×
Ad

ಬಂಗಾಳ ಬಿಜೆಪಿಯಲ್ಲಿ ಅಸಮಾಧಾನದ ಹೊಗೆ: ಪಕ್ಷದ ವಾಟ್ಸ್ಯಾಪ್ ಗ್ರೂಪ್‍ಗಳನ್ನು ತೊರೆದ ಕೇಂದ್ರ ಸಚಿವ

Update: 2022-01-05 19:08 IST
ಸಂತನು ಠಾಕೂರ್/ಪ್ರಧಾನಿ ನರೇಂದ್ರ ಮೋದಿ(photo:twitter/@Shantanu_bjp)
 

ಕೊಲ್ಕತ್ತಾ: ಪಶ್ಚಿಮ ಬಂಗಾಳ ಬಿಜೆಪಿಯಲ್ಲಿರುವ ಭಿನ್ನಾಭಿಪ್ರಾಯಗಳನ್ನು ಶಮನಗೊಳಿಸಲು  ಕೇಂದ್ರ ಗೃಹ ಸಚಿವ ಅಮಿತ್ ಶಾ  ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ಅವರು ಭೇಟಿ ನೀಡುವ ಮುನ್ನವೇ ನಡೆದ ಬೆಳವಣಿಗೆಯೊಂದರಲ್ಲಿ ಕೇಂದ್ರ ಬಂದರು ಮತ್ತು ಶಿಪ್ಪಿಂಗ್ ಖಾತೆಯ ರಾಜ್ಯ ಸಚಿವ ಸಂತನು ಠಾಕೂರ್ ಅವರು ತಾವು ಪಕ್ಷದ ವಿವಿಧ ವಾಟ್ಸ್ಯಾಪ್ ಗ್ರೂಪ್‍ಗಳನ್ನು ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ.

ಈ ವಿಚಾರದ ಬಗ್ಗೆ ರಾಜ್ಯ ಬಿಜೆಪಿ ನಾಯಕರು ಮೌನಕ್ಕೆ ಶರಣಾಗಿದ್ದಾರೆ. ಆದರೆ ಮೂಲಗಳ  ಪ್ರಕಾರ ತಾವು ಸೇರಿರುವ ಮಟುವಾ ಸಮುದಾಯಕ್ಕೆ  ರಾಜ್ಯ ಮತ್ತು ಜಿಲ್ಲಾ ಬಿಜೆಪಿ ಸಮಿತಿಗಳಲ್ಲಿ ಸೂಕ್ತ ಪ್ರಾತಿನಿಧ್ಯ ದೊರಕಿಲ್ಲ ಎಂಬ ಕುರಿತು ಠಾಕುರ್ ಅವರು ಅಸಮಾಧಾನ ಹೊಂದಿದ್ದಾರೆ. ಠಾಕುರ್ ಅವರು ಬೊಂಗಾವೊನ್ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ.

"ವಾಟ್ಸ್ಯಾಪ್ ಗ್ರೂಪ್‍ಗಳನ್ನು ತೊರೆಯುವ ನನ್ನ ನಿರ್ಧಾರದ ಕುರಿತು ಈಗ ಪ್ರತಿಕ್ರಿಯಿಸುವುದಿಲ್ಲ. ಸರಿಯಾದ ಸಮಯ ಬಂದಾಗ ಕಾರಣ ತಿಳಿಸುತ್ತೇನೆ"ಎಂದು ಅವರು ಹೇಳಿದ್ದಾರೆ.

ಇತ್ತೀಚಿನ ವಾರಗಳಲ್ಲಿ ಒಂಬತ್ತು ಮಂದಿ ಬಿಜೆಪಿ ಶಾಸಕರು ಪಕ್ಷದ ವಾಟ್ಸ್ಯಾಪ್ ಗ್ರೂಪ್‍ಗಳನ್ನು ತೊರೆದಿದ್ದಾರೆ. ಪಕ್ಷ ರಚಿಸಿದ ರಾಜ್ಯ ಸಮಿತಿಯಲ್ಲಿ ತಮ್ಮನ್ನು ಸೇರಿಸದೇ ಇರುವ ಕುರಿತು ಅಸಮಾಧಾನವನ್ನು ಈ ಶಾಸಕರು ವ್ಯಕ್ತಪಡಿಸಿದ್ದಾರೆ. ಹೆಚ್ಚಿನವರು ಮಟುವಾ ಸಮುದಾಯಕ್ಕೆ ಸೇರಿದವರೆಂಬುದು ಇಲ್ಲಿ ಉಲ್ಲೇಖಾರ್ಹ. ಆದರೆ ಇವರ ಪೈಕಿ ಕೆಲವರು ಹಿರಿಯ ನಾಯಕರ ಮಧ್ಯಪ್ರವೇಶದಿಂದ ಮತ್ತೆ ಗ್ರೂಪ್‍ಗೆ ಸೇರ್ಪಡೆಗೊಂಡಿದ್ದರು.

ಇಂದು ವಾಟ್ಸ್ಯಾಪ್ ಗ್ರೂಪ್ ತೊರೆದಿರುವ ಕೇಂದ್ರ ಸಚಿವ ಠಾಕುರ್ ಅವರು ಅಖಿಲ ಭಾರತ ಮಟುವಾ ಮಹಾಸಂಘದ ನಾಯಕರೂ ಆಗಿದ್ದಾರೆ.

ಈ ಬೆಳವಣಿಗೆ ಕುರಿತು ಪ್ರತಿಕ್ರಿಯಿಸಿರುವ ಪಕ್ಷದ ರಾಜ್ಯ ಘಟಕದ ಮುಖ್ಯಸ್ಥ ಸುಕಂತ ಮಜುಮ್ದಾರ್, "ಇದು ಪಕ್ಷದ ಆಂತರಿಕ ವಿಚಾರ. ಅವರ ಜತೆ ಮಾತನಾಡಿ ಸಮಸ್ಯೆ ಏನಿದ್ದರೂ ಪರಿಹರಿಸಲಾಗುವುದು" ಎಂದಿದ್ದಾರೆ.

ಜೆಪಿ ನಡ್ಡಾ ಅವರು ರಾಜ್ಯಕ್ಕೆ ಜನವರಿ 9ರಂದು ಭೇಟಿ ನೀಡಲಿದ್ದರೆ ಅಮಿತ್ ಶಾ ಈ ತಿಂಗಳಾಂತ್ಯಕ್ಕೆ ಭೇಟಿ ನೀಡುವ ಕಾರ್ಯಕ್ರಮವಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News