×
Ad

ವಾರದೊಳಗೆ ಸೀಮೆಎಣ್ಣೆ ಸಿಗದಿದ್ದರೆ ಹಕ್ಕೊತ್ತಾಯ ಧರಣಿ : ನಾಡದೋಣಿ ಮೀನುಗಾರರ ಒಕ್ಕೂಟ

Update: 2022-01-06 20:21 IST

ಉಡುಪಿ, ಜ.6: ಮೋಟರೀಕೃತ ನಾಡದೋಣಿಗಳ ಇಂಜಿನ್‌ಗಳಿಗೆ ಸರಕಾರದಿಂದ ನೀಡುವ ಸಬ್ಸಿಡಿ ಸೀಮೆಎಣ್ಣೆ ಸಿಗದೇ ತಿಂಗಳು ಕಳೆದಿದ್ದು, ಇದರಿಂದ ಅದನ್ನೇ ನಂಬಿ ಬದುಕುವ ಬಡ ಮೀನುಗಾರರ ಬದುಕು ಅತಂತ್ರವಾಗಿದೆ. ಹೀಗಾಗಿ ತಕ್ಷಣ ಸೀಮೆಎಣ್ಣೆಯನ್ನು ಬಿಡುಗಡೆಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಸರಕಾರವನ್ನು ಆಗ್ರಹಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಅಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಅನಾದಿ ಕಾಲದಿಂದಲೂ ಸಾಂಪ್ರದಾಯಿಕ ಮೀನುಗಾರಿಕೆಯನ್ನು ನಡೆಸಿಕೊಂಡು ಬರುತ್ತಿರುವ ಮೀನುಗಾರರು ಕಷ್ಟಜೀವಿಗಳು, ಶ್ರಮಜೀವಿಗಳು ಹಾಗೂ ಬಡವರಾಗಿದ್ದಾರೆ. ಸಾಂಪ್ರದಾಯಿಕ ಮೀನುಗಾರಿಕೆ ನಶಿಸುತ್ತಿರುವ ಇಂದಿನ ದಿನಗಳಲ್ಲಿ ಸಾಂಪ್ರದಾಯಿಕ ನಾಡದೋಣಿ ಮೀನುಗಾರರು ತಮ್ಮ ದೋಣಿಗಳಿಗೆ ಇಂಜಿನ್ ಅಳವಡಿಸಿ ಮೀನುಗಾರಿಕೆ ನಡೆಸುತಿದ್ದಾರೆ ಎಂದರು.

ನಾಡದೋಣಿಗಳಿಗೆ ಅಳವಡಿಸಿದ ಇಂಜಿನ್‌ಗಳಿಗೆ ಸರಕಾರ ಕಳೆದೊಂದು ದಶಕದಿಂದ ಸಬ್ಸಿಡಿ ದರದಲ್ಲಿ ಸೀಮೆಎಣ್ಣೆಯನನು ಆಹಾರ ಇಲಾಖೆಯ ಮೂಲಕ ನಿರಂತರವಾಗಿ ನೀಡುತ್ತಾ ಬಂದಿದೆ. ಕೇಂದ್ರ ಸರಕಾರದ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಇಲಾಖೆಯಿಂದ ರಾಜ್ಯದ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರ ಇಲಾಖೆಗಳ ಮೂಲಕ ಪಡಿತರ ದರದಲ್ಲಿ ಸೀಮೆಎಣ್ಣೆ ಪೂರೈಸಲಾಗುತ್ತಿದೆ ಎಂದವರು ವಿವರಿಸಿದರು.

4,514 ದೋಣಿಗಳಿಗೆ ಮಾತ್ರ ಸೀಮೆಎಣ್ಣೆ: ಕರ್ನಾಟಕ ರಾಜ್ಯ ಕರಾವಳಿ ಜಿಲ್ಲೆಗಳಲ್ಲಿ ಪ್ರಸ್ತುತ ಸುಮಾರು 10,100ಕ್ಕಿಂತಲೂ ಅಧಿಕ ನಾಡದೋಣಿಗಳು ಇಂಜಿನ್‌ಗಳನ್ನು ಹೊಂದಿವೆ.ಆದರೆ ಸರಕಾರ ಈಗಲೂ 2013ರ ಆದೇಶದಂತೆ ಕೇವಲ 4514 ದೋಣಿಗಳಿಗೆ ಮಾತ್ರ ತಲಾ 300ಲೀ.ನಂತೆ ಕರಾವಳಿಯ ಮೂರು ಜಿಲ್ಲೆಗಳ ನಾಡದೋಣಿ ಮೀನುಗಾರರಿಗೆ ಸಹಾಯಧನ ರಹಿತ ಸೀಮೆಎಣ್ಣೆ ನೀಡುತ್ತಿದೆ ಎಂದರು.

ಜಿಲ್ಲೆಯ 10,100 ದೋಣಿಗಳಿಗೆ ತಲಾ 300ಲೀ.ನಂತೆ ಒಟ್ಟು 30,300 ಕಿ.ಲೀ. ಸೀಮೆಎಣ್ಣೆ ಅಗತ್ಯವಿದೆ. ಆದರೆ ಈಗ ತಿಂಗಳಿಗೆ 1,355ಕಿ.ಮೀ.ನಂತೆ ನೀಡಲಾಗುತ್ತಿದ್ದು, ಇದನ್ನು ಎಲ್ಲಾ ದೋಣಿಗಳೊಳಗೆ ಹಂಚಿಕೆ ಮಾಡಿ ಬಳಸಲಾ ಗುತ್ತಿದೆ. ರಾಜ್ಯದ ಒಟ್ಟು 60ಸಾವಿರಕ್ಕೂ ಅಧಿಕ ಮೀನುಗಾರರು ಈ ನಾಡ ದೋಣಿಯನ್ನೇ ನಂಬಿ ಬದುಕು ಸಾಗಿಸುತಿದ್ದಾರೆ ಎಂದು ಆನಂದ ಖಾರ್ವಿ ತಿಳಿಸಿದರು.

2021-22ನೇ ಸಾಲಿಗೆ ರಾಜ್ಯಕ್ಕೆ ಒಟ್ಟು 12,195ಕಿ.ಲೀ. ಸೀಮೆಎಣ್ಣೆ ಬಿಡುಗಡೆಯಾಗಬೇಕಿತ್ತು. ಆದರೆ ಕೇಂದ್ರ ಸರಕಾರ ಕೇವಲ 7,080ಕೆಎಲ್ ಸಹಾಯಧನ ರಹಿತ ಸೀಮೆಎಣ್ಣೆ ಬಿಡುಗಡೆಯಾಗಿದೆ. ಇದು ನವೆಂಬರ್‌ವರೆಗೆ ಮೀನುಗಾರರಿಗೆ ಹಂಚಿಕೆಯಾಗಿದೆ. ಡಿಸಂಬರ್‌ನಿಂದ ಮುಂದಿನ ಮಾರ್ಚ್ ವರೆಗೆ ಕೇಂದ್ರ ಸರಕಾರದಿಂದ 5,115ಕಿ.ಲೀ. ಬಿಡುಗಡೆಯಾಗಬೇಕಿದ್ದು ಈವರೆಗೆ ಬಿಡುಗಡೆಯಾಗಿಲ್ಲ. ಇದರಿಂದ ನಮಗೆ ತೊಂದರೆಯಾಗಿದೆ ಎಂದರು.

ಕೇರಳಕ್ಕೆ ಬಿಡುಗಡೆ: ಆದರೆ ಕೇಂದ್ರ ಸರಕಾರ ಕೇರಳಕ್ಕೆ 2021-22ನೇ ಸಾಲಿನ 2ನೇ ಹಂತದ ಸಹಾಯಧನ ರಹಿತ ಸೀಮೆಎಣ್ಣೆ 18,108ಕಿ.ಲೀ.ನ್ನು ಕಳೆದ ಡಿ.1ರಂದೇ ಬಿಡುಗಡೆಗೊಳಿಸಿದೆ. ಈ ಬಗ್ಗೆ ಈಗಾಗಲೇ ಮೀನುಗಾರಿಕಾ ಸಚಿವರು, ಜಿಲ್ಲೆಯ ಸಚಿವರು, ಶಾಸಕರುಗಳಿಗೆ, ಇಲಾಖೆಯ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ. ಅದೇ ರೀತಿ ಹೊಸದಿಲ್ಲಿಗೆ ತೆರಳಿ ಪೆಟ್ರೋಲಿಯಂ ಮತ್ತು ನ್ಯಾಚುರಲ್ ಗ್ಯಾಸ್ ಇಲಾಖೆಯ ಅಧಿಕಾರಿಗಳನ್ನು ಸಹ ಭೇಟಿ ಮಾಡಿ ವಿಷಯ ತಿಳಿಸಲಾಗಿದೆ ಎಂದವರು ನುಡಿದರು.

ವಾರದ ಗಡುವು: ಆದ್ದರಿಂದ ರಾಜ್ಯ ಸರಕಾರ ನಮ್ಮ ತುರ್ತು ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಸಾಂಪ್ರದಾಯಿಕ ಮೀನುಗಾರರ ಸಮಸ್ಯೆಯನ್ನು ತಕ್ಷಣ ಬಗೆಹರಿಸಬೇಕು. ವಾರದೊಳಗೆ ನಮಗೆ ಸೀಮೆಎಣ್ಣೆ ಬಿಡುಗಡೆ ಮಾಡದಿದ್ದರೆ ಕೋವಿಡ್ ನಿರ್ಬಂಧವಿದ್ದರೂ, ನಮಗೆ ನಮ್ಮ ಬದುಕು ಮುಖ್ಯವಾಗಿರುವುದರಿಂದ, ಕರ್ನಾಟಕ ರಾಜ್ಯ ಸಾಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟದ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಎದುರು ಹಕ್ಕೊತ್ತಾಯ ಆಂದೋಲನ ಕೈಗೊಳ್ಳುತ್ತೇವೆ ಎಂದು ಅವರು ಎಚ್ಚರಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಗೋಪಾಲ್ ಆರ್.ಕೆ., ದ.ಕ.ನಾಡದೋಣಿ ಮೀನುಗಾರರ ಸಂಘದ ಅದ್ಯಕ್ಷ ವಿಜಯ ಬಂಗೇರ, ಉ.ಕ.ಜಿಲ್ಲಾ ಸಂಘದ ಕೃಷ್ಣ ಅರಿಗ, ಗಂಗೊಳ್ಳಿಯ ಯಶವಂತ, ಮಲ್ಪೆ ಬೇಸಿಗೆಕಾಲದ ನಾಡದೋಣಿ ಮೀನುಗಾರರ ಸಂಘದ ಚಂದ್ರಕಾಂತ ಕರ್ಕೇರ, ಮಲ್ಪೆ ವಲಯ ನಾಡದೋಣಿ ಮೀನುಗಾರರ ಸಂಘದ ಸುಂದರ್ ಪಿ.ಸಾಲ್ಯಾನ್, ಶಿರೂರು ಅಲ್ಪಸಂಖ್ಯಾತ ಮೀನುಗಾರರ ಸಂಘದ ಕೆ.ಎಸ್.ಹಮೀದ್ ಮುಂತಾದವರು ಉಪಸ್ಥಿತರಿದ್ದರು.

ಗ್ಯಾಸ್, ಇಲೆಕ್ಟ್ರಿಸಿಟಿ ಪ್ರಯೋಗ ವಿಫಲ

ಸಾಂಪ್ರದಾಯಿಕ ನಾಡದೋಣಿಗಳಿಗೆ ನ್ಯಾಚುರಲ್ ಗ್ಯಾಸ್ ಹಾಗೂ ಇಲೆಕ್ಟ್ರಿಕ್ ಇಂಜಿನ್‌ಗಳನ್ನು ಬಳಸುವ ಪ್ರಯತ್ನ ನಡೆಯಿತಾ ದರೂ, ಪ್ರಾಯೋಗಿಕ ಹಂತದಲ್ಲೇ ಇದು ಸಂಪೂರ್ಣ ವೈಫಲ್ಯ ಅನುಭವಿಸಿತು. ಇವುಗಳ ಪ್ರಯೋಗವನ್ನು ಮಲ್ಪೆ ಬಂದರಿನಲ್ಲೇ ಕೆಲವರ್ಷಗಳ ಹಿಂದೆ ನಡೆಸಲಾಗಿತ್ತು ಎಂದು ಆನಂದ ಖಾರ್ವಿ ತಿಳಿಸಿದರು.

ಗ್ಯಾಸ್ ಬಳಸಿದ ಇಂಜಿನ್ ಇದ್ದ ದೋಣಿ ನಿರೀಕ್ಷಿತ ವೇಗದಲ್ಲಿ ಸಾಗಲಿಲ್ಲ. ಅದೇ ರೀತಿ 25 ಎಚ್‌ಪಿ ಸಾಮರ್ಥ್ಯದ ಇಲೆಕ್ಟ್ರಿಸಿಟಿ ಇಂಜಿನ್ ಬಳಸಿದ ದೋಣಿ 20 ನಿಮಿಷ ಮಾತ್ರ ಬಳಕೆಗೆ ಸಾಧ್ಯವಾಗಿತ್ತು. ಹೀಗಾಗಿ ನಾವು ಮತ್ತೆ ಸೀಮೆಎಣ್ಣೆ ಇಂಜಿನ್‌ನ್ನೇ ಬಳಸುವಂತಾಗಿದೆ ಎಂದವರು ಹೇಳಿದರು.

ಸೀಮೆಎಣ್ಣೆ ಬಳಕೆಯನ್ನು ಕಡಿಮೆಗೊಳಿಸುವ ಪ್ರಯತ್ನದಲ್ಲಿರುವ ಸರಕಾರ ನಮ್ಮ ಬದುಕಿನೊಂದಿಗೆ ಚೆಲ್ಲಾಟವಾಡದೇ ನಮಗೆ ಸಿಗಬೇಕಾದ ಕನಿಷ್ಠ ಸೌಲಭ್ಯ ಒದಗಿಸಿ ನ್ಯಾಯದೊರಕಿಸಿಕೊಡಬೇಕೆಂದು ಮನವಿ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News