ಜಾರ್ಖಂಡ್ ಗುಂಪುಹತ್ಯೆ ಪ್ರಕರಣ ಪೊಲೀಸರೆದುರೇ ನಡೆದಿದೆ, ಯಾರೂ ಸಹಾಯಕ್ಕೆ ಬರಲಿಲ್ಲ: ಮೃತನ ಪತ್ನಿ ಆರೋಪ

Update: 2022-01-06 10:01 GMT

ರಾಂಚಿ: ಮಂಗಳವಾರ ಜಾರ್ಖಂಡ್‍ನ ಸಿಮ್ದೇಗಾ ಜಿಲ್ಲೆಯಲ್ಲಿ 34 ವರ್ಷದ ವ್ಯಕ್ತಿಯೊಬ್ಬನನ್ನು ಗ್ರಾಮಸ್ಥರು ಥಳಿಸಿ ಹತ್ಯೆಗೈದು ನಂತರ ಆತನ ಮೃತದೇಹಕ್ಕೆ ಬೆಂಕಿ ಹಚ್ಚಿದ ಘಟನೆ ಪೊಲೀಸರ ಉಪಸ್ಥಿತಿಯಲ್ಲಿ ನಡೆದಿತ್ತು ಎಂದು ಮೃತ ವ್ಯಕ್ತಿಯ ಪತ್ನಿ ಆರೋಪಿಸಿದ್ಧಾಳೆ. ತನ್ನ ಪತಿಯನ್ನು ರಕ್ಷಿಸುವಂತೆ ಆಕೆ ಬೇಡಿದರೂ ಯಾರೂ ಸಹಾಯಕ್ಕೆ ಬಂದಿರಲಿಲ್ಲ ಎಂದೂ ಆಕೆ ದೂರಿದ್ದಾಳೆ.

ಆದರೆ ತಾವು ಘಟನೆ ನಡೆದ ನಂತರವಷ್ಟೇ ಸ್ಥಳವನ್ನು ತಲುಪಿದ್ದೆವು ಎಂದು ಪೊಲೀಸ್ ಅಧಿಕಾರಿಗಳು ಈಗಾಗಲೇ ಹೇಳಿದ್ದರೆ ಇದೀಗ ಸಂತ್ರಸ್ತನ ಪತ್ನಿಯ ಹೇಳಿಕೆ ಅದಕ್ಕೆ ತದ್ವಿರುದ್ಧವಾಗಿದೆ.

ಗ್ರಾಮದ ಪವಿತ್ರ ಮರ ಕಡಿದ ವಿಚಾರಕ್ಕೆ ಸಂಬಂಧಿಸಿದಂತೆ ಗ್ರಾಮಸ್ಥರು ಮಂಗಳವಾರ ಕರೆದಿದ್ದ ಸಭೆಗೆ ಈ ಪ್ರಕರಣದಲ್ಲಿ ಶಾಮೀಲಾಗಿರುವ ಚಪ್ರಿದೀಪ ಗ್ರಾಮದ ಸಂಜು ಪ್ರಧಾನ್ ಹಾಜರಾಗಿಲ್ಲ ಎಂಬ ಕಾರಣಕ್ಕೆ ಆತನನ್ನು ಗ್ರಾಮಸ್ಥರು ಮನೆಯಿಂದ ಹೊರಗೆಳೆದು ಹತ್ತಿರದ ಬೆಸ್ರಜರ ಗ್ರಾಮಕ್ಕೆ ಕರೆದೊಯ್ದು ಥಳಿಸಿ ಸಾಯಿಸಿದ್ದರು.

ಘಟನೆಯ ಸಂದರ್ಭ ಸುಮಾರು 500 ಜನರಿದ್ದರು, ಘಟನೆ ನಡೆಯುವ ಮುಂಚೆಯೇ ಪೊಲೀಸರು ಅಲ್ಲಿದ್ದರು ಎಂದು ಮೃತ ವ್ಯಕ್ತಿಯ ಪತ್ನಿ ಸಪ್ನಾ ದೇವಿ ಸುದ್ದಿಗಾರರಿಗೆ ತಿಳಿಸಿದ್ದಾಳೆ. ವ್ಯಕ್ತಿಯೊಬ್ಬನಿಂದ ಕೆಲ ಮರಗಳನ್ನು ಖರೀದಿಸಿ ನಂತರ ಅದನ್ನು ಉರುವಲಿಗಾಗಿ ಕಡಿಯಲಾಗಿತ್ತು ಎಂದು ಆಕೆ  ಹೇಳಿದ್ದಾಳೆ.

ಘಟನೆ ಸಂದರ್ಭ ಪೊಲೀಸರು ಉಪಸ್ಥಿತರಿದ್ದರು ಹಾಗೂ ಸಹಾಯ ಮಾಡಿಲ್ಲ ಎಂಬ ಆಕೆಯ  ಆರೋಪ ಕುರಿತು ಪೊಲೀಸರು ಇನ್ನೂ ಪ್ರತಿಕ್ರಿಯಿಸಿಲ್ಲ.
 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News