ಬಸ್-ಟ್ರಕ್ ಮುಖಾಮುಖಿ ಢಿಕ್ಕಿ: 16 ಮಂದಿ ಮೃತ್ಯು, 26 ಮಂದಿಗೆ ಗಾಯ
ಜಾರ್ಖಂಡ್: ರಾಜ್ಯದ ಪಾಕುರ್ ಜಿಲ್ಲೆಯಲ್ಲಿ ಬುಧವಾರ ಬೆಳಗ್ಗೆ ಗ್ಯಾಸ್ ಸಿಲಿಂಡರ್‌ಗಳನ್ನು ಸಾಗಿಸುತ್ತಿದ್ದ ಟ್ರಕ್ ಮತ್ತು ಬಸ್ ನಡುವೆ ಭೀಕರ ಅಪಘಾತ ಏರ್ಪಟ್ಟಿದೆ. ಅಪಘಾತದಲ್ಲಿ 16 ಜನರು ಸಾವನ್ನಪ್ಪಿದ್ದು, 26 ಮಂದಿ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಅಮ್ರಪಾರ ಪೊಲೀಸ್ ಠಾಣಾ ವ್ಯಾಪ್ತಿಯ ಗೋವಿಂದಪುರ-ಸಾಹಿಬ್‌ಗಂಜ್ ರಾಜ್ಯ ಹೆದ್ದಾರಿಯಲ್ಲಿ ಬೆಳಿಗ್ಗೆ 8.30 ರ ಸುಮಾರಿಗೆ ಅಪಘಾತ ಸಂಭವಿಸಿದೆ. 40 ಪ್ರಯಾಣಿಕರಿದ್ದ ಬಸ್ ಸಾಹಿಬ್‌ಗಂಜ್ ಜಿಲ್ಲೆಯ ಬರ್ಹರ್ವಾದಿಂದ ದಿಯೋಘರ್ ಜಿಲ್ಲೆಯ ಜಸಿದಿಹ್‌ಗೆ ತೆರಳುತ್ತಿದ್ದು, ಎದುರಿನಿಂದ ಬರುತ್ತಿದ್ದ ಗ್ಯಾಸ್ ಟ್ಯಾಂಕರ್ ಜೊತೆಗೆ ಮುಖಾಮುಖಿಯಾಗಿದೆ.
"ಅಪಘಾತದಲ್ಲಿ ಸಾವಿನ ಸಂಖ್ಯೆ 16 ಕ್ಕೆ ಏರಿದೆ, 26 ಮಂದಿ ಗಾಯಗೊಂಡಿದ್ದಾರೆ. ಅವರಲ್ಲಿ ಕನಿಷ್ಠ ಮೂವರು ಗಂಭೀರ ಸ್ಥಿತಿಯಲ್ಲಿದ್ದಾರೆ" ಎಂದು ಪಾಕುರ್ ಆರೋಗ್ಯಾಧಿಕಾರಿ ತಿಳಿಸಿದ್ದಾರೆ.
ಗಾಯಾಳುಗಳನ್ನು ಪ್ರಾಥಮಿಕವಾಗಿ ಜಿಲ್ಲೆಯ ಸದರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಲವಾರು ಜನರು ಬಸ್ಸಿನೊಳಗೆ ಸಿಲುಕಿಕೊಂಡಿದ್ದರು. ಗ್ಯಾಸ್ ಕಟರ್‌ಗಳನ್ನು ತಂದು ಅವರನ್ನು ರಕ್ಷಿಸಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.
ಅಪಘಾತದ ಪರಿಣಾಮ ಎರಡೂ ವಾಹನಗಳ ಮುಂಭಾಗ ಒಂದಕ್ಕೊಂದು ಸಿಲುಕಿಕೊಂಡಿದೆ. ಬಸ್ ಮತ್ತು ಟ್ರಕ್ ಎರಡೂ ವೇಗವಾಗಿ ಚಲಿಸುತ್ತಿದ್ದವು. ಈ ಪ್ರದೇಶದಲ್ಲಿ ದಟ್ಟವಾದ ಮಂಜಿನ ಪರಿಣಾಮ ಎದುರಿನಿಂದ ಬರುವ ವಾಹನ ಕಾಣದ ಕಾರಣ ಅಪಘಾತ ಸಂಭವಿಸಿರಬಹುದು ಎಂದು ಶಂಕಿಸಲಾಗಿದೆ.
ಅದೃಷ್ಟವಶಾತ್, ಟ್ರಕ್‌ನಲ್ಲಿದ್ದ ಯಾವುದೇ ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡಿಲ್ಲ, ಇಲ್ಲದಿದ್ದರೆ ಅಪಘಾತವು ಇನ್ನೂ ಹೆಚ್ಚಿನ ಜೀವಗಳನ್ನು ಬಲಿ ಪಡೆಯುತ್ತಿದ್ದವು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ಮೃತಪಟ್ಟವರಿಗೆ ಸಂತಾಪ ಸೂಚಿಸಿದ್ದು, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಜಿಲ್ಲಾಡಳಿತಕ್ಕೆ ಸೂಚಿಸಿದ್ದಾರೆ.