×
Ad

‘ಮಹಿಳಾ ಸ್ವಾಸ್ಥಕ್ಕಾಗಿ ಮೊಬೈಲ್ ಕ್ಲಿನಿಕ್’ಗೆ ಚಾಲನೆ

Update: 2022-01-05 22:16 IST

ಮಂಗಳೂರು, ಜ.5: ರೋಟರಿ ಕ್ಲಬ್ ಮಂಗಳೂರು ವತಿಯಿಂದ ‘ಮಹಿಳಾ ಸ್ವಾಸ್ಥಕ್ಕಾಗಿ ಮೊಬೈಲ್ ಕ್ಲಿನಿಕ್’ನ ಉದ್ಘಾಟನಾ ಕಾರ್ಯಕ್ರಮವು ಬುಧವಾರ ನಗರದ ಪುರಭವನದಲ್ಲಿ ನಡೆಯಿತು.

ಮೊಬೈಲ್ ಕ್ಲಿನಿಕ್‌ಗೆ ಚಾಲನೆ ನೀಡಿ ಮಾತನಾಡಿದ ರೋಟರಿ ಫೌಂಡೇಶನ್ ಟ್ರಸ್ಟಿ ಡಾ. ಭರತ್ ಎಸ್.ಪಾಂಡ್ಯ ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್, ಸರ್ವಿಕಲ್ ಕ್ಯಾನ್ಸರ್ ಮತ್ತು ಬಾಯಿ ಕ್ಯಾನ್ಸರ್‌ಗಳು ಹೆಚ್ಚಾಗಿ ಕಂಡುಬರುತ್ತಿವೆ. ಭಾರತಕ್ಕೆ ಹೋಲಿಸಿದರೆ ಅಮೆರಿಕಾದಲ್ಲಿ ಕ್ಯಾನ್ಸರ್ ಚಿಕಿತ್ಸೆಯ ಪ್ರಯೋಜನ ಶೇ.30ರಷ್ಟು ಹೆಚ್ಚಾಗಿದೆ. ಭಾರತದಲ್ಲಿ ಶೇ.50ರಷ್ಟು ಕ್ಯಾನ್ಸರ್‌ನ್ನು 3 ಮತ್ತು 4 ಹಂತದಲ್ಲಿ ಪತ್ತೆ ಮಾಡುತ್ತಿರುವುದೇ ಇದಕ್ಕೆ ಮುಖ್ಯ ಕಾರಣವಾಗಿದೆ ಎಂದರು.

ಕ್ಯಾನ್ಸರ್‌ಗೆ ಪರಿಣಾಮಕಾರಿ ಚಿಕಿತ್ಸೆಯಾಗಬೇಕಾದರೆ ಆರಂಭಿಕ ಹಂತದಲ್ಲೇ ಗುರುತಿಸುವ ಅಗತ್ಯವುದೆ. ಈ ನಿಟ್ಟಿನಲ್ಲಿ ರೋಟರಿ ಕ್ಲಬ್ ಮಂಗಳೂರು ಆರಂಭಿಸಿರುವ ಮೊಬೈಲ್ ಕ್ಲಿನಿಕ್ ನೆರವಾಗಲಿದೆ ಎಂದು ಡಾ. ಭರತ್ ಎಸ್. ಪಾಂಡ್ಯ ಹೇಳಿದರು.

ಶಾಸಕ ವೇದವ್ಯಾಸ ಕಾಮತ್ ಮಾತನಾಡಿ ಸರಕಾರ ಅಥವಾ ಜಿಲ್ಲಾಡಳಿತ ಮಾಡದ ಹಲವಾರು ಕೆಲಸಗಳನ್ನು ಕೂಟ ರೋಟರಿ ಕ್ಲಬ್ ಮಾಡುತ್ತಿದೆ. ಇದೀಗ ಮಂಗಳೂರು ರೋಟರಿ ಕ್ಲಬ್ ಮೂಲಕ ಆರಂಭಿಸಲಾಗಿರುವ ಮೊಬೈಲ್ ಕ್ಲಿನಿಕ್ ಗ್ರಾಮೀಣ ಭಾಗದ ಬಡ ಮಹಿಳೆಯರಿಗೆ ಹೆಚ್ಚು ಪ್ರಯೋಜನಾಕರಿಯಾಗಲಿದೆ. ಕ್ಯಾನ್ಸರ್‌ನ್ನು ಆರಂಭದಲ್ಲಿ ಪತ್ತೆ ಹಚ್ಚಿ ಶೀಘ್ರದಲ್ಲೇ ಚಿಕಿತ್ಸೆ ಪಡೆಯಲು ನೆರವಾಗಲಿದೆ ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಯೆನೆಪೊಯ ವಿವಿ ಕುಲಾಧಿಪತಿ ಯೆನೆಪೊಯ ಅಬ್ದುಲ್ಲಾ ಕುಂಞಿ, ರೋಟರಿ ಸಹಾಯಕ ಗವರ್ನರ್ ಯತೀಶ್ ಬೈಕಂಪಾಡಿ ಉಪಸ್ಥಿತರಿದ್ದರು. ಮಂಗಳೂರು ರೋಟರಿ ಕ್ಲಬ್‌ನ ಅಧ್ಯಕ್ಷ ಸುಧೀರ್ ಕುಮಾರ್ ಜಲಾನ್ ಸ್ವಾಗತಿಸಿದರು. ರೋಟರಿ ಗ್ಲೋಬಲ್ ಗ್ರಾಂಟ್ ಪ್ರಾಜೆಕ್ಟ್ ಚೇರ್‌ಮನ್ ಜತಿನ್ ವಿ. ಅತ್ತಾವರ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಅಜಯ್ ಕಾಮತ್ ಕಾರ್ಯಕ್ರಮ ನಿರೂಪಿಸಿದರು.

ಸುಸಜ್ಜಿತವಾದ ಬಸ್‌ನ್ನು ಸುಸಜ್ಜಿತ ಕ್ಲಿನಿಕ್ ಆಗಿ ಪರಿವರ್ತಿಸಿಲಾಗಿದ್ದು ಇದರಲ್ಲಿ ಸ್ತನ ಕ್ಯಾನ್ಸರ್ ಪತ್ತೆಗಾಗಿ ಅತ್ಯಾಧುನಿಕ ತಂತ್ರಜ್ಞಾನದ ಮ್ಯಾಮೊಗ್ರಾಫಿ ಮೆಷಿನ್, ಸೆರ್ವಿಕಲ್ ಕ್ಯಾನ್ಸರ್ ಪತ್ತೆಗಾಗಿ ಕೊಲ್ಪೋಸ್ಕೋಪ್ ಮೆಷಿನ್‌ಗಳಿವೆ. ಜಿಲ್ಲೆಯಲ್ಲಿ ಎಲ್ಲರ ಸಹಕಾರದಿಂದ ಆರೋಗ್ಯ ಶಿಬಿರಗಳನ್ನು ಆಯೋಜಿಸಿ ಮಹಿಳೆಯರಲ್ಲಿನ ಬಾಯಿ ಕ್ಯಾನ್ಸರ್, ಸ್ತನ ಕ್ಯಾನ್ಸರ್, ಸೆರ್ವಿಕಲ್ ಮತ್ತಿತರ ರೋಗಗಳನ್ನು ಪತ್ತೆ ಮಾಡಲಾಗುವುದು. ಬಡತನ ರೇಖೆಗಿಂತ ಕೆಳಗಿನವರಿಗೆ ಉಚಿತ ಚಿಕಿತ್ಸೆಯನ್ನು ಯೆನೆಪೊಯ ಆಸ್ಪತ್ರೆಯಲ್ಲಿ ನೀಡಲಾಗುವುದು ಎಂದು ಯೇನೆಪೊಯ ವಿವಿ ಕುಲಪತಿ ಡಾ. ವಿಜಯ ಕುಮಾರ್ ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News