ಮಂಗಳೂರು: ಮಹಿಳಾ ಠಾಣೆಯ ಎಸ್ಸೈ ಸಹಿತ ಆರು ಮಂದಿ ಅಮಾನತು

Update: 2022-01-05 17:19 GMT

ಮಂಗಳೂರು, ಜ.5: ನಗರದ ಪಾಂಡೇಶ್ವರದಲ್ಲಿರುವ ಮಹಿಳಾ ಪೊಲೀಸ್ ಠಾಣೆಯ ಎಸ್ಸೈ ಸಹಿತ ಆರು ಮಂದಿ ಪೊಲೀಸರನ್ನು ಪ್ರತ್ಯೇಕ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಅಮಾನತು ಮಾಡಿದ್ದಾರೆ.

ಪೊಕ್ಸೊ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಲು ನಿರ್ಲಕ್ಷ್ಯ ತಾಳಿದ ಆರೋಪದ ಮೇರೆಗೆ ಎಸ್ಸೈ ರೋಸಮ್ಮ ಅವರನ್ನು ಅಮಾನತು ಮಾಡಲಾಗಿದೆ. ಪೊಲೀಸ್ ಹೆಡ್‌ಕಾನ್ಸ್‌ಟೇಬಲ್ ವಿರುದ್ಧ ಪೊಕ್ಸೊ ಕಾಯ್ದೆಯಡಿ ದೂರು ಬಂದಾಗ ಎಸ್ಸೈ ರೋಸಮ್ಮ ಗಂಭೀರವಾಗಿ ಪರಿಗಣಿಸದೆ ನಿರ್ಲಕ್ಷಿಸಿದ ಹಿನ್ನೆಲೆಯಲ್ಲಿ ಈ ಕ್ರಮ ಜರುಗಿಸಲಾಗಿದೆ ಎಂದು ಆಯುಕ್ತರು ತಿಳಿಸಿದ್ದಾರೆ.

ಮಹಿಳಾ ಠಾಣೆಯ ಐವರು ಸಿಬ್ಬಂದಿಯು ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ಮದ್ಯಪಾನ ಮಾಡಿ ಇಲಾಖೆಯ ನಿಯಮಾವಳಿಗೆ ವಿರುದ್ಧವಾಗಿ ವರ್ತಿಸಿದ್ದರು. ಈ ಬಗ್ಗೆ ಸಿಸಿಟಿವಿ ದೃಶ್ಯಾವಳಿ ಹಾಗೂ ಡಿಸಿಪಿ ಮತ್ತು ಎಸಿಪಿ ನೀಡಿದ ವರದಿಯನ್ನು ಆಧರಿಸಿ ಇಬ್ಬರು ಎಎಸ್ಸೈ, ಇಬ್ಬರು ಹೆಡ್‌ಕಾನ್ಸ್‌ಟೇಬಲ್, ಒಬ್ಬ ಪೊಲೀಸ್ ಕಾನ್ಸ್‌ಟೇಬಲ್ ಸಹಿತ ಐವರನ್ನು ಪೊಲೀಸ್ ಆಯುಕ್ತರು ಅಮಾನತು ಮಾಡಿದ್ದಾರೆ.

ಬ್ರೇಕ್ ಡ್ಯಾನ್ಸ್ ಅಲ್ಲ: ಶಶಿಕುಮಾರ್ 

ಮಂಗಳೂರು ಮಹಿಳಾ ಠಾಣೆಯ ಇನ್‌ಸ್ಪೆಕ್ಟರ್ ಸಹಿತ ಪೊಲೀಸರು ಕರ್ತವ್ಯದ ಅವಧಿಯಲ್ಲಿ ಠಾಣೆಯಲ್ಲಿ ಮಾಡಿದ್ದಾರೆನ್ನಲಾದ ಬ್ರೇಕ್ ಡ್ಯಾನ್ಸ್ ವೀಡಿಯೋ ಬುಧವಾರ ಭಾರೀ ವೈರಲ್ ಆಗಿತ್ತು. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪೊಲೀಸ್ ಆಯುಕ್ತ ಶಶಿಕುಮಾರ್ ‘ಇದು ಠಾಣೆಯಲ್ಲಿ ಬ್ರೇಕ್ ಡ್ಯಾನ್ಸ್ ಮಾಡಿರುವ ವೀಡಿಯೋ ಅಲ್ಲ. ಕರ್ತವ್ಯದ ಅವಧಿಯಲ್ಲಿ ಯಾರೂ ಬ್ರೇಕ್ ಡ್ಯಾನ್ಸ್ ಮಾಡಿಲ್ಲ. ಕಳೆದ ದಸರಾ ಹಬ್ಬದ ಸಂದರ್ಭ ಹುಲಿವೇಷ ಸಹಿತ ಇತರ ಕಲಾತಂಡದೊಂದಿಗೆ ಸಂಭ್ರಮಾಚರಣೆಯ ವೀಡಿಯೋ ಆಗಿದೆ. ಈ ಸಂಭ್ರಮಾಚರಣೆಯಲ್ಲಿ ಠಾಣೆಗಳ ಎಲ್ಲಾ ಅಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು. ಇದನ್ನು ಇಲಾಖೆಯ ಸೂಚನೆಯ ಮೇರೆಗೆ ಮಾಡಲಾಗಿತ್ತು. ಈ ಬಗ್ಗೆ ಯಾವುದೇ ಶಿಸ್ತಿನ ಕ್ರಮ ಜರಗಿಸಿಲ್ಲ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News