'ಬುಲ್ಲಿ ಬಾಯ್' ಆ್ಯಪ್ ಪ್ರಕರಣ: ಆರೋಪಿ ವಿದ್ಯಾರ್ಥಿ ಮೇಲೆ ಕಾಲೇಜು ಕಠಿಣ ಕ್ರಮಕೈಗೊಳ್ಳುವ ಸಾಧ್ಯತೆ ಕಡಿಮೆ?
ಬೆಂಗಳೂರು: 'ಬುಲ್ಲಿ ಬಾಯ್' ಆ್ಯಪ್ ಪ್ರಕರಣದಲ್ಲಿ ಬಂಧಿತನಾಗಿರುವ ಬೆಂಗಳೂರಿನ ಇಂಜಿನಿಯರಿಂಗ್ ವಿದ್ಯಾರ್ಥಿ 21 ವರ್ಷದ ವಿಶಾಲ್ ಕುಮಾರ್ ಝಾ ತಾನು ವ್ಯಾಸಂಗ ಮಾಡುತ್ತಿರುವ ದಯಾನಂದ ಸಾಗರ್ ಕಾಲೇಜ್ ಆಫ್ ಇಂಜಿನಿಯರಿಂಗ್‌ನಿಂದ ಯಾವುದೇ ಆಂತರಿಕ ತನಿಖೆ ಅಥವಾ ಕಠಿಣ ಕ್ರಮ ಎದುರಿಸುವ ಸಾಧ್ಯತೆಯಿಲ್ಲ ಎಂದು ಹೇಳಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಬಂಧಿತನಾಗಿದ್ದರೂ ಆತ ಕಾಲೇಜಿನಿಂದ ಯಾವುದೇ ಕ್ರಮ ಎದುರಿಸದೇ ಇದ್ದಲ್ಲಿ ಅದರ ವಿದ್ಯಾರ್ಥಿಯಾಗಿಯೇ ಮುಂದುವರಿಯುವ ಸಾಧ್ಯತೆ ಇದೆ ಎಂದು thequint.com ವರದಿ ತಿಳಿಸಿದೆ.
ಕಾಲೇಜಿನ ಆಡಳಿತ ಮಂಡಳಿಗೆ ಸಂಬಂಧಪಟ್ಟ ಹೆಸರು ಹೇಳಲಿಚ್ಛಿಸದ ಪ್ರತಿನಿಧಿಯೊಬ್ಬರು ಈ ಕುರಿತು ಮಾಧ್ಯಮವೊಂದರ ಜತೆ ಮಾತನಾಡುತ್ತಾ "ಆತ ಇನ್ನೂ ಚಿಕ್ಕ ಹುಡುಗ ಆತನ ಭವಿಷ್ಯದ ಬಗ್ಗೆಯೂ ನಾವು ಯೋಚಿಸಬೇಕಿದೆ. ಆತ ತಪ್ಪಿತಸ್ಥನೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಸದ್ಯ ಆತನ ವಿರುದ್ಧ ಯಾವುದೇ ಕ್ರಮಕೈಗೊಳ್ಳುವ ಕುರಿತು ನಾವು ಯೋಚಿಸಿಲ್ಲ" ಎಂದಿದ್ದಾರೆ.
ಆರೋಪಿ ಝಾ ಈ ಕಾಲೇಜಿನಲ್ಲಿ ಮೂರನೇ ವರ್ಷದ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾನೆ.
ದಯಾನಂದ ಸಾಗರ್ ಕಾಲೇಜಿನಲ್ಲಿ ರ‍್ಯಾಗಿಂಗ್ ಪ್ರಕರಣ ಸಂಭವಿಸಿದ್ದಲ್ಲಿ ಆಂತರಿಕ ತನಿಖೆ ನಡೆದು ತಪ್ಪಿತಸ್ಥ ವಿದ್ಯಾರ್ಥಿಗಳನ್ನು ಅಮಾನತುಗೊಳಿಸುವ ಪರಿಪಾಠವಿದೆಯಾದರೂ ಸೈಬರ್ ಅಪರಾಧ ಕುರಿತಂತೆ ಕಾಲೇಜಿನಲ್ಲಿ ಯಾವುದೇ ನೀತಿ ಅಥವಾ ನಿಯಮವಿಲ್ಲ ಎಂದೂ ಅಲ್ಲಿನ ಅಧಿಕಾರಿಯೊಬ್ಬರು ಹೇಳಿದ್ದಾರೆ.
ವಿಶಾಲ್ ಝಾ ಕಾಲೇಜಿಗೆ ಸೇರಿದಂದಿನಿಂದ ಯಾವುದೇ ಸಮಸ್ಯೆ ಸೃಷ್ಟಿಸಿಲ್ಲ. ಆತನಿಗೆ ಶೇ. 60 ಹಾಜರಾತಿಯಿದೆ. ಮುಂಬೈ ಪೊಲೀಸರು ಜನವರಿ 3ರಂದು ಬಂದಾಗಲೂ ಆತ ತರಗತಿಯಲ್ಲಿದ್ದ, ಅಲ್ಲಿಂದ ಆತನನ್ನು ಕರೆಸಿ ಪೊಲೀಸರಿಗೆ ಹಸ್ತಾಂತರಿಸಲಾಯಿತು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ ಎಂದು thequint.com ವರದಿ ಮಾಡಿದೆ.