ಪಾಕಿಸ್ತಾನ ಸುಪ್ರೀಂಕೋರ್ಟ್‌ಗೆ ಮೊದಲ ಮಹಿಳಾ ನ್ಯಾಯಾಧೀಶೆ : ಜೆಸಿಪಿ ಅಸ್ತು
ಇಸ್ಲಮಾಬಾದ್, ಜ.7: ಲಾಹೋರ್ ಹೈಕೋರ್ಟ್ ನ ನ್ಯಾಯಾಧೀಶೆ ಆಯಿಷಾ ಮಲಿಕ್ ರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶೆಯಾಗಿ ಭಡ್ತಿ ನೀಡುವ ಪ್ರಸ್ತಾವನೆಗೆ ಉನ್ನತ ಮಟ್ಟದ ಸಮಿತಿ ಅನುಮೋದನೆ ನೀಡಿದ್ದು, ಅವರು ಪಾಕಿಸ್ತಾನದ ಸುಪ್ರೀಂಕೋರ್ಟ್ ನ ಪ್ರಥಮ ಮಹಿಳಾ ನ್ಯಾಯಾಧೀಶೆಯಾಗಿ ನೇಮಕಗೊಳ್ಳುವುದು ಬಹುತೇಕ ಖಚಿತವಾಗಿದೆ ಎಂದು ಮೂಲಗಳು ಹೇಳಿವೆ.
ಆಯೆಷಾರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶೆಯನ್ನಾಗಿ ಮುಂಭಡ್ತಿ ನೀಡುವ ಪ್ರಸ್ತಾವನೆಯನ್ನು , ಮುಖ್ಯ ನ್ಯಾಯಾಧೀಶ(ಸಿಜೆಐ) ಗುಲ್ಜಾರ್ ಅಹ್ಮದ್ ನೇತೃತ್ವದ ಪಾಕಿಸ್ತಾನ ನ್ಯಾಯಾಂಗ ಆಯೋಗ 5-4 ಮತಗಳ ಅಂತರದಿಂದ ಅನುಮೋದಿಸಿದೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ. ನ್ಯಾಯಾಂಗ ಆಯೋಗದ ಶಿಫಾರಸನ್ನು ಸಂಸದೀಯ ಸಮಿತಿಗೆ ರವಾನಿಸಲಾಗುವುದು. ಆಯೋಗದ ಶಿಫಾರಸಿಗೆ ಬಹುತೇಕ ಸಂದರ್ಭಗಳಲ್ಲಿ ಸಂಸದೀಯ ಸಮಿತಿ ಒಪ್ಪಿಗೆ ನೀಡುತ್ತದೆ. ಆಯೆಷಾರಿಗೆ ಮುಂಭಡ್ತಿ ನೀಡುವ ಪ್ರಸ್ತಾವನೆ ನ್ಯಾಯಾಂಗ ಆಯೋಗದ ಕಳೆದ ಸೆಪ್ಟಂಬರ್ ನಲ್ಲಿ ಮಂಡಿಸಲಾಗಿತ್ತು. ಆಗ ಪರ-ವಿರೋಧ ಮತ ಸಮಾನವಾಗಿದ್ದರಿಂದ ಅವರ ಉಮೇದುವಾರಿಕೆ ತಿರಸ್ಕೃತಗೊಂಡಿತ್ತು.
ಈ ಮಧ್ಯೆ, ಆಯಿಷಾರನ್ನು ಸುಪ್ರೀಂಕೋರ್ಟ್ ನ್ಯಾಯಾಧೀಶೆಯನ್ನಾಗಿ ನೇಮಿಸುವ ಪ್ರಸ್ತಾವನೆಗೆ ಸುಪ್ರೀಂಕೋರ್ಟ್ ಬಾರ್ ಅಸೋಸಿಯೇಷನ್ ವಿರೋಧ ವ್ಯಕ್ತಪಡಿಸಿದೆ. ಹೈಕೋರ್ಟ್‌ಗಳಲ್ಲಿ ಸೇವೆ ಸಲ್ಲಿಸುತ್ತಿರುವ ಇತರ ಹಲವು ಹಿರಿಯ ನ್ಯಾಯಾಧೀಶರ ಎದುರು ಆಯಿಷಾ ಕಿರಿಯರಾಗಿದ್ದು, ವರಿಷ್ಟತೆಯನ್ನು ಪರಿಗಣಿಸುವುದಾದರೆ ಈ ಆಯ್ಕೆ ಸರಿಯಲ್ಲ. ಇದನ್ನು ವಿರೋಧಿಸಿ ದೇಶದಾದ್ಯಂತ ಪ್ರತಿಭಟನೆ ನಡೆಸಲಾಗುವುದು ಎಂದು ಬಾರ್ ಅಸೋಸಿಯೇಷನ್ ಅಧ್ಯಕ್ಷ ಅಬ್ದುಲ್ ಲತೀಫ್ ಅಫ್ರಿದಿ ಹೇಳಿದ್ದಾರೆ. 2012ರಲ್ಲಿ ಹೈಕೋರ್ಟ್ ನ್ಯಾಯಾಧೀಶೆಯಾಗಿ ನೇಮಕಗೊಂಡ ಜಸ್ಟಿಸ್ ಆಯಿಷಾ, ಲಾಹೋರ್ ಹೈಕೋರ್ಟ್ ನ್ಯಾಯಾಧೀಶರ ವರಿಷ್ಟತೆಯ ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದಾರೆ ಎಂದು ಮೂಲಗಳು ಹೇಳಿವೆ.