"ಇಸ್ರೇಲ್-ಪೆಲೆಸ್ತೀನ್ ಬಿಕ್ಕಟ್ಟಿನ ಬಗ್ಗೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಹೆಚ್ಚಿನ ಗಮನ ನೀಡಬೇಕಿದೆ"
ನ್ಯೂಯಾರ್ಕ್, ಜ.5: ಪೆಲೆಸ್ತೀನ್-ಇಸ್ರೇಲ್ ನಡುವೆ ಹಲವು ದಶಕಗಳಿಂದ ಮುಂದುವರಿದಿರುವ ಬಿಕ್ಕಟ್ಟಿನ ಪರಿಹಾರಕ್ಕೆ ವಿಶ್ವಸಂಸ್ಥೆಯ ಭದ್ರತಾ ಸಮಿತಿ ಹೆಚ್ಚಿನ ಗಮನ ವಹಿಸುವ ಅಗತ್ಯವಿದೆ ಎಂದು ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ನೂತನ ಅಧ್ಯಕ್ಷೆ, ನಾರ್ವೆಯ ಪ್ರತಿನಿಧಿ ಮೋನಾ ಜೌಲ್ ಹೇಳಿದ್ದಾರೆ.
ಮಧ್ಯಪ್ರಾಚ್ಯದಾದ್ಯಂತ ಇತರ ಹಲವು ಸಂಘರ್ಷಗಳು ಭುಗಿಲೆದ್ದ ಪರಿಣಾಮ ಬದಿಗೆ ಸರಿದಿರುವ ಈ ವಿಷಯದ ಬಗ್ಗೆ ಅಂತರಾಷ್ಟ್ರೀಯ ಗಮನ ಕಡಿಮೆಯಾಗಿದೆ ಎಂದವರು ವಿಷಾದಿಸಿದ್ದಾರೆ. ಆಕ್ರಮಿತ ಪ್ರದೇಶದಲ್ಲಿ ಇಸ್ರೇಲ್ ವಸಾಹತು ನಿರ್ಮಿಸುತ್ತಿರುವ ಏಕಪಕ್ಷೀಯ ಕ್ರಮವನ್ನು ಖಂಡಿಸಿದ ಅವರು, ಆದರೆ ಎರಡು ಕೈ ಸೇರಿದರೆ ಮಾತ್ರ ಚಪ್ಪಾಳೆಯಾಗುತ್ತದೆ ಎಂಬುದನ್ನು ಮರೆಯುವಂತಿಲ್ಲ ಎಂದರು.
ಇಸ್ರೇಲ್-ಪೆಲೆಸ್ತೀನಿಯನ್ ಸಂಘರ್ಷದ ಕುರಿತ ವಿಶ್ವಸಂಸ್ಥೆಯ ಭದ್ರತಾ ಸಮಿತಿಯ ಚರ್ಚೆಯನ್ನು ಸಚಿವರ ಮಟ್ಟದಲ್ಲಿ ನಡೆಸಲು ನಾರ್ವೆ ನಿರ್ಧರಿಸಿದ್ದು ಜನವರಿ 19ರಂದು ವಿಶ್ವಶಾಂತಿ ಮತ್ತು ಭದ್ರತೆಯ ವಿಷಯದಲ್ಲಿ ನಡೆಯುವ ಮಿನಿ ಓಸ್ಲೋ ಸಭೆಗೆ ವಿಶ್ವಸಂಸ್ಥೆ ಭದ್ರತಾ ಸಮಿತಿ ಸದಸ್ಯರನ್ನು ಆಹ್ವಾನಿಸುವ ಯೋಜನೆಯಿದೆ ಎಂದು ಅವರು ಹೇಳಿದ್ದಾರೆ.
ಇಸ್ರೇಲ್ ಮತ್ತು ಪೆಲೆಸ್ತೀನ್ ಜನತೆ ಇನ್ನೂ ಹೆಚ್ಚಿನದಕ್ಕೆ ಅರ್ಹರಾಗಿದ್ದಾರೆ. ಮ್ಯಾಡ್ರಿಡ್ ಸಮಾವೇಶದ 30 ವರ್ಷದ ಬಳಿಕ, ಇಸ್ರೇಲ್-ಪೆಲೆಸ್ತೀನಿಯನ್ ಬಿಕ್ಕಟ್ಟಿನ ಬಗ್ಗೆ ಇನ್ನಷ್ಟು ಗಮನ ಹರಿಸುವ ಅಗತ್ಯವಿದೆ ಎಂದು ಮೋನಾ ಜೌಲ್ ಹೇಳಿದ್ದಾರೆ. ವಿಶ್ವಸಂಸ್ಥೆಯಲ್ಲಿ ನಾರ್ವೆಯ ಕಾಯಂ ಪ್ರತಿನಿಧಿಯಾಗಿರುವ ಜೌಲ್, ಭದ್ರತಾ ಸಮಿತಿಯ ನೂತನ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.
ಈ ದೀರ್ಘಾವಧಿಯ ಬಿಕ್ಕಟ್ಟಿಗೆ ರಾಜಕೀಯ ಪರಿಹಾರ ಕಂಡುಕೊಳ್ಳುವ ಬಗ್ಗೆ ಸಮಿತಿ ಗಮನ ಕೇಂದ್ರೀಕರಿಸುವ ಅಗತ್ಯವಿದೆ ಮತ್ತು ಎರಡು ದೇಶ ಪರಿಹಾರಕ್ಕೆ ತೊಡಕಾಗುವ ಯಾವುದೇ ಪ್ರಯತ್ನವನ್ನು ನಿವಾರಿಸುವುದನ್ನು ಖಾತರಿ ಪಡಿಸಬೇಕಿದೆ. ಮಾತುಕತೆಯ ವೇದಿಕೆಯಲ್ಲಿ ಪೆಲೆಸ್ತೀನಿಯರನ್ನು ಪ್ರತಿನಿಧಿಸುವ ಏಕಸಂಸ್ಥೆಯ ಉಪಸ್ಥಿತಿಯನ್ನು ಖಾತರಿ ಪಡಿಸಬೇಕಿದೆ ಎಂದವರು ಹೇಳಿದ್ದಾರೆ.
1993ರಲ್ಲಿ ನಾರ್ವೆಯ ರಾಜಧಾನಿ ಓಸ್ಲೋದಲ್ಲಿ ಇಸ್ರೇಲ್-ಪೆಲೆಸ್ತೀನ್ ನಡುವಿನ ಶಾಂತಿ ಒಪ್ಪಂದದಲ್ಲಿ ಜೌಲ್ ಪ್ರಮುಖ ಪಾತ್ರ ವಹಿಸಿದ್ದರು. ಇಸ್ರೇಲ್ ಪ್ರಧಾನಿ ಯಿಝಾಕ್ ರಾಬಿನ್ ಮತ್ತು ಪೆಲೆಸ್ತೀನ್ ಮುಖಂಡ ಯಾಸರ್ ಅರಾಫತ್ ಈ ಸಭೆಯಲ್ಲಿ ಉಭಯ ದೇಶಗಳನ್ನು ಪ್ರತಿನಿಧಿಸಿದ್ದರು. ಉಭಯ ಕಡೆಯಲ್ಲಿ ಎರಡು ಧೈರ್ಯಶಾಲಿ ಮುಖಂಡರಿದ್ದರೆ ಯಾವುದೇ ನಿರ್ಧಾರಕ್ಕೆ ಬರಬಹುದು. ಈ ಅಂಶವೇ ಓಸ್ಲೋ ಒಪ್ಪಂದ ರೂಪುಗೊಳ್ಳುವಲ್ಲಿ ನಿರ್ಣಾಯಕ ಪಾತ್ರ ವಹಿಸಿದೆ. ಈಗಿನ ಸಂದರ್ಭದಲ್ಲೂ ಪೆಲೆಸ್ತೀನೀಯರ ಧ್ವನಿಯಾಗಿ ಒಂದು ಸಂಘಟನೆ ಮುಂದೆ ಬಂದರೆ ಶಾಂತಿ ಪ್ರಕ್ರಿಯೆಗೆ ಪೂರಕವಾಗಲಿದೆ ಎಂದವರು ಹೇಳಿದರು.