×
Ad

ಬಿಜೆಪಿ ಸರಕಾರದಿಂದ ಜನರ ಬದುಕಿನಲ್ಲಿ ಚೆಲ್ಲಾಟ: ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಆರೋಪ

Update: 2022-01-07 14:55 IST

ಕಾರ್ಕಳ, ಜ.7: ಕೊರೋನ, ಒಮೈಕ್ರಾನ್‌ ನಿಂದ ಹೆಚ್ಚಿನ ಅಪಾಯ ಇಲ್ಲ ಎಂದಾದ ಮೇಲೆ ವಾರಾಂತ್ಯದ ಕರ್ಪ್ಯೂ ಯಾಕೆ? ಜನರು ಮೊದಲೇ ಸಂಕಷ್ಟದಲ್ಲಿದ್ದಾರೆ, ಜನರನ್ನು ಮೊದಲು ಬದುಕಲು ಬಿಡಿ, ಉಡುಪಿ ಶಾಸಕ ರಘುಪತಿ ಭಟ್‌ ಕೂಡ ಲಾಕ್‌ ಡೌನ್‌, ಕರ್ಪ್ಯೂ ಬೇಡ ಹೇಳಿದ್ದಾರೆ. ಸರಕಾರದ ಆದೇಶದಂತೆ ಜಿಲ್ಲಾಡಳಿತ ಕಠಿಣ ಕ್ರಮ ಕೈಗೊಳ್ಳುತ್ತಿದೆ. ಹೀಗಾದರೇ ಹಳ್ಳಿಯ ಜನರು ಬದುಕುವುದು ಹೇಗೆ ಎಂದು ಹೆಬ್ರಿ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ ಪ್ರಶ್ನಿಸಿದ್ದಾರೆ.

ಹೆಬ್ರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಜಿಲ್ಲೆಯ ಇಬ್ಬರು ಸಚಿವರಿದ್ದರೂ ಅವರಿಗೆ ಜನರ ಸಂಕಷ್ಟ ಅರ್ಥವಾಗುತ್ತಿಲ್ಲ. ಲಾಕ್‌ ಡೌನ್‌ ಬಗ್ಗೆ ಚಕಾರವೇ ಎತ್ತುತ್ತಿಲ್ಲ. ಸರಕಾರ, ಶಾಸಕರು, ಸಚಿವರು ಎಷ್ಟು ಜನರನ್ನು ಕೂಡ ಸೇರಿ ಸಭೆ ಮಾಡಬಹುದು. ವಿಧಾನ ಪರಿಷತ್‌, ಪುರಸಭೆ ಚುನಾವಣೆಗಳು ನಡೆದಿದೆ. ಚುನಾವಣಾ ಬೃಹತ್‌ ಸಭೆಗಳು ನಡೆದಿದೆ ಆಗ ಅಪಾಯ ಇರಲಿಲ್ಲ. ಈಗ ಹಳ್ಳಿಯ ಮಂದಿಗೆ ಮಾತ್ರ ಕಠಿಣ ಕಾನೂನು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕೊರೋನ ಹೆಸರಿನಲ್ಲಿ ಕಳೆದ ಎರಡು ವರ್ಷಗಳಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರದ ಮಾಡಿದ ಎಡವಟ್ಟು ನಿರ್ಧಾರಗಳಿಂದಾಗಿ ಉದ್ಯಮ, ಸಣ್ಣ ಉದ್ಯಮ, ಕೈಗಾರಿಕೆ ಸೇರಿ ಬಹುತೇಕ ಮಂದಿ ಹೇಳಿಕೊಳ್ಳಲಾಗದ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಈಗ ಸ್ವಲ್ಪ ಮಟ್ಟಿನಲ್ಲಿ ಮತ್ತೇ ವ್ಯಾಪಾರ ವಹಿವಾಟುಗಳು ಚಿಗುರಿಕೊಳ್ಳುತ್ತದೆ ಎನ್ನುವಾಗ ಸರಕಾರ ಮತ್ತೇ ಜನರ ಬದುಕಿನಲ್ಲಿ ಆಟವಾಡುತ್ತಿದೆ. ಬಿಜೆಪಿ ಮತ್ತು ಬಿಜೆಪಿ ಸರಕಾರಕ್ಕೆ ಜನರ ಸಂಕಷ್ಟವೇ ಅರ್ಥವಾಗುತ್ತಿಲ್ಲ ಎಂದು ಮಂಜುನಾಥ ಪೂಜಾರಿ ದೂರಿದರು.

ರಾಜಕೀಯ ವಿರೋಧಿಗಳನ್ನು ಮಣಿಸಲು ಸರಕಾರ ಕರ್ಪ್ಯೂ ಹೇರಿಕೆ ಮಾಡುತ್ತಿದೆ. ಇದರಿಂದ ಜನರು ಇನ್ನೂ ಸಂಕಷ್ಟಕ್ಕೆ ಸಿಲುಕಲಿದ್ದಾರೆ ಎಂದು ಮಂಜುನಾಥ ಪೂಜಾರಿ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಾಂಗ್ರೆಸ್‌ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಮಹಿಳಾ ಕಾಂಗ್ರೆಸ್‌ ಅಧ್ಯಕ್ಷೆ ರಂಜನಿ ಹೆಬ್ಬಾರ್‌ ಕಬ್ಬಿನಾಲೆ, ಬ್ಲಾಕ್‌ ಕಾಂಗ್ರೆಸ್‌ ಕಾರ್ಯದರ್ಶಿ ಎಚ್.ಜನಾರ್ದನ್‌, ಯುವ ಕಾಂಗ್ರೆಸ್‌ ಅಧ್ಯಕ್ಷ ದಿನೇಶ ಶೆಟ್ಟಿ, ಪ್ರಮುಖರಾದ ಶಶಿಕಲಾ ಡಿ. ಪೂಜಾರಿ, ವಿಶುಕುಮಾರ್‌ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News