ಉಡುಪಿ ಜಿಲ್ಲೆಯಲ್ಲಿ ರಾತ್ರಿ ಕರ್ಫ್ಯೂ, ವೀಕೆಂಡ್ ಕರ್ಫ್ಯೂ ಜಾರಿ: ಜಿಲ್ಲಾಧಿಕಾರಿ ಕೂರ್ಮಾರಾವ್

Update: 2022-01-05 16:23 GMT

ಉಡುಪಿ, ಜ.5: ರಾಜ್ಯದಲ್ಲಿ ಒಮೈಕ್ರಾನ್ ಹರಡುವುದನ್ನು ನಿಯಂತ್ರಿಸುವ ನಿಟ್ಟಿನಲ್ಲಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ರಾಜ್ಯ ಸರಕಾರ ಹೊರಡಿಸಿರುವ ಹೆಚ್ಚುವರಿ ಮಾರ್ಗಸೂಚಿಗಳನ್ನು ಜಿಲ್ಲೆಯಾದ್ಯಂತ ಜ.5ರ ಬೆಳಗ್ಗೆ 10 ರಿಂದ ಜ.19ರ ಬೆಳಗ್ಗೆ 5 ಗಂಟೆಯವರೆಗೆ ಜಾರಿಗೊಳಿಸಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆದೇಶಿಸಿದ್ದಾರೆ.

ಜಿಲ್ಲೆಯಾದ್ಯಂತ ಈ ಹಿಂದೆ ಹೊರಡಿಸಿದ ಮಾರ್ಗಸೂಚಿಗಳಂತೆ ಪ್ರತಿದಿನ ರಾತ್ರಿ 10ರಿಂದ ಬೆಳಗಿನ ಜಾವ 5ಗಂಟೆಯವರೆಗೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ. ಎಲ್ಲಾ ಕಚೇರಿಗಳು ವಾರದ ಐದು ದಿನಗಳು ಮಾತ್ರ ಅಂದರೆ ಸೋಮವಾರದಿಂದ ಶುಕ್ರವಾರದವರೆಗೆ ಕಾರ್ಯಾಚರಿಸಬೇಕು ಎಂದು ಆದೇಶ ದಲ್ಲಿ ತಿಳಿಸಲಾಗಿದೆ.

ಜಿಲ್ಲೆಯಾದ್ಯಂತ ಶುಕ್ರವಾರ ರಾತ್ರಿ 10ರಿಂದ ಸೋಮವಾರ ಬೆಳಗ್ಗೆ 5ಗಂಟೆಯವರೆಗೆ ವಾರಾಂತ್ಯ ಕರ್ಫ್ಯೂ ಜಾರಿಯಲ್ಲಿರುತ್ತದೆ. ಈ ಸಂದರ್ಭದಲ್ಲಿ ವಾರಾಂತ್ಯ ಕರ್ಫ್ಯೂಗೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಪಾಲಿಸಬೇಕು. ಸಾರ್ವಜನಿಕರ ಸಾರಿಗೆ ಸಂಸ್ಥೆಗಳು ವಾರಾಂತ್ಯದಲ್ಲಿ ತುರ್ತು ಅವಶ್ಯಕತೆಗನುಗುಣವಾಗಿ ಸಾರ್ವಜನಿಕರಿಗೆ ಸಂಚರಿಸಲು ಅನುಕೂಲವಾಗುವ ನಿಟ್ಟಿನಲ್ಲಿ ಕಾರ್ಯಚರಿಸಬೇಕು ಎಂದು ಆದೇಶ ವಿವರಿಸಿದೆ.

ಪಬ್‌ಗಳು, ಕ್ಲಬ್‌ಗಳು, ರೆಸ್ಟೋರೆಂಟ್‌ಗಳು, ಬಾರ್‌ಗಳು, ಹೊಟೇಲ್‌ಗಳು ಹಾಗೂ ಹೊಟೇಲ್‌ಗಳಲ್ಲಿ ಆಹಾರ ಸೇವಿಸಲು ಕಾಯ್ದಿರಿಸುವ ಸ್ಥಳಗಲ್ಲಿ ಶೇ.50ರಷ್ಟು ಆಹನ ಸಾಮರ್ಥ್ಯದೊಂದಿಗೆ ಕೋವಿಡ್ ಸೂಕ್ತ ನಡವಳಿಕೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಮೂಲಕ ಕಾರ್ಯಾಚಿರಸಬೇಕು. ಎರಡು ಡೋಸ್ ಲಸಿಕೆಯನ್ನು ಪಡೆದಿರುವ ವ್ಯಕ್ತಿಗಳಿಗೆ ಮಾತ್ರ ಇಂತಹ ಸ್ಥಳಗಳಿಗೆ ಪ್ರವೇಶ ನೀಡಬೇಕು.

ಸಿನಿಮಾ ಹಾಲ್, ಮಲ್ಟಿಫ್ಲೆಕ್ಸ್, ಥಿಯೇಟರ್, ರಂಗಮಂದಿರ, ಅಡಿಟೋರಿಯಂ ಹಾಗೂ ಇತರ ಸ್ಥಳಗಳಲ್ಲಿ ಶೇ.50ರಷ್ಟು ಆಸನ ಸಾಮರ್ಥ್ಯ ದೊಂದಿಗೆ ಕೋವಿಡ್‌ನ ಎಲ್ಲಾ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಪಾಲಿಸಿ ಕಾರ್ಯನಿರ್ವಹಿಸಬೇಕು. ತೆರೆದ ಪ್ರದೇಶಗಳಲ್ಲಿ ನಡೆಯುವ ಮದುವೆ ಕಾರ್ಯಕ್ರಮಕ್ಕೆ 200, ಹಾಲ್‌ಗಳಲ್ಲಿ ನಡೆಸುವ ಕಾರ್ಯಕ್ರಮಕ್ಕೆ 100 ಜನರು ಮಾತ್ರ ಪಾಲ್ಗೊಳ್ಳಬೇಕು.

ಧಾರ್ಮಿಕ ಸ್ಥಳಗಳಲ್ಲಿ ದರ್ಶನಕ್ಕೆ ಮಾತ್ರ ಅವಕಾಶವಿದ್ದು, ಯಾವುದೇ ಸೇವೆ ಹಾಗೂ ಇತರ ಚಟುವಟಿಕೆಗೆ ಅವಕಾಶವಿಲ್ಲ. ಏಕಕಾಲದಲ್ಲಿ 2 ಡೋಸ್ ಪಡೆದ 50 ಜನಕ್ಕೆ ಮಾತ್ರ ಪ್ರವೇಶಾವಕಾಶವಿರುತ್ತದೆ. ಮಾಲ್‌ಗಳು, ಶಾಪಿಂಗ್ ಕಟ್ಟಡಗಳು, ಎಲ್ಲಾ ರೀತಿಯ ಅಂಗಡಿಗಳು ವಾರದ ದಿನಳಲ್ಲಿ ಎಂದಿನಂತೆ ಕಾರ್ಯಾಚರಿಸುತ್ತವೆ. ಎಲ್ಲಾ ರೀತಿಯ ರ್ಯಾಲಿಗಳು, ಧರಣಿ, ಪ್ರತಿಭಟನೆಗಳನ್ನು ನಿಷೇಧಿಸಲಾಗಿದೆ.

ಕೋವಿಡ್-19 ಸಾಂಕ್ರಾಮಿಕ ಸೋಂಕು ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹೊರಡಿಸಿರುವ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಅಲ್ಲದೇ ಸಾರ್ವಜನಿಕರ ಹಿತದೃಷ್ಟಿಯಿಂದ ವಿವಿಧ ಇಲಾಖೆಗಳು ಹೊರಡಿಸುವ ಸೂಚನೆ, ಮಾರ್ಗಸೂಚಿ ಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಈ ಆದೇಶಗಳನ್ನು ಪಾಲಿಸದೇ ಇರುವವ ಮೇಲೆ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು ದಾಖಲಿಸಲಾಗುವುದು ಎಂದು ಜಿಲ್ಲಾಧಿಕಾರಿಗಳ ಆದೇಶದಲ್ಲಿ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News