ಮೇಕೆದಾಟು ಪಾದಯಾತ್ರೆ ನಿಲ್ಲಿಸಲು ಲಾಕ್ ಡೌನ್, ಕರ್ಫ್ಯೂ ಬಿಜೆಪಿಯ ತಂತ್ರ: ಐವನ್ ಡಿಸೋಜ

Update: 2022-01-06 13:57 GMT

ಮಂಗಳೂರು, ಜ.6: ಮೇಕೆದಾಟು ಯೋಜನೆಯ ಪಾದಯಾತ್ರೆ ನಿಲ್ಲಿಸಲು ಸರ್ಕಾರ ಹಮ್ಮಿಕೊಂಡಿರುವ ಲಾಕ್ ಡೌನ್, ಕರ್ಫ್ಯೂ ಬಿಜೆಪಿಯ ರಾಜಕೀಯ ತಂತ್ರ ಹೊರತು ಜನಸಾಮಾನ್ಯರ ಹಿತರಕ್ಷಣೆ ಉದ್ದೇಶ ಹೊಂದಿಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಐವನ್ ಡಿಸೋಜ ಆರೋಪಿಸಿದ್ದಾರೆ.

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮೇಕೆದಾಟು ಕುಡಿಯುವ ನೀರಿನ ಹಕ್ಕಿಗಾಗಿ ನಡೆಯುವ ಹೋರಾಟ. ಏಳು ಜಿಲ್ಲೆಗಳಿಗೆ ನೀರು ಪೂರೈಕೆ ಮಾಡಲು 5,900 ಕೋಟಿ ರೂಪಾಯಿಗಳ ಡಿಪಿಆರ್ ರಚಿಸಿತ್ತು. ಈಗ ಅದು 9 ಸಾವಿರ ಕೋಟಿ ರೂಪಾಯಿಯ ಯೋಜನೆಯಾಗಿದೆ. ರಾಜ್ಯದ ಜನರ ಹಿತದೃಷ್ಟಿಯಿಂದ ಮಾಡುತ್ತಿರುವ ಪಾದಯಾತ್ರೆ ಗೆ ಬಿಜೆಪಿ ಏಕೆ ಅಡ್ಡಿಪಡಿಸುತ್ತಿದೆ. ಕೋವಿಡ್ ನಿಯಂತ್ರಣದ ಹೆಸರಿನಲ್ಲಿ ಮತ್ತೆ ವಾರಾಂತ್ಯದಲ್ಲಿ ಲಾಕ್ ಡೌನ್ ಹೇರಲಾಗುತ್ತಿದೆ. ದೇಶದ ಉದ್ದಗಲಕ್ಕೂ ಉತ್ತರ ಪ್ರದೇಶ ಮತ್ತಿತ್ತರ ರಾಜ್ಯಗಳಲ್ಲಿ ಸಾವಿರಾರು ಜನರನ್ನು ಸೇರಿಸಿ, ಸಾರ್ವಜನಿಕ ಸಭೆ ಮಾಡುತ್ತಿರುವುದು ರಾಜ್ಯ ಸರಕಾರದ ಗಮನದಲ್ಲಿ ಇಲ್ಲವೇ ? ಕೇವಲ ರಾಜಕೀಯ ಉದ್ದೇಶಕ್ಕಾಗಿ ಬಿಜೆಪಿ ಹೋರಾಟ ನಿಲ್ಲಿಸಲು ಮುಂದಾಗಿರುವುದು ಖಂಡನೀಯ. ಪಾದಯಾತ್ರೆಯನ್ನು ನಿಲ್ಲಿಸುವ ಪ್ರಮೇಯವೇ ಇಲ್ಲ ಎಂದರು.

ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ನಡೆಯುವ ಪಾದಯಾತ್ರೆಯಲ್ಲಿ ದ.ಕ ಮತ್ತು ಉಡುಪಿ, ಕರಾವಳಿ ಭಾಗದ ಎಲ್ಲ ಜಿಲ್ಲೆಯ ಪ್ರತಿನಿಧಿಗಳು ಭಾಗವಹಿಸುವ ಮೂಲಕ ರಾಜ್ಯಾದ್ಯಂತ ಸಂಚಲನ ಮೂಡಿಸಿ, ಜನರ ವಿಶ್ವಾಸ ಗಳಿಸಲು ಮತ್ತು ಯೋಜನೆ ಅನುಷ್ಠಾನಕ್ಕೆ ಸರಕಾರದ ಮೇಲೆ ಒತ್ತಡ ತರಲು ಪಾದಯಾತ್ರೆ ನಡೆಸುತ್ತಿರುವುದಾಗಿ ಈಗಾಗಲೇ ಕೆಪಿಸಿಸಿ ತೆಗೆದುಕೊಂಡ ತೀರ್ಮಾನವನ್ನು ಸಂಪೂರ್ಣ ಬೆಂಬಲಿಸಲಾಗುತ್ತದೆ ಎಂದು ಐವನ್ ತಿಳಿಸಿದ್ದಾರೆ.

ಈ ಸಂದರ್ಭದಲ್ಲಿ ಕೋವಿಡ್ ನಿಯಮವನ್ನು ಸಂಪೂರ್ಣವಾಗಿ ಪಾಲಿಸುವ ಜೊತೆ ಸುರಕ್ಷಿತ ಅಂತರ, ಮಾಸ್ಕ್ ಧರಿಸುವುದು, ಸ್ಯಾನಿಟೈಸರ್ ಬಳಕೆ ಸೇರಿದಂತೆ ಎಲ್ಲ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಲಾಗುವುದು ಎಂದು ಐವನ್ ತಿಳಿಸಿದ್ದಾರೆ.

*ಭಾರತದ ಪ್ರಧಾನಿ 20 ನಿಮಿಷ ರಸ್ತೆಯಲ್ಲೇ ಕಾದ ಬಗ್ಗೆ ಪಂಜಾಬ್ ರಾಜ್ಯ ಸರಕಾರದ ಮೇಲೆ ಭದ್ರತಾ ಲೋಪ ಮತ್ತು ಮೋದಿ ಹತ್ಯೆಗೆ ಸಂಚು ಎಂದು ಬಿಜೆಪಿ ಮತ್ತು ಸಂಘಪರಿವಾ ರದ ನಾಯಕರು ಮೊಸಳೆ ಕಣ್ಣೀರು ಸುರಿಸುವುದು ನಾಚಿಗೇಡಿತನವಾಗಿದೆ. ಸಾಮಾನ್ಯವಾಗಿ ಪ್ರಧಾನಿ ಪ್ರಯಾಣಿಸುವಂತಹ ರಸ್ತೆಗಳನ್ನು ಇತರ ವಾಹನ ಓಡಾಟದಿಂದ ಮುಕ್ತಗೊಳಿಸಲಾಗುತ್ತದೆ. ಕಾರ್ಯಕ್ರಮದಲ್ಲಿ ಉಂಟಾದ ಬದಲಾವಣೆಯಿಂದ, ರೈತರು ಅನೇಕ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದ  ರಸ್ತೆಯನ್ನು ಆಯ್ದುಕೊಂಡ ಪ್ರಧಾನಿ ಮಂತ್ರಿಯವರ ಬೆಂಗಾವಲು ಎಸ್.ಪಿಜಿ ಮತ್ತು ಬ್ಲ್ಯಾಕ್ ಕಮಾಂಡ್ ಇವರುಗಳ ತೀರ್ಮಾನವೂ ಅದರಲ್ಲಿ ಸೇರಿರುತ್ತದೆ.  ಭದ್ರತೆಯ ಬಗ್ಗೆ ಲೋಪದೋಷಗಳಿದ್ದಲ್ಲಿ ತನಿಖೆ ನಡೆಸಿ ಮತ್ತು ತಪ್ಪಿಸ್ಟ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಿ ಎಂದು ಒತ್ತಾಯಿಸಿದರು.

ರೈತರ ಧ್ವನಿ ಈ ಭಾರತ ದೇಶದಲ್ಲಿ ಕಳೆದ 15 ತಿಂಗಳುಗಳು ರಸ್ತೆಯಲ್ಲಿ ಕುಳಿತು, 700 ಜನ ರೈತರು ನನ್ನ ಜೀವವನ್ನೇ ಅರ್ಪಣೆ ಮಾಡಿದ್ದಾರೆ. ರೈತರಮೇಲೆ ಲಾಠಿ ಚಾರ್ಜ್, ಪ್ರತಿಭಟನೆ ನಡೆಸುತ್ತಿರುವ ಸ್ಥಳದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ, ಅವರ ಮೇಲೆ ವಾಹನ ಚಲಾಯಿಸಿ, ಅವರ ಮೇಲೆ ಕೇಸುಗಳನ್ನು ಹಾಕಿ, ಅವರ ಧ್ವನಿಯನ್ನು ಅಡಗಿಸಲು ಯತ್ನಿಸಿದ ವರ  ಮೇಲೆ ರೈತರ ಆಕ್ರೋಶವೇ ಹೊರತು ಇದರಲ್ಲಿ  ಬೇರೇನೂ ಇಲ್ಲ ಎಂದು ಐವನ್ ನುಡಿದರು.

ಭಾರತ ರಾಷ್ಟ್ರದ ಏಕತೆಗಾಗಿ ಕಾಂಗ್ರೆಸ್ ಪಕ್ಷ ಭಾರತ ದೇಶದ ಅತ್ಯಂತ ಹೆಚ್ಚು ಸೇವೆ ಮಾಡಿದ ಎರಡು ಪ್ರಧಾನಿ ಮಂತ್ರಿಗಳು ತಮ್ಮ ಜೀವವನ್ನೇ ದೇಶಕ್ಕಾಗಿ ಬಲಿದಾನ ನೀಡಿರುವುದು ಗಮನಿಸಿದಾಗ, ಕೇವಲ 20 ನಿಮಿಷಗಳ ಕಾಲ ಮೇಲ್ ಸೇತುವ ರಸ್ತೆಯಲ್ಲಿ ರೈತರ ಪ್ರತಿಭಟನೆ ನಡೆಯುತ್ತಿರುವ ಕಾರಣಕ್ಕಾಗಿ ಕಾದಿರುವ ಪ್ರಧಾನ ಮಂತ್ರಿಗಳ ಬಗ್ಗೆ, ಬಿಜೆಪಿ ನಾಯಕರು ಸುರಿಸುತ್ತಿರುವ ಮೊಸಳೆ ಕಣ್ಣೀರು ರಾಜಕೀಯ ಲಾಭಕ್ಕಾಗಿ ಹೊರತು ದೇಶದ ಹಿತದೃಷ್ಟಿಯಿಂದ ಅಥವಾ ದೇಶದ ರೈತರ ಹಿತದೃಷ್ಟಿಯಿಂದ ಅಲ್ಲಎಂದು ದೇಶಕ್ಕೆ ತಿಳಿಸಬೇಕಾಗಿದೆ. ಇಂತಹ ಆನೇಕ ಘಟನೆಗಳು ಕಾಂಗ್ರೆಸ್ ಆಡಳಿತದಲ್ಲಿ ಇಂದಿರಾ ಗಾಂಧಿ, ರಾಹುಲ್  ಗಾಂಧಿ, ನೆಹರೂರವರಿಗೆ ನಡೆದಿರುವುದು ಇತಿಹಾಸದಲ್ಲಿ ದಾಖಲಾಗಿದೆ ಎಂದು ಬಿಜೆಪಿ ನೆನಪಿಸಿಕೊಳ್ಳಬೇಕು ಎಂದು ಐವನ್ ಹೇಳಿದರು.

   ಸುದ್ದಿಗೋಷ್ಠಿಯಲ್ಲಿ ಶುಭೋದಯ್ ಆಳ್ವ, ಆಶಿತ್ ಪಿರೇರ, ಬೊಂಡಾಲ ಚಿತ್ತರಂಜನ್ ಶೆಟ್ಟಿ, ಗಣೇಶ್ ಪೂಜಾರಿ, ಮಾಜಿ ಕಾರ್ಪೊರೇಟರ್ ಅಪ್ಪಿ, ಭಾಸ್ಕರ ರಾವ್, ಅಲಿಸ್ಟರ್ ಡಿಕ್ಕುನ, ಆರಿಫ್ ಭಾವ, ಜೇಮ್ಸ್ ಪ್ರವೀಣ್, ಫಯಾಝ್, ಹಸನ್ ಪನ್ನೀರ್, ಇಸ್ಮಾಯೀಲ್, ಮೀನಾ, ಯೋಗೀಶ್ ನಾಯಕ್, ಹಬೀಬುಲ್ಲಾ  ಕಣ್ಣೂರು, ಬಾಝಿಲ್ ಕುಲಶೇಖರ, ನಝೀರ್ ಬಜಾಲ್ ಹಾಗೂ ಇತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News