ಒಮೈಕ್ರಾನ್ ಸೋಂಕು ಸಮುದಾಯಕ್ಕೆ ಹರಡಿರುವ ಶಂಕೆ: 8 ದೇಶಗಳ ವಿಮಾನಗಳಿಗೆ ಹಾಂಕಾಂಗ್ ನಿಷೇಧ
ಹಾಂಕಾಂಗ್ ಸಿಟಿ, ಜ.5: ಹಾಂಕಾಂಗ್‌ನಲ್ಲಿ ಒಮೈಕ್ರಾನ್ ಸೋಂಕು ಪ್ರಕರಣ ದಿಢೀರನೆ ಏರಿಕೆಯಾಗಿರುವ ಹಿನ್ನೆಲೆಯಲ್ಲಿ ನಿರ್ಬಂಧ ಕ್ರಮಗಳನ್ನು ಬಿಗಿಗೊಳಿಸಲಾಗಿದ್ದು 8 ದೇಶಗಳಿಂದ ಆಗಮಿಸುವ ವಿಮಾನಗಳ ಮೇಲೆ 2 ವಾರಗಳ ನಿಷೇಧ ವಿಧಿಸಿರುವುದಾಗಿ ಅಧಿಕಾರಿಗಳು ಘೋಷಿಸಿದ್ದಾರೆ.
ಆಸ್ಟ್ರೇಲಿಯಾ, ಕೆನಡಾ, ಫ್ರಾನ್ಸ್, ಭಾರತ, ಪಾಕಿಸ್ತಾನ, ಪಿಲಿಪ್ಪೀನ್ಸ್, ಬ್ರಿಟನ್ ಮತ್ತು ಅಮೆರಿಕದಿಂದ ಆಗಮಿಸುವ ವಿಮಾನಗಳ ಮೇಲೆ(ಸಂಪರ್ಕ ವಿಮಾನ ಸೇರಿದಂತೆ) ನಿಷೇಧ ವಿಧಿಸಿದ್ದು ಜನವರಿ 8ರಿಂದ 21ರವರೆಗೆ ಜಾರಿಯಲ್ಲಿರುತ್ತದೆ ಎಂದು ಹಾಂಕಾಂಗ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕ್ಯಾರಿ ಲ್ಯಾಮ್ ಮಾಧ್ಯಮದವರಿಗೆ ತಿಳಿಸಿದ್ದಾರೆ. ಅಲ್ಲದೆ, ಜನವರಿ 7ರಿಂದ ರೆಸ್ಟಾರೆಂಟ್‌ಗಳ ಒಳಗಡೆ ಸಂಜೆ 6 ಗಂಟೆಯಿಂದ ಊಟ-ಉಪಾಹಾರ ಸೇವಿಸುವುದನ್ನು ನಿಷೇಧಿಸಲಾಗಿದೆ. ಈಜು ಕೊಳ, ಕ್ರೀಡಾ ಕೇಂದ್ರಗಳು, ಬಾರ್, ಕ್ಲಬ್, ಮ್ಯೂಸಿಯಂಗಳು ಹಾಗೂ ಇತರ ಕೇಂದ್ರಗಳನ್ನು ಕನಿಷ್ಟ 2 ವಾರ ಮುಚ್ಚಲಾಗುವುದು ಎಂದವರು ಹೇಳಿದ್ದಾರೆ. ಇದು 5ನೇ ಅಲೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆದರೆ ನಾವು ಅಪಾಯದ ಅಂಚಿನಲ್ಲಿದ್ದೇವೆ ಎಂಬುದರಲ್ಲಿ ಸಂಶಯವಿಲ್ಲ . ಆದರೆ ಸದ್ಯಕ್ಕೆ ಮಕ್ಕಳ ಹಿತದೃಷ್ಟಿಯಿಂದ ಶಾಲೆಗಳನ್ನು ಮುಚ್ಚುವುದಿಲ್ಲ ಎಂದವರು ಹೇಳಿದ್ದಾರೆ.
ಈ ಮಧ್ಯೆ, ಬುಧವಾರ 3,700 ಪ್ರಯಾಣಿಕರು ಹಾಗೂ ಸಿಬಂದಿಗಳಿದ್ದ ಹಡಗಿನಲ್ಲಿ ನಡೆಸಲಾದ ಸೋಂಕು ಪರೀಕ್ಷೆಯಲ್ಲಿ 9 ಜನರ ಪರೀಕ್ಷೆಯ ವರದಿ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ , ತಕ್ಷಣ ಪ್ರಯಾಣವನ್ನು ಮೊಟಕುಗೊಳಿಸಿ ಹೊರಟ ಬಂದರಿಗೆ ವಾಪಸಾಗುವಂತೆ ಹಡಗಿನ ಸಿಬಂದಿಗೆ ಸೂಚಿಸಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲಾ ಹಡಗು ಪ್ರಯಾಣವನ್ನೂ ಸ್ಥಗಿತಗೊಳಿಸಲಾಗಿದೆ ಎಂದವರು ಮಾಹಿತಿ ನೀಡಿದ್ದಾರೆ.
ಮೈನ್‌ಲ್ಯಾಂಡ್ ಚೀನಾದಂತೆಯೇ ಹಾಂಕಾಂಗ್ ಕೂಡಾ ಶೂನ್ಯ ಕೊರೋನ ಸೋಂಕು ಕಾರ್ಯತಂತ್ರ ಅಳವಡಿಸಿಕೊಂಡಿದ್ದು, ಗಡಿಭಾಗಗಗಳನ್ನು ಮುಚ್ಚುವುದು, ವಾರಾವಧಿಯ ಕ್ವಾರಂಟೈನ್, ಉದ್ದೇಶಿತ ಲಾಕ್‌ಡೌನ್, ಸಾಮೂಹಿಕ ಸೋಂಕು ಪರೀಕ್ಷೆ ಸೇರಿದಂತೆ ವಿಶ್ವದಲ್ಲಿನ ಅತ್ಯಂತ ಕಟ್ಟುನಿಟ್ಟಿನ ನಿಯಂತ್ರಣ ಕ್ರಮಗಳನ್ನು ಅನುಸರಿಸುತ್ತಿದೆ. ಇದರಿಂದಾಗಿ ಹಾಂಕಾಂಗ್‌ನಲ್ಲಿ ಕೊರೋನ ಸೋಂಕು ನಿಯಂತ್ರಣದಲ್ಲಿತ್ತು ಮತ್ತು ಇದುವರೆಗೆ ಸುಮಾರು 12,000 ಪ್ರಕರಣ ಮಾತ್ರ ದಾಖಲಾಗಿತ್ತು.
ಆದರೆ ಡಿಸೆಂಬರ್ 31ರಂದು ಒಮೈಕ್ರಾನ್ ಸೋಂಕಿನ ಪ್ರಕರಣ ಪತ್ತೆಯಾಗಿ ಕ್ಷಿಪ್ರವಾಗಿ ಹರಡಿರುವುದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿದೆ. ಆ ಬಳಿಕ ಸೋಂಕಿತ ವ್ಯಕ್ತಿಗಳೊಂದಿಗೆ ಸಂಪರ್ಕದಲ್ಲಿದ್ದವರನ್ನು ಪತ್ತೆಹಚ್ಚಿ, ಅವರನ್ನು ಪರೀಕ್ಷೆಗೆ ಒಳಪಡಿಸಿ ಪ್ರತ್ಯೇಕವಾಗಿ ಇರಿಸುವ ಕಾರ್ಯ ಮುಂದುವರಿದಿದೆ. ಆದರೆ ಯಾರೊಂದಿಗೂ ಸಂಪರ್ಕ ಇಲ್ಲದ ಓರ್ವ ರೋಗಿಗೆ ಒಮೈಕ್ರಾನ್ ದೃಢಪಟ್ಟಿರುವುದರಿಂದ ಈ ಸೋಂಕು ಸಮುದಾಯಕ್ಕೆ ಹರಡಿರುವ ಅಪಾಯವಿದೆ ಎಂದು ಕ್ಯಾರಿ ಲ್ಯಾಮ್ ಹೇಳಿದ್ದಾರೆ.
ಹೊಸ ವರ್ಷದ ಸಂಭ್ರಮಾಚರಣೆಯಂದು ಸೆಂಟ್ರಲ್ ಪಾರ್ಕ್‌ನಲ್ಲಿ ಒಮೈಕ್ರಾನ್ ಸೋಂಕಿತ ವ್ಯಕ್ತಿ ಸುಮಾರು 20 ಸ್ನೇಹಿತರೊಂದಿಗೆ ನೃತ್ಯ ಮಾಡಿದ್ದಾನೆ. ಇದರಲ್ಲಿ ಓರ್ವ ಮನೆಗೆಲಸ ಮಾಡುವ ಉದ್ಯೋಗದಲ್ಲಿದ್ದು ಈತ ಕೆಲಸ ಮಾಡುವ ಮನೆಯವರು ಹಾಗೂ ಅವರ 8 ಸ್ನೇಹಿತರು ಹಡಗಿನಲ್ಲಿ ಪ್ರಯಾಣಿಸಿದ್ದರು ಎಂದು ಮೂಲಗಳು ಹೇಳಿವೆ.