×
Ad

ಕ್ರೀಡಾ ಅಕಾಡೆಮಿಯಲ್ಲಿ ಕೋಚ್ ಗಳಿಂದ ಐವರು ಬುಡಕಟ್ಟು ಯುವಕರಿಗೆ ಥಳಿತ: ಆರೋಪ

Update: 2022-01-06 22:33 IST
ಸಾಂದರ್ಭಿಕ ಚಿತ್ರ

ರಾಯಪುರ, ಜ. 6: ಚತ್ತೀಸ್‌ಗಡ ಬಿಜಾಪುರದ ಕ್ರೀಡಾ ಅಕಾಡೆಮಿಯ ಇಬ್ಬರು ತರಬೇತುದಾರರು ಥಳಿಸಿದ್ದಾರೆ ಹಾಗೂ ನಿಂದಿಸಿದ್ದಾರೆ ಎಂದು ಆರೋಪಿಸಿ ಅಕಾಡೆಮಿಯ ಐವರು ಬುಡಕಟ್ಟು ವಿದ್ಯಾರ್ಥಿಗಳು ಪೊಲೀಸರಿಗೆ ದೂರು ಸಲ್ಲಿಸಿದ್ದಾರೆ. ದೂರು ಸಲ್ಲಿಸಿರುವ ಐವರಲ್ಲಿ ಓರ್ವನಾದ 17 ವರ್ಷದ ಯುವಕ, ‘‘ಇಬ್ಬರು ಕೋಚ್‌ಗಳು ಜನವರಿ 4ರಂದು ನಮಗೆ ತೀವ್ರವಾಗಿ ಥಳಿಸಿದರು. ಅಭ್ಯಾಸದ ಬಳಿಕ ನಮ್ಮನ್ನು ಕಾಯುವಂತೆ ಮಾಡಿದರು, ನಿಂದಿಸಿದರು, ಅಪಹಾಸ್ಯ ಮಾಡಿದರು ಹಾಗೂ ಲಾಕ್‌ಡೌನ್ ಸನ್ನಿಹಿತವಾಗಿರುವುದರಿಂದ ಹೆಚ್ಚು ಅಭ್ಯಾಸ ಮಾಡಿಸಲು ಸಾಧ್ಯವಾಗುವುದಿಲ್ಲ ಎಂದು ತಿಳಿಸಿದ್ದರು.

ಅಭ್ಯಾಸ ಕಡಿಮೆ ಮಾಡಿಸುತ್ತಿರುವ ಬಗ್ಗೆ ನಾವು ಈಗಾಗಲೇ ಅಸಮಾಧಾನಗೊಂಡಿದ್ದೆವು. ಕೆಲವರು ಧ್ವನಿ ಎತ್ತಿದರು. ಅವರು ನಮಗೆ ಬೆಲ್ಟ್‌ನಿಂದ ಥಳಿಸಿದರು ಎಂದಿದ್ದಾನೆ. ‘‘ತರಬೇತುದಾರರು ಥಳಿಸುತ್ತಿರುವುದು ಹೊಸ ವಿಚಾರವಲ್ಲ. ಈ ಹಿಂದೆ ಕೂಡ ಅವರು ವಿದ್ಯಾರ್ಥಿನಿಯರು ಸೇರಿದಂತೆ ನಮಗೆ ಥಳಿಸಿದ್ದಾರೆ. ದೂರು ನೀಡಿದರೆ ಅಕಾಡೆಮಿಯಿಂದ ಹೊರಗೆ ಹಾಕಲಾಗುವುದು ಎಂದು ಬೆದರಿಸಿದ್ದಾರೆ. ಇದರಿಂದ ಪ್ರತಿಯೊಬ್ಬರೂ ಭೀತರಾಗಿದ್ದೇವೆ. ಆದರೆ, ಈಗ ನಮಗೆ ಸಾಕಾಗಿದೆ’’ ಎಂದು ಅವರು ಹೇಳಿದರು. 

ಬಸ್ತಾರ್ ವಿಭಾಗಿಯ ಆಯುಕ್ತ ಹಾಗೂ ಬಿಜಾಪುರ ಜಿಲ್ಲಾ ಅಧಿಕಾರಿಗಳಲ್ಲಿ ಕೂಡ ಅವರು ಈ ಹಿಂದೆ ಇಬ್ಬರು ತರಬೇತುದಾರರ ವಿರುದ್ಧ ದೂರು ದಾಖಲಿಸಿದ್ದಾರೆ. ಪೊಲೀಸರು ದೂರನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದ್ದಾರೆ. ಪ್ರಕರಣವನ್ನು ತನಿಖೆ ನಡೆಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಜಿಲ್ಲಾಧಿಕಾರಿ ಕೂಡ ಈ ಬಗ್ಗೆ ತನಿಖೆಗೆ ಆದೇಶಿಸಿದ್ದಾರೆ. ‘‘ನಾವು ತನಿಖೆ ಆರಂಭಿಸಿದ್ದೇವೆ. ತಪ್ಪೆಸಗಿದವರ ವಿರುದ್ಧ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಲಿದ್ದೇವೆ’’ ಎಂದು ಬಿಜಾಪುರ ಜಿಲ್ಲಾಧಿಕಾರಿ ರಾಜೇಂದ್ರ ಕಟಾರ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News