ಕಝಕಿಸ್ತಾನದಲ್ಲಿ ಹಿಂಸೆಗೆ ತಿರುಗಿದ ಪ್ರತಿಭಟನೆ: ಕೆಲವು ಪ್ರಾಂತಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ
ನೂರ್‌ಸುಲ್ತಾನ್, ಜ.5: ಈ ವರ್ಷಾರಂಭದಲ್ಲಿ ಕಝಕಿಸ್ತಾನದಲ್ಲಿ ಎಲ್‌ಪಿಜಿ ಬೆಲೆಯಲ್ಲಿ ತೀವ್ರ ಏರಿಕೆಯಾಗಿರುವುದನ್ನು ಖಂಡಿಸಿ ನಡೆಯುತ್ತಿರುವ ಪ್ರತಿಭಟನೆ ಹಿಂಸೆಗೆ ತಿರುಗಿದ ಹಿನ್ನೆಲೆಯಲ್ಲಿ ಅಲ್ಮಾಟಿ ನಗರ ಮತ್ತು ಮಂಗಿಸ್ತವು ಪ್ರಾಂತದಲ್ಲಿ 2 ವಾರಗಳ ತುರ್ತು ಪರಿಸ್ಥಿತಿ ಘೋಷಿಸಲಾಗಿದೆ ಎಂದು ಅಧ್ಯಕ್ಷ ಕಾಸಿಂ ಜೊಮಾರ್ಟ್ ಟೊಕಯೇವ್ ಹೇಳಿದ್ದಾರೆ.
ಸರಕಾರದ ಮತ್ತು ಸೇನಾ ಕೇಂದ್ರ, ಕಚೇರಿಯ ಮೇಲೆ ಆಕ್ರಮಣಕ್ಕೆ ಪ್ರತಿಭಟನಾಕಾರರು ಕರೆ ನೀಡಿರುವುದು ಕಾನೂನು ಬಾಹಿರವಾಗಿದೆ. ಸರಕಾರ ಇದಕ್ಕೆ ಬಗ್ಗುವುದಿಲ್ಲ. ಸಂಘರ್ಷದ ಬದಲು ಪರಸ್ಪರ ವಿಶ್ವಾಸ ಮತ್ತು ಸೌಹಾರ್ದ ಮಾತುಕತೆಗೆ ನಮ್ಮ ಆದ್ಯತೆಯಿದೆ ಎಂದು ವೀಡಿಯೊ ಸಂದೇಶದಲ್ಲಿ ಅವರು ಹೇಳಿದ್ದಾರೆ. ಅಧ್ಯಕ್ಷರ ಸಂದೇಶದ ಮಧ್ಯೆಯೇ ಅಲ್ಮಾಟಿಯಲ್ಲಿ ಪ್ರತಿಭಟನೆ ತೀವ್ರಗೊಂಡಿದ್ದು ಮೇಯರ್ ಕಚೇರಿಗೆ ಕಲ್ಲು ತೂರಾಟ ನಡೆದಿದೆ. ಪೊಲೀಸರು ಅಶ್ರುವಾಯು ಸಿಡಿಸಿ ಪ್ರತಿಭಟನಾಕಾರರನ್ನು ಚದುರಿಸಿದರು ಎಂದು ವರದಿಯಾಗಿದೆ.
ಎಲ್‌ಪಿಜಿ ಬೆಲೆಯಲ್ಲಿ ಕೊಂಚ ಇಳಿಕೆಯಾಗಲಿದೆ ಎಂದು ಸರಕಾರ ಮಂಗಳವಾರ ಹೇಳಿಕೆ ನೀಡಿತ್ತು. ಆದರೂ ಪ್ರತಿಭಟನೆ ಮುಂದುವರಿದಿದೆ. ಕಝಕಿಸ್ತಾನದಲ್ಲಿ ಎಲ್‌ಪಿಜಿ ದರ ಅತ್ಯಂತ ಕಡಿಮೆ ಇರುವುದರಿಂದ ಬಹುತೇಕ ವಾಹನಗಳು ಎಲ್‌ಪಿಜಿ ಇಂಧನ ಬಳಸುತ್ತಿದೆ. ಆದರೆ ಇಷ್ಟು ಕಡಿಮೆ ದರಕ್ಕೆ ಎಲ್‌ಪಿಜಿ ಪೂರೈಸಿದರೆ ಖಜಾನೆಗೆ ಭಾರೀ ಹೊರೆ ಬೀಳುತ್ತದೆ ಎಂದು ಹೇಳಿರುವ ಸರಕಾರ ಜನವರಿ 1ರಿಂದ ಎಲ್‌ಪಿಜಿ ದರ ಏರಿಸಿದೆ.