರಾತ್ರಿ ಕರ್ಫ್ಯೂಗೆ ಯಾವುದೇ ವೈಜ್ಞಾನಿಕ ತಳಹದಿಯಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯಾ ಸ್ವಾಮಿನಾಥನ್ ಹೇಳಿದ್ದಾರೆ.

ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನವೊಂದರಲ್ಲಿ ಅವರು ಮಾತನಾಡುತ್ತಿದ್ದರು. "ರಾತ್ರಿ ಕರ್ಫ್ಯೂನಂತಹ ಕ್ರಮಗಳ ಹಿಂದೆ ಯಾವುದೇ ವಿಜ್ಞಾನವಿಲ್ಲ. ಸಾಕ್ಷ್ಯ-ಆಧರಿತ ಸಾರ್ವಜನಿಕ ಆರೋಗ್ಯ ಸಂರಕ್ಷಣಾ ಕ್ರಮಗಳನ್ನು ಕೈಗೊಳ್ಳಬೇಕಿದೆ. ನಮ್ಮಲ್ಲಿ ಕಳೆದ ಎರಡು ವರ್ಷಗಳ ಅವಧಿಯ ಸಾಕಷ್ಟು ಡೇಟಾ ಇದೆ,'' ಎಂದು ಅವರು ಹೇಳಿದ್ದಾರೆ.

ಒಮೈಕ್ರಾನ್ ಪ್ರಕರಣಗಳ ಏರಿಕೆಯ ಹಿನ್ನೆಲೆಯಲ್ಲಿ ಸರಕಾರ ಹೇಗೆ ಪ್ರತಿಕ್ರಿಯಿಸಬೇಕು ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, "ಸೋಂಕು ಹರಡುವಿಕೆ ತಡೆಯಲು, ಜನರ ಮೇಲಿನ ಪರಿಣಾಮ ತಗ್ಗಿಸಲು, ಪ್ರಮುಖವಾಗಿ ಆಸ್ಪತ್ರೆಗೆ ದಾಖಲೀಕರಣ ಮತ್ತು ಸಾವುಗಳನ್ನು ತಪ್ಪಿಸಲು  ಸರಕಾರಗಳು ವೈಜ್ಞಾನಿಕ ಮತ್ತು ಸಾಕ್ಷ್ಯ ಆಧರಿತ ವಿಧಾನಗಳ ಸಮತೋಲನ ಸಾಧಿಸಬೇಕಿದೆ. ಅದೇ ಸಮಯ ಆರ್ಥಿಕತೆಗಳನ್ನು ತೆರೆದಿರಿಸಬೇಕು ಹಾಗೂ ಜನರ ಜೀವನೋಪಾಯಗಳು ಬಾಧಿತವಾಗದಂತೆ ನೋಡಿಕೊಳ್ಳಬೇಕು, ಜನರು ಈಗಾಗಲೇ ಸಾಕಷ್ಟು ಕಷ್ಟ ಪಟ್ಟಿದ್ದಾರೆ,'' ಎಂದು ಹೇಳಿದರು.

ಈ ಸಾಂಕ್ರಾಮಿಕವನ್ನು ನಿಯಂತ್ರಿಸಲು ಮಾಸ್ಕ್ ಧರಿಸುವುದು ಒಂದು ಸರಳ ಉಪಾಯ, ಸಾಂಕ್ರಾಮಿಕದ ನೆಪದಲ್ಲಿ ಶಾಲೆಗಳನ್ನು ಅಂತಿಮವಾಗಿ ಮುಚ್ಚಬೇಕು ಹಾಗೂ ಆರ್ಥಿಕತೆಗಳು ತೆರೆಯುವ ಸಂದರ್ಭ ಶಾಲೆಗಳು ಮೊದಲು ಆರಂಭವಾಗಬೇಕು, ಏಕೆಂದರೆ ಭೌತಿಕ ತರಗತಿಗಳಿಗೆ ಹಾಜರಾಗದೇ ಇರುವುದು ಮಕ್ಕಳ ಮೇಲೆ ಬಹಳಷ್ಟು ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ.

ಮನರಂಜನಾ ಸ್ಥಳಗಳ ಮೇಲೆ ನಿರ್ಬಂಧ ಸಮರ್ಥನೀಯ. ಏಕೆಂದರೆ ಮುಚ್ಚಿದ ಸ್ಥಳದಲ್ಲಿ ಬಹಳ ಜನರು ಸೇರುವುದು ಸೋಂಕು ಹರಡುವ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಅವರು ಹೇಳಿದರು.

"ಪ್ರಾಥಮಿಕ ಆರೋಗ್ಯ ಸೇವಾ ಕ್ಷೇತ್ರವನ್ನು ಬಲಪಡಿಸಬೇಕಿದೆ, ಭಾರತೀಯರು  ಸಿದ್ಧರಾಗಬೇಕಿದೆ ಆದರೆ ಭೀತಿ ಪಡಬೇಕಾಗಿಲ್ಲ. ಭಾರತದಲ್ಲಿ ಒಮೈಕ್ರಾನ್ ಪ್ರಕರಣಗಳ ತೀವ್ರಗತಿ ಏರಿಕೆಯನ್ನು ನಾವು ನೋಡಬಹುದು. ಇದು ಆರಂಭ ಮಾತ್ರ ಎಂದು ನನಗನಿಸುತ್ತದೆ, ಮುಂದಿನ ದಿನಗಳಲ್ಲಿ ಬಹಳಷ್ಟು ಜನರಿಗೆ ಈ ಸೋಂಕು ತಗಲಬಹುದು,'' ಎಂದು ಅವರು ಹೇಳಿದರು.

ದೂರದರ್ಶನಕ್ಕೆ ನೀಡಿದ ಇನ್ನೊಂದು ಸಂದರ್ಶನದಲ್ಲಿ ಮಾತನಾಡಿದ ಸೌಮ್ಯಾ ಸ್ವಾಮಿನಾಥನ್, "ಜನರು ವೈದ್ಯರ ಸಲಹೆ ಪಡೆಯದೆ ಕೋವಿಡ್‌ಗೆ ತಾವೇ ಔಷಧಿ ಪಡೆಯಬಾರದು. ಆ್ಯಂಟಿಬಯೋಟಿಕ್ ಅಥವಾ ಸ್ಟೆರಾಯ್ಡ್ಗಳನ್ನು ವೈದ್ಯರ ಸಲಹೆಯಿಲ್ಲದೆ ತೆಗೆದುಕೊಳ್ಳಬಾರದು, ಇದು ಒಂದು ಅಲೆಯ ಆರಂಭವೆಂದು ತೋರುತ್ತದೆ, ಸಾಮಾಜಿಕ ಮತ್ತು ರಾಜಕೀಯ ಸಭೆಗಳನ್ನು ಕನಿಷ್ಠಗೊಳಿಸಬೇಕು,'' ಎಂದು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News