ಮದರ್ ತೆರೆಸಾ ಚಾರಿಟಿ ಟ್ರಸ್ಟ್ ಬೆನ್ನಿಗೆ ನಿಂತ ಒಡಿಶಾ ಸರ್ಕಾರ: ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದ ನೆರವು
ಹೊಸದಿಲ್ಲಿ: ಮದರ್ ತೆರೇಸಾ ಟ್ರಸ್ಟ್‌ಗೆ ಸಂಬಂಧಿಸಿದ ಖಾತೆಗಳನ್ನು ಕೇಂದ್ರ ಸರ್ಕಾರ ಸ್ಥಗಿತಗೊಳಿಸಿದ ಬೆನ್ನಲ್ಲೇ, ಒಡಿಶಾ ಸರ್ಕಾರ ಟ್ರಸ್ಟ್‌ಗೆ ಆರ್ಥಿಕ ನೆರವು ಒದಗಿಸಲು ಮುಂದಾಗಿದೆ.
ಒಡಿಶಾದಲ್ಲಿ ಮದರ್ ತೆರೆಸಾ ಅವರ ಮಿಷನರೀಸ್ ಆಫ್ ಚ್ಯಾರಿಟಿ ಟ್ರಸ್ಟ್‌ನಡಿ ಕಾರ್ಯನಿರ್ವಹಿಸುವ 13 ಸಂಸ್ಥೆಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ 78.76 ಲಕ್ಷ ರೂ.ಗಳನ್ನು ನೀಡುವುದಾಗಿ ಒಡಿಶಾ ಮುಖ್ಯಮಂತ್ರಿ ನವೀನ್ ಪಾಟ್ನಾಯಿಕ್ ಕಛೇರಿಯ ಅಧಿಕೃತ ಹೇಳಿಕೆ ತಿಳಿಸಿದೆ.
ಕೊಲ್ಕತ್ತಾದಲ್ಲಿ ಕೇಂದ್ರ ಕಛೇರಿ ಇರುವ ಮದರ್ ತೆರೆಸಾ ಟ್ರಸ್ಟ್ ವಿವಿಧ ಪ್ರದೇಶದಲ್ಲಿ ಅನಾಥಾಲಯಗಳನ್ನು, ಪುನರ್ವಸತಿ ಕೇಂದ್ರಗಳನ್ನು ನಡೆಸುತ್ತಿದೆ. ಟ್ರಸ್ಟ್ ಗೆ ಸಂಬಂಧಿಸಿದ ಖಾತೆಗಳನ್ನು ಡಿಸೆಂಬರ್ ಕೊನೆಯ ವಾರದಲ್ಲಿ ಕೇಂದ್ರ ಸರ್ಕಾರ ತಡೆ ಹಿಡಿದಿತ್ತು.
ಕೆಲವೊಂದು ಅರ್ಹತಾ ನಿಯಮಗಳನ್ನು ಪಾಲಿಸದೇ ಇರುವುದರಿಂದ ಮಿಷನರೀಸ್ ಆಫ್ ಚ್ಯಾರಿಟಿಯು ವಿದೇಶಿ ದೇಣಿಗೆ ನಿಯಂತ್ರಣ ಕಾಯಿದೆಯನ್ವಯದ ನೋಂದಣಿಯನ್ನು ನವೀಕರಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯ ತಿಳಿಸಿತ್ತು.
ಇದು ಸಾಕಷ್ಟು ವಿವಾದಕ್ಕೆ ಕಾರಣವಾಗಿತ್ತು. ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಟ್ರಸ್ಟ್ ಖಾತೆಯನ್ನು ಸ್ಥಗಿತಗೊಳಿಸಿದ ಕ್ರಮಕ್ಕೆ ಆಘಾತ ವ್ಯಕ್ತಪಡಿಸಿದ್ದರು.
ಒಡಿಶಾದಲ್ಲಿರುವ ಮಿಷನರೀಸ್ ಆಫ್ ಚ್ಯಾರಿಟಿ ಆಡಳಿತದ ಆಶ್ರಯತಾಣಗಳು ಮತ್ತು ಅನಾಥಾಲಯಗಳು ಯಾವುದೇ ಸಮಸ್ಯೆಯಿಲ್ಲದೆ ಕಾರ್ಯನಿರ್ವಹಿಸುವಂತಾಗಲು ಕ್ರಮಕೈಗೊಳ್ಳುವಂತೆ ಎಲ್ಲಾ ಜಿಲ್ಲಾ ಕಲೆಕ್ಟರುಗಳಿಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಈ ಹಿಂದೆಯೇ ಸೂಚಿಸಿದ್ದರು. ಹಾಗೂ ಅಗತ್ಯ ಬಿದ್ದರೆ ಮುಖ್ಯಮಂತ್ರಿಗಳ ಪರಿಹಾರ ನಿಧಿಯಿಂದಲೂ ಈ ಉದ್ದೇಶಕ್ಕೆ ಹಣ ಬಳಸಬಹುದಾಗಿದೆ ಎಂದು ತಿಳಿಸಿದ್ದರು.