ಬೆಳ್ತಂಗಡಿ: ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ಕುತ್ತಿಗೆಗೆ ಸಿಲುಕಿ ಅಪಘಾತ: ವ್ಯಕ್ತಿ ಮೃತ್ಯು
ಬೆಳ್ತಂಗಡಿ, ಜ.7: ಮುಂಡಾಜೆಯಿಂದ ಕಾಜೂರು ದಿಡುಪೆ ಸಂಸೆ ರಸ್ತೆಯ ಹೇಡೆ ಸೊಸೈಟಿ ಬಳಿ ಕಳೆದ ರಾತ್ರಿ ಸಂಭವಿಸಿದ ವಾಹನ ಅಪಘಾತದಲ್ಲಿ ವ್ಯಕ್ತಿಯೋರ್ವ ದಾರುಣವಾಗಿ ಮೃತಪಟ್ಟ ಘಟನೆ ವರದಿಯಾಗಿದೆ.
ಮೃತರನ್ನು ಕೊಯ್ಯೂರು ನಿವಾಸಿ ರಘು ಎಂದು ಗುರುತಿಸಲಾಗಿದೆ.
ಘಟನೆ ವಿವರ: ಹೇಡ್ಯ ಬಳಿ ಕಳೆದ ರಾತ್ರಿ ಬೈಹುಲ್ಲು ಸಾಗಾಟದ ಪಿಕಪ್ ವಾಹನವೊಂದು ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದ ಪರಿಣಾಮ ನಾಲ್ಕೈದು ವಿದ್ಯುತ್ ಕಂಬಗಳು ತುಂಡಾಗಿವೆ. ಇದರಿಂದ ವಿದ್ಯುತ್ ತಂತಿಗಳು ರಸ್ತೆಯಲ್ಲಿ ಚೆಲ್ಲಾಪಿಲ್ಲಿಯಾಗಿ ನೇತಾಡುತ್ತಿದ್ದವು. ಈ ಅವಘಡದ ಅರಿವಿಲ್ಲದ ರಘು ರಾತ್ರಿ 11 ಗಂಟೆ ಸುಮಾರಿಗೆ ತನ್ನ ದ್ವಿಚಕ್ರ ವಾಹನದಲ್ಲಿ ದಿಡುಪೆ ಕಡೆಯಿಂದ ಬಂದಿದ್ದಾರೆ. ಅವರು ಹೇಡ್ಯ ಸೊಸೈಟಿ ಬಳಿ ತಲುಪಿದಾಗ ರಸ್ತೆಯಲ್ಲಿ ನೇತಾಡುತ್ತಿದ್ದ ವಿದ್ಯುತ್ ತಂತಿ ರಘು ಕುತ್ತಿಗೆಗೆ ಸಿಲುಕಿದೆ. ಇದರಿಂದ ರಸ್ತೆಗೆಸೆಯಲ್ಪಟ್ಟ ರಘು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.
ಅಪಘಾತ ಸಂಭವಿಸಿದ ವೇಳೆ ರಸ್ತೆಗೆ ಬಿದ್ದಿದ್ದ ತಂತಿಯಲ್ಲಿ ವಿದ್ಯುತ್ ಪ್ರವಹಿಸುತ್ತಿತ್ತೇ ಎಂಬ ನಿಖರ ಮಾಹಿತಿ ಲಭ್ಯವಾಗಿಲ್ಲ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ಆಗಮಿಸಿದ್ದು, ಪರಿಶೀಲಿಸುತ್ತಿದ್ದಾರೆ.