ಪುತ್ತೂರು: ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಸಂವಾದ, ಫಲಕ ಬಿಡುಗಡೆ

Update: 2022-01-06 14:32 GMT

ಪುತ್ತೂರು: ಭ್ರಷ್ಟಾಚಾರಕ್ಕೆ ಮನುಷ್ಯನ ದುರಾಸೆಯ ಮೂಲ ಕಾರಣವಾಗಿದ್ದು,  ಶಾಸಕಾಂಗ,  ಕಾರ್ಯಾಂಗ, ನ್ಯಾಯಾಂಗ ಎಲ್ಲದರಲ್ಲೂ ಭ್ರಷ್ಟಾಚಾರ ಕಂಡು ಬರುತ್ತಿದೆ. ಇದನ್ನು ತಡೆಯಲು ಭ್ರಷ್ಟಾಚಾರದ ನಿಯಂತ್ರಣವಾಗದಿದ್ದಲ್ಲಿ ದೇಶದಲ್ಲಿ ಶಾಂತಿ ಹಾಗೂ ಸೌಹಾರ್ಧತೆಯನ್ನು ಕಾಣಲು ಸಾಧ್ಯವಿಲ್ಲ ಎಂದು ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಹೇಳಿದರು.

ಅವರು ಗುರುವಾರ ಇಲ್ಲಿಯ ಪುರಭವನದಲ್ಲಿ ಸುದ್ದಿ ಜನಾಂದೋಲನ ವೇದಿಕೆ ಹಾಗೂ ಸುದ್ದಿ ಮಾಹಿತಿ ಟ್ರಸ್ಟ್ ಆಶ್ರಯದಲ್ಲಿ ನಡೆದ ಭ್ರಷ್ಟಾಚಾರ ವಿರೋಧಿ ಜನಜಾಗೃತಿ ಸಂವಾದ ಹಾಗೂ ಫಲಕ ಬಿಡುಗಡೆ ಕಾರ್ಯಕ್ರಮವನ್ನು ಉದ್ಘಾಟಿಸಿ, ಫಲಕ ಬಿಡುಗಡೆ ಮಾಡಿ ಮಾತನಾಡಿದರು.

ದೇಶ, ಸಮಾಜವನ್ನು ಕಾಡುತ್ತಿರುವ ಬಹುದೊಡ್ಡ ಪಿಡುಗು ಭ್ರಷ್ಟಾಚಾರದಿಂದ ಮುಕ್ತಿ ಹೊಂದಬೇಕಾದರೆ ತೃಪ್ತಿ ಹಾಗೂ ಮಾನವೀಯತೆ ಎಂಬ ಎರಡು ಕಳೆದುಹೋದ ಮೌಲ್ಯಗಳನ್ನು ಮತ್ತೆ ತರಬೇಕಾದ ಅಗತ್ಯತೆ ಇದೆ. ತೃಪ್ತಿ ಇದ್ದರೆ ದುರಾಸೆ ಬರಲ್ಲ. ದುರಾಸೆ ಬಂದರೆ ಅದಕ್ಕೆ ಮದ್ದಿಲ್ಲ. ಈ ನಿಟ್ಟಿನಲ್ಲಿ ಇದ್ದವರು-ಇಲ್ಲದವರ ನಡುವೆ ಇರುವ ಅಂತರದ ಕುರಿತು ಯೋಚನೆ ಮಾಡಿ ಇದ್ದದ್ದರಲ್ಲೇ ತೃಪ್ತಿಪಟ್ಟುಕೊಳ್ಳುವುದರ ಜತೆ ಹಿರಿಯರಿಂದ ಬಂದ ಮಾನವೀಯ ಗುಣಗಳನ್ನು ಪ್ರಸ್ತುತ ಯುವಕ-ಯುವತಿಯರು ಅನುಸರಿಸಿದರೆ ಭ್ರಷ್ಟಾಚಾರ ಮುಕ್ತತೆಯೊಂದಿಗೆ ಶಾಂತಿ, ಸೌಹಾರ್ದತೆಯ ಸಮಾಜ ಬೆಳೆಯಲು ಸಾಧ್ಯ ಎಂದರು.

ಹಿಂದಿನ ರಾಜರ ಸಿಂಹಾಸನ ಹೋಗಿ ಇದೀಗ ಅದರಲ್ಲಿ ನಮ್ಮ ರಾಜಕಾರಣಿಗಳು ಕುಳಿತಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯು  ಜನತಾಸೇವೆ ಮಾಯವಾಗಿ ಇಂದು ಸ್ವಯಂಸೇವೆಯಾಗಿ ಮಾರ್ಪಾಡುಗೊಂಡಿದೆ. ಪ್ರಜಾಪ್ರಭುತ್ವ ಉಳಿದಿದೆಯೇ ಎಂಬುದು ಯಕ್ಷಪ್ರಶ್ನೆಯಾಗಿದೆ.  ದುರಾಸೆ ಸಮಾಜವನ್ನು ಕೆಡಿಸಿದೆ. ಈ ನಿಟ್ಟಿನಲ್ಲಿ ಪ್ರಜಾಪ್ರಭುತ್ವದಲ್ಲಿ ಅಧಿಕಾರಕ್ಕೆ ಬರುವವರು ಜನತಾ ಸೇವಕರಾಗಬೇಕೇ ಹೊರತು ಜನತಾ ಮಾಲಕರಾಗಿ ಅಲ್ಲ ಎಂದ ಅವರು, ಸಮಾಜದ ಘನತೆಯನ್ನು, ಸಮಾಜದ ಭಾವನೆಗಳನ್ನು ಕಾನೂನಿನ ಮೂಲಕ ಬದಲಾಯಿಸಲು ಸಾಧ್ಯವಿಲ್ಲ. ಸಮಾಜದ ಬದಲಾವಣೆ ಯುವಕ-ಯುವತಿಯರ ಕೈಯಲ್ಲಿದೆ. ಈ ನಿಟ್ಟಿನಲ್ಲಿ ಇಂದಿನ ಈ ಕಾರ್ಯಕ್ರಮದ ಮೂಲಕ ಭ್ರಷ್ಟಾಚಾರವನ್ನು ಹೋಗಲಾಡಿಸಿ ಸಮಾಜದಲ್ಲಿ ಬದಲಾವಣೆ ತರುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ಹೇಳಿದರು.

ಸುದ್ದಿ ಸಮೂಹ ಸಂಸ್ಥೆಯ ಪ್ರಧಾನ ಸಂಪಾದಕ ಡಾ.ಯು.ಪಿ.ಶಿವಾನಂದ ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸ್ತುತ ಭ್ರಷ್ಟಾಚಾರ ವಿರುದ್ಧ ಸಾರ್ವಜನಿಕ ಬೆಂಬಲವಿಲ್ಲ.  ಭ್ರಷ್ಟಾಚಾರ ಬೆಳೆದರೆ ಮುಂದಿನ ಜನಾಂಗಕ್ಕೆ ಆದರ್ಶರೇ ಇರುವುದಿಲ್ಲ. ಈ ನಿಟ್ಟಿನಲ್ಲಿ ಲಂಚಕೋರರು, ಭ್ರಷ್ಟಾಚಾರಿಗಳನ್ನು ದೇಶದ್ರೋಹಿಗಳೆಂದು ಪರಿಗಣಿಸಬೇಕು. ಮುಂದಿನ ದಿನಗಳಲ್ಲಿ ಲಂಚ ಭ್ರಷ್ಟಾಚಾರಕ್ಕೆ ಬಹಿಷ್ಕಾರ, ಉತ್ತಮ ಸೇವೆಗೆ ಪುರಸ್ಕಾರ ಎಂಬ ಜನಾಂದೋಲನ ಜಿಲ್ಲೆಯಾದ್ಯಂತ ನಡೆಯಲಿದೆ. ಈ ಮೂಲಕ ಪುತ್ತೂರನ್ನು ಲಂಚ ಭ್ರಷ್ಟಾಚಾರಮುಕ್ತ ತಾಲೂಕನ್ನಾಗಿ ಮಾಡುವ ಪ್ರಯತ್ನ ನಡೆಯಲಿದೆ. ಭ್ರಷ್ಟಾಚಾರ ಬೆಳೆಯಲು ಮೂಲ ಕಾರಣವೇ ಅಂತಹವರಿಗೆ ಮಾನ್ಯತೆ ನೀಡುವುದು ಅವರನ್ನು ಸನ್ಮಾನಿಸುವುದು, ಗೌರವಿಸುವುದು. ಜೈಲಿಗೆ ಹೋಗಿ ಬಂದವರನ್ನೂ ನಮ್ಮಲ್ಲಿ ಗೌರವಿಸುವತ್ತಾರೆ ಇಂತಹ ಪ್ರವೃತ್ತಿ ನಿಲ್ಲಬೇಕು ಎಂದರು.

ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಹಲವು ಸಂಘ ಸಂಸ್ಥೆಗಳ ಪ್ರಮುಖರು ಉಪಸ್ಥಿತರಿದ್ದರು. ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ವರದಿಗಾರ ಸಂತೋಷ್ ಶಾಂತಿನಗರ ಸ್ವಾಗತಿಸಿದರು. ನ್ಯಾಯವಾದಿ ಮಹೇಶ್ ಕಜೆ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News