×
Ad

ಬಿ.ಸಿ.ರೋಡ್ ಅಡ್ಡಹೊಳೆ ಚತುಷ್ಪಥ ಚುರುಕುಗೊಳಿಸಲು ಸಂಸದ ನಳಿನ್ ಸೂಚನೆ

Update: 2022-01-06 20:08 IST

ಮಂಗಳೂರು, ಜ.6: ಬಿ.ಸಿ.ರೋಡ್ ಅಡ್ಡಹೊಳೆ ಹೆದ್ದಾರಿ ಚತುಷ್ಪಥ ಯೋಜನೆ ಕಾಮಗಾರಿ ಪುನರಾರಂಭಗೊಂಡಿದ್ದು, ಅದನ್ನು ಶೀಘ್ರವಾಗಿ ನಡೆಸಬೇಕು ಎಂದು ಸಂಸದರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.

ಜಿ.ಪಂ ಸಭಾಂಗಣದಲ್ಲಿ ಗುರುವಾರ ಅವರು ಜಿಲ್ಲಾ ಅಭಿವೃದ್ಧಿ ಸಮನ್ವಯ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೇಂದ್ರ ಹೆದ್ದಾರಿ ಮತ್ತು ಭೂಸಾರಿಗೆ ಖಾತೆ ಸಚಿವ ನಿತಿನ್ ಗಡ್ಕರಿ ಅವರ ಜ.9ರ ಜಿಲ್ಲಾ ಪ್ರವಾಸ ಕಾರ್ಯಕ್ರಮವನ್ನು ಕೋವಿಡ್ ನಿರ್ಬಂಧದ ಹಿನ್ನೆಲೆಯಲ್ಲಿ ಮುಂದೂಡಲಾಗಿದೆ. ಆದರೆ ಕಾಮಗಾರಿಗಳಲ್ಲಿ ಯಾವುದೇ ವಿಳಂಬವಾಗಬಾರದು ಎಂದರು.

ಪ್ರಸ್ತುತ ಬಿ.ಸಿ.ರೋಡ್ ಅಡ್ಡಹೊಳೆ ಭಾಗದ ಕಾಮಗಾರಿ ಶೇ 5ರಿಂದ 10ರಷ್ಟು ಪ್ರಗತಿಯಾಗಿದೆ, ಕಲ್ಲಡ್ಕ ಮೇಲ್ಸೇತುವೆಯ ತಳಪಾಯ ಸಿದ್ಧಗೊಳಿಸುವ ಕೆಲಸ ನಡೆದಿದೆ, ಬಹುತೇಕ ಭೂಸ್ವಾಧೀನ ಕೆಲಸವೂ ಪೂರ್ಣಗೊಂಡಿದೆ ಎಂದು ಎನ್‌ಎಚ್‌ಎಐ ಅಧೀಕ್ಷಕ ಇಂಜಿನಿಯರ್ ಅನಿರುದ್ಧ ಕಾಮತ್ ತಿಳಿಸಿದರು.

2.5 ಕೋ.ವೆಚ್ಚದಲ್ಲಿ ಎಂಆರ್‌ಎಫ್ ನಿರ್ಮಾಣ

ಜಿಲ್ಲೆಯಲ್ಲಿ ತ್ಯಾಜ್ಯ ಪ್ರತ್ಯೇಕಿಸುವ ಎಂಆರ್‌ಎಫ್(ಮೆಟೀರಿಯಲ್ ರಿಕವರಿ ಫೆಸಿಲಿಟಿ) ನಿರ್ಮಾಣಕ್ಕಾಗಿ 2.5 ಕೋಟಿ ರೂ. ಮಂಜೂರಾಗಿದೆ. ಗಂಜಿಮಠದಲ್ಲಿ ಇದಕ್ಕಾಗಿ ಜಾಗ ನೋಡಲಾಗಿತ್ತು, ಆದರೆ ಸ್ಥಳೀಯವಾಗಿ ಪ್ರತಿರೋಧ ಇರುವುದರಿಂದ ತೆಂಕ ಎಡಪದವಿನಲ್ಲಿ ನಿರ್ಮಿಸಲಾಗುತ್ತಿದೆ, ಕೆಲಸವೂ ನಡೆದಿದೆ ಎಂದು ಜಿ.ಪಂ ಸಿಇಒ ಡಾ.ಕುಮಾರ್ ತಿಳಿಸಿದರು.

ಅಲ್ಲದೆ ಗೋಳ್ತಮಜಲು, ಉಪ್ಪಿನಂಗಡಿ, ಉಜಿರೆಗಳಲ್ಲಿ ಮಲ ತ್ಯಾಜ್ಯ ನಿರ್ವಹಣಾ ಘಟಕಗಳನ್ನು ನಿರ್ಮಿಸಲಾಗುತ್ತಿದೆ, ಇದನ್ನು 2.82 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗುವುದು. ಮುಂದಿನ ಹಂತದಲ್ಲಿ ಸುಳ್ಯ, ಪುತ್ತೂರು ತಾಲೂಕುಗಳಲ್ಲೂ ಈ ಘಟಕ ನಿರ್ಮಿಸಲಾಗುವುದು. ಈಗಾಗಲೇ 194 ಗ್ರಾ.ಪಂಗಳಲ್ಲಿ ಒಣ ತ್ಯಾಜ್ಯ ವಿಲೇವಾರಿ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಇದಕ್ಕೆ ಪೂರಕವಾದ ಸಾಗಾಟ ವಾಹನಗಳನ್ನು 15ನೇ ಹಣಕಾಸು ಆಯೋಗದಿಂದ ಬಳಸಿಕೊಳ್ಳಲಾಗಿದೆ ಎಂದರು.

ಮೇಯರ್ ಪ್ರೇಮಾನಂದ ಶೆಟ್ಟಿ, ಮನಪಾ ಆಯುಕ್ತ ಅಕ್ಷಿ ಶ್ರೀಧರ್ ಹಾಜರಿದ್ದರು.

ದ.ಕ. ಜಿಲ್ಲೆಯಲ್ಲಿ ಶಾಲೆ ಲಾಕ್ ಸಾಧ್ಯತೆ ಕಡಿವೆು

''ಜಿಲ್ಲೆಯಲ್ಲಿ ಮಕ್ಕಳಿಗೆ ಕೋವಿಡ್ ಸಮಸ್ಯೆಯಾಗಿರದ ಕಾರಣ ಶಾಲೆಯನ್ನು ಲಾಕ್‌ಡೌನ್ ಮಾಡುವ ಸಾಧ್ಯತೆ ಕಡಿಮೆ. ಮಕ್ಕಳಲ್ಲಿ ಕೋವಿಡ್ ಕ್ಲಸ್ಟರ್‌ಗಳಲ್ಲಿ ಬಂದರೆ, ಹಾಗೂ ಅವರ ಪಾಸಿಟಿವಿಟಿ ರೇಟ್ ಹೆಚ್ಚಾಗಿದ್ದರೆ ಮಾತ್ರವೇ ಲಾಕ್ ಮಾಡಬಹುದು, ಈಗ ಅಂತಹ ಪರಿಸ್ಥಿತಿ ಇಲ್ಲ. ಮುಂದೂಡಲ್ಪಟ್ಟಿರುವ ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆಗಳನ್ನು ಬೇಗ ಮುಗಿಸುವಂತೆ ನ್ಯಾಯಾಲಯದಿಂದ ಆದೇಶ ಬರುವ ಸಾಧ್ಯತೆಗಳಿರುವುದರಿಂದ ಅತ್ಯಗತ್ಯವಾಗಿ ಆಗಬೇಕಾದ ಕಾಮಗಾರಿಗಳಿಗೆ ಬೇಗ ಕ್ರಿಯಾಯೋಜನೆ ರೂಪಿಸಿ ಅನುಮೋದನೆ ಪಡೆದುಕೊಳ್ಳಬೇಕು''.
-ಡಾ. ರಾಜೇಂದ್ರ ಕೆ.ವಿ., ಜಿಲ್ಲಾಧಕಾರಿ, ದ.ಕ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News