×
Ad

ಪೈಲಟ್‌ ದೋಷವೇ ಬಿಪಿನ್‌ ರಾವತ್‌ ಹೆಲಿಕಾಪ್ಟರ್‌ ಅಪಘಾತದ ಪ್ರಮುಖ ಕಾರಣ: ವರದಿ

Update: 2022-01-05 17:52 IST

ಹೊಸದಿಲ್ಲಿ: ಕಳೆದ ತಿಂಗಳು ರಕ್ಷಣಾ ಪಡೆಯ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರ ಸಾವಿಗೆ ಕಾರಣವಾದ ಹೆಲಿಕಾಪ್ಟರ್ ಅಪಘಾತಕ್ಕೆ ಪೈಲಟ್ ದೋಷವೇ ಕಾರಣ ಎಂದು ಮೂಲಗಳು ತಿಳಿಸಿರುವುದಾಗಿ NDTV ವರದಿ ಮಾಡಿದೆ.

ಬಿಪಿನ್‌ ರಾವತ್, ಅವರ ಪತ್ನಿ ಮಧುಲಿಕಾ ಮತ್ತು ಇತರ 12 ಸಶಸ್ತ್ರ ಪಡೆಗಳ ಸಿಬ್ಬಂದಿ ಸಂಚರಿಸುತ್ತಿದ್ದ Mi-17V5 ಹೆಲಿಕಾಪ್ಟರ್  ತಮಿಳುನಾಡಿನ ಕೊಯಮತ್ತೂರಿನ ಬಳಿ ಪತನಗೊಂಡಿತ್ತು. 

ದೇಶವನ್ನೇ ಬೆಚ್ಚಿಬೀಳಿಸಿದ್ದ ಈ ದುರಂತದ ಕುರಿತು ತ್ರಿಸೇವಾ ತನಿಖೆಗೆ ಆದೇಶಿಸಲಾಗಿತ್ತು. ಅದರಂತೆ  ಭೂಸೇನೆ, ವಾಯುಸೇನೆ ಹಾಗೂ ನೌಕಾ ಸೇನೆ ಅಧಿಕಾರಿಗಳು ಪ್ರತ್ಯೇಕ ತನಿಖೆ ಕೈಗೊಂಡಿದ್ದರು. ತ್ರಿಸೇವಾ ತನಿಖೆಯನ್ನು ಪೂರ್ಣಗೊಳಿಸಿರುವ ತಂಡ ಬುಧವಾರ ವರದಿಯನ್ನು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರಿಗೆ ನೀಡಿದೆ.

ಭಾರತೀಯ ವಾಯುಪಡೆ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ವಿವೇಕ್ ರಾಮ್ ಚೌಧರಿ, ರಕ್ಷಣಾ ಇಲಾಖೆ ಕಾರ್ಯದರ್ಶಿ ಅಜಯ್ ಕುಮಾರ್ ಮತ್ತು ತನಿಖಾ ಸಮಿತಿ ಮುಖ್ಯಸ್ಥ ಏರ್ ಮಾರ್ಷಲ್ ಮನ್ವೇಂದ್ರ ಸಿಂಗ್ ಅವರು ಇಂದು ರಾಜನಾಥ್ ಸಿಂಗ್ ಅವರ ನಿವಾಸಕ್ಕೆ ತೆರಳಿ ವರದಿ ನೀಡಿದ್ದಾರೆ. 

ಸದ್ಯ ಹೊರ ಬಂದಿರುವ ಮಾಹಿತಿ ಪ್ರಕಾರ ಪ್ರತಿಕೂಲ ವಾತಾವಾರಣವನ್ನು ನಿಭಾಯಿಸಲು ಸಾಧ್ಯವಾಗದೆ ಪೈಲಟ್‌ ಎಡವಿದ್ದಾರೆ ಎನ್ನಲಾಗಿದೆ. ಮೋಡ ಕವಿದ ವಾತಾವರಣದಲ್ಲಿ ಹೆಲಿಕಾಪ್ಟರ್‌ ಪತನಕ್ಕೆ ಕಾರಣ ಎಂದು ಮಿಲಿಟರಿ ಮೂಲಗಳು ತಿಳಿಸಿರುವುದಾಗಿ ಎನ್‌ಡಿಟಿವಿ ವರದಿ ಮಾಡಿದೆ. 

ಅಪಘಾತಗೊಂಡ ಹೆಲಿಕಾಪ್ಟರ್‌ ತುಂಬಾ ಕೆಳಗಿನಿಂದ ಹಾರಾಡುತ್ತಿತ್ತು. ಅಲ್ಲಿಯೇ ಕಾಣುತ್ತಿದ್ದ ರೈಲ್ವೆ ಹಳಿಯನ್ನು ಅನುಸರಿಸಿ ಮೇಲೆ ಹಾರುತ್ತಿತ್ತು. ಆದರೆ ಹೆಲಿಕಾಪ್ಟರ್‌ ಹಾದು ಹೋಗುತ್ತಿದ್ದ ದಾರಿಯಲ್ಲಿ ಒಮ್ಮೆಲೇ ಮೋಡದ ಹೊದಿಕೆ ಎದುರು ಬಂದಿದ್ದರಿಂದ, ಅದನ್ನು ತಪ್ಪಿಸಲು ಹೆಲಿಕಾಪ್ಟರ್ ಪೈಲಟ್ಗಳು ಪ್ರಯತ್ನ ಪಟ್ಟರು ಇದೇ ಅಪಘಾತಕ್ಕೆ ಕಾರಣ ಎಂದು ಮೂಲಗಳು ತಿಳಿಸಿದೆ. 

ಅಪಘಾತದ ಕೊನೇ ಹಂತದವರೆಗೂ ಅದರಲ್ಲಿ ಇದ್ದ ಪೈಲಟ್ಗಳು ಸಮೀಪದ ಏರ್‌ ಸ್ಟೇಶನ್‌ ಗಳಿಗೆ ಯಾವುದೇ ಕರೆ ಮಾಡಿರಲಿಲ್ಲ. ಹೀಗಾಗಿ ಕೊನೇ ಕ್ಷಣದವರೆಗೂ ತುರ್ತು ಪರಿಸ್ಥಿತಿ ಇದೆ ಎಂಬುದು ಬೆಳಕಿಗೆ ಬಂದಿರಲಿಲ್ಲ ಎಂದು ತನಿಖಾ ವರದಿಯಲ್ಲಿ ಉಲ್ಲೇಖಿಸಲಾಗಿದೆಯೆಂದು ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News