ಮದುವೆ ಔತಣದ ಹೆಸರಲ್ಲಿ ವೇಷ ಹಾಕುವುದು, ಕಿರಿಕಿರಿ ಸೃಷ್ಟಿ ನಮ್ಮ ಸಂಸ್ಕೃತಿಯಲ್ಲ: ಮುಸ್ಲಿಂ ವಿದ್ವಾಂಸರ ಖಂಡನೆ

Update: 2022-01-07 14:11 GMT

ವಿಟ್ಲ: ಮದುವೆ ಔತಣಕ್ಕಾಗಿ ಮದುಮಗಳ ಮನೆಗೆ ಬರುವಾಗ  ಮದುಮಗ ಹಾಗು ಆತನ ಮಿತ್ರರು  ವೇಷ ಹಾಕಿ, ಬಣ್ಣ ಬಳಿದುಕೊಂಡು ಕುಣಿದಿರುವ ಪ್ರಕರಣವು ಸದ್ಯ ಸಾಮಾಜಿಕ ತಾಣದಾದ್ಯಂತ ವೈರಲ್‌ ಆಗಿದೆ.  ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಸಮುದಾಯದಿಂದಲೇ ಆಕ್ರೋಶ ವ್ಯಕ್ತವಾಗಿದೆ. ಇದು ಧರ್ಮ ಸಮ್ಮತವಲ್ಲದ ಕಾರ್ಯವಾಗಿದೆ. ಇಂತಹ ಕೃತ್ಯಗಳಿಗೆ ಇಸ್ಲಾಂ ಯಾವತ್ತೂ ಅನುಮತಿ ನೀಡುವುವುದಿಲ್ಲ ಎಂದು ಮುಸ್ಲಿಂ ವಿದ್ವಾಂಸರು ಹೇಳಿಕೆ ನೀಡಿದ್ದಾರೆ.

"ಮದುವೆ ನಮ್ಮ  ಧಾರ್ಮಿಕ  ಸಂಸ್ಕೃತಿ. ಅದಕ್ಕೆ ವಿಶೇಷ  ಚೌಕಟ್ಟುಗಳಿವೆ. ಹಣವಂತನಾದರೂ ದರಿದ್ರನಾದರೂ ಮೇರೆ ಮೀರಬಾರದು ಎನ್ನುವುದು ನಿಯಮ. ಮದುವೆಯ ಹಿಂದೆ, ಮದುವೆಯ ಮುಂದೆ ಅಂತ ಹೇಳಿ ಹಲವಾರು ಸಂಪ್ರದಾಯಗಳಿಗೆ ಬಲಿ ಬಿದ್ದು ನಮ್ಮ ಸಮಾಜವು ಸಮಸ್ಯೆ ಎದುರಿಸುತ್ತಿದೆ. ಈ ಪೈಕಿ ಒಂದಾಗಿದೆ ತಾಳ ಎಂಬ ಸಂಪ್ರದಾಯ. ವಾಸ್ತವದಲ್ಲಿ ಮದವೆಯಾದ ಹುಡುಗ ಹೆಣ್ಣಿನ ಮನೆಗೆ ಮೊದಲ ರಾತ್ರಿ ಭೇಟಿ ನೀಡುವುದಕ್ಕೆ ತಾಳ ಅನ್ನುತ್ತಾರೆ. ಅಂದು ವಿಶೇಷವಾದ ಭೋಜನಕೂಟವನ್ನು ಏರ್ಪಡಿಸುತ್ತಾರೆ. ಮದುವೆ  ಮನೆಯವರು ತಮ್ಮಷ್ಟಕ್ಕೆ ಸಂಭ್ರಮ ಹಂಚಿಕೊಂಡು ಮುಗಿಸುವ   ಇದಕ್ಕೆ ಇಸ್ಲಾಮಿನಲ್ಲಿ ಇಲ್ಲದ ಸಂಪ್ರದಾಯಗಳನ್ನು ಸೇರಿಸಿ, ಅಕ್ಕಪಕ್ಕದವರಿಗೆ ಕಿರಿಕಿರಿ ಉಂಟು ಮಾಡುವ, ಧರ್ಮಕ್ಕೆ ಮಸಿ ಬಳಿಯುವ ದುಷ್ಕೃತ್ಯವು ಯಾರಿಂದ ಉಂಟಾದರೂ ಅದು ಖಂಡನೀಯ" ಎಂದು ರಾಜ್ಯ ಎಸ್‌ವೈಎಸ್‌ ಸಂಘಟನಾ ಕಾರ್ಯದರ್ಶಿ ಜಿ.ಎಂ ಮುಹಮ್ಮದ್‌ ಕಾಮಿಲ್‌ ಸಖಾಫಿ ಹೇಳಿಕೆ ನೀಡಿದ್ದಾರೆ.

"ಮದುವೆ ಎಂಬ ಪವಿತ್ರ ಕಾರ್ಯವನ್ನು ‌ಅಧಾರ್ಮಿಕ ,ಅನೈತಿಕ ‌ಕಾರ್ಯಗಳ ಜತೆ ಬೆರೆಸಿ ಧರ್ಮದ ಹೆಸರನ್ನು ಕೆಡಿಸುವ ಕೆಲಸವು ಕೆಲವು ಆಧುನಿಕ ಮುಸ್ಲಿಂ ವರರಿಂದ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ನಡೆಯುತ್ತಿದೆ.ಇದು ಸರ್ವತ್ರ ಖಂಡನೀಯ. ಇಂತಹ ನಾಚಿಕೆಗೇಡಿನ ಕೃತ್ಯಗಳು ಇಸ್ಲಾಮಿನ ಸೌಂದರ್ಯ ಮತ್ತು ಸಮಗ್ರ ಜೀವನಕ್ರಮವನ್ನು ಅಂದಗೆಡಿಸುತ್ತದೆ. ಅಂಥವರನ್ನು ಆಯಾ ಮೊಹಲ್ಲಾ ಜಮಾಅತ್ ಸಮಿತಿಗಳು ಬಹಿಷ್ಕರಿಸಬೇಕು. ಆದರೆ ಇದಕ್ಕೆ ಮತೀಯ ಬಣ್ಣ ಬಳಿದು ಕೋಮು ಸಾಮರಸ್ಯ ಕೆಡಿಸಲು ಮುಂದಾಗಿರುವ ಕೆಲವರ ಶ್ರಮ ಕೂಡಾ ಖಂಡನೀಯ. ಎಲ್ಲ ಸಮುದಾಯದ ಮುಖಂಡರು ಈ ಬಗ್ಗೆ ಎಚ್ಚರದಿಂದ ಮಧ್ಯ ಪ್ರವೇಶಿಸಿ ವಿಟ್ಲ ಪರಿಸರದಲ್ಲಿ  ಸ್ಥಿತಿಗತಿಗಳನ್ನು ಶಾಂತವಾಗಿರಿಸಲು ಮುಂದಾಗಬೇಕು ಎಂದು ಎಸ್‌ವೈಎಸ್‌ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಎಮ್ಮೆಸ್ಸೆಂ ಝೈನೀ ಕಾಮಿಲ್‌ ಹೇಳಿಕೆ ನೀಡಿದ್ದಾರೆ. 

ವಿವಾಹ ಕಾರ್ಯ ಪವಿತ್ರವಾದ ಉದ್ದೇಶದಿಂದ ಕೂಡಿದ ಪುಣ್ಯ ಕರ್ಮವಾಗಿದೆ. ಸಮಾಜವು ವಿಶೇಷವಾದ ರೀತಿಯಲ್ಲಿ ಈ ಸಂಬಂಧವನ್ನು ಕಾಣುತ್ತದೆ. ವಿವಾಹ ಸಡಗರದಲ್ಲಿ ಪರಸ್ಪರ ಸಂತಸವನ್ನು ಹಂಚಿಕೊಳ್ಳುವುದು ಸಂಸ್ಕೃತಿಯಾಗಿದೆ. ಆದರೆ ಆ ಸಂಭ್ರಮವನ್ನು ವಿಕೃತಿ ಯ ಮೂಲಕ ಆಚರಿಸುವುದು ಧರ್ಮಕ್ಕೆ ಎಸಗುವ ಅಪಚಾರ ವಾಗಿದೆ. ಮೊನ್ನೆ  ಮದುವೆ ನಿಮಿತ್ತ ನಡೆದ ಅನಾಗರಿಕ ವೇಷಧಾರಣೆಯು ಖಂಡನೀಯ ಎಂದು ಎಸ್ ವೈ ಎಸ್ ಕರ್ನಾಟಕ ರಾಜ್ಯ ಸಂಚಾಲಕ ಮೌಲಾನಾ ಅಝೀಝ್ ದಾರಿಮಿ ಚೊಕ್ಕಬೆಟ್ಟು ಹೇಳಿಕೆ ನೀಡಿದ್ದಾರೆ.

"ಇದು ಮುಸ್ಲಿಂ ಸಮುದಾಯದವರು ಗಂಭೀರವಾಗಿ ಚಿಂತಿಸಬೇಕಾದ ವಿಚಾರವಾಗಿದೆ. ಮುಸ್ಲಿಮರೇ ಈ ಕುರಿತು ಕೇಸು ದಾಖಲಿಸಿ ಕ್ರಮ ಕೈಗೊಳ್ಳಬೇಕು. ಇದು ಧರ್ಮ ಸಮ್ಮತವಾದ ಕಾರ್ಯವಲ್ಲ. ಇದು ನಾವೇ ನಮ್ಮ ಧರ್ಮಕ್ಕೂ, ನಮ್ಮ ಪ್ರವಾದಿಯವರಿಗೂ ಅವಹೇಳನ ಮಾಡಿದಂತಾಗಿದೆ. ಧಾರ್ಮಿಕ ಮುಖಂಡರು ಈ ಕುರಿತು ಕ್ರಮ ಕೈಗೊಳ್ಳುವ ಅಗತ್ಯವಿದೆ" ಎಂದು ಧಾರ್ಮಿಕ ಮುಖಂಡರಾದ ಎಸ್‌.ಬಿ ದಾರಿಮಿ ಹೇಳಿಕೆ ನೀಡಿದ್ದಾರೆ.

ಸದ್ಯ ಪ್ರಕರಣವನ್ನು ತಮಗೆ ಬೇಕಾದಂತೆ  ಬಳಸಿಕೊಂಡು ಸಂಘಪರಿವಾರ ಸಂಘಟನೆಗಳು ಅಶಾಂತಿ ಸೃಷ್ಟಿಸಲು ಯತ್ನಿಸುತ್ತಿದ್ದು, ವಧುವಿನ ಮನೆಗೆ ಮುತ್ತಿಗೆ ಹಾಕಲು ಹೊರಟ ಘಟನೆಯೂ ನಡೆದಿದೆ ಎಂದು ವರದಿಯಾಗಿದೆ. ಅನಗತ್ಯ ಗೊಂದಲಗಳಿಗೆ ಅವಕಾಶ  ಮಾಡಿ ಕೊಡುವ  ಇಂತಹ ಘಟನೆ ಮರುಕಳಿಸಲು ಅವಕಾಶ ನೀಡಬಾರದು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News