ಇನ್ನೂ ದುರಸ್ತಿ ಕಾಣದ ಉಡುಪಿ ನಗರ ಹೃದಯ ಭಾಗದ ರಸ್ತೆ !
ಉಡುಪಿ, ಜ.7: ನಗರದ ಹೃದಯ ಭಾಗದಲ್ಲಿರುವ ಹಾಗೂ ಅತ್ಯಂತ ಹೆಚ್ಚು ಜನ ಸಂಚಾರ ಇರುವ ಸಿಟಿ ಬಸ್ ನಿಲ್ದಾಣ ಸಮೀಪದ ಅಂಜುಮಾನ್ ಮಸೀದಿ ರಸ್ತೆಯು ಹೊಂಡಗುಂಡಿಗಳಿಂದ ಕೂಡಿದ್ದು, ರಾತ್ರಿ ದಾರಿದೀಪ ಇಲ್ಲದೆ ನಡೆದಾಡುವುದು ಕಷ್ಟಕರವಾಗಿದೆ.
ಕಳೆದ ಹಲವು ವರ್ಷಗಳಿಂದ ದುರಸ್ತಿ ಕಾಣದ ಈ ರಸ್ತೆಯಲ್ಲಿನ ಹೊಂಡ ಗಳಿಂದ ಪಾದಾಚಾರಿಗಳು, ಹಿರಿಯ ನಾಗರಿಕರು ಬಿದ್ದು ಗಾಯಗೊಂಡಿದ್ದು, ಇಂತಹ ಹಲವು ಘಟನೆಗಳು ಈ ರಸ್ತೆಯಲ್ಲಿ ನಿರಂತರವಾಗಿ ನಡೆಯುತ್ತಿದೆ. ಪರ್ಯಾಯ ಮಹೋತ್ಸವ ನಡೆಯುತ್ತಿರುವ ಹಿನ್ನೆಲೆಯಲ್ಲಿ ನಗರಸಭೆಯು ನಗರ ಎಲ್ಲ ರಸ್ತೆಗಳನ್ನು ಡಾಮರೀಕರಣ ಮಾಡುತ್ತಿರುವ ಈ ಸಂದರ್ಭದಲ್ಲಿ ಈ ರಸ್ತೆಯತ್ತ ಕೂಡ ಕಣ್ಣು ಹಾಯಿಸುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.
ರಸ್ತೆಯ ಮಧ್ಯೆ ಅಗೆದು ಹಾಕಿರುವ ಗುಂಡಿ ಇನ್ನೂ ಅದೇ ಸ್ಥಿತಿಯಲ್ಲಿದ್ದು, ವಾಹನ ಸವಾರರಿಗೂ ತೀರಾ ಸಮಸ್ಯೆಯಾಗುತ್ತಿದೆ. ಅಲ್ಲದೆ ಹಲವು ಕಡೆ ಕಾಂಕ್ರೀಟ್ ರಸ್ತೆ ಕಿತ್ತು ಹೋಗಿರುವುದು ಕಂಡುಬಂದಿದೆ. ಸಮಪರ್ಕ ಬೀದಿ ದೀಪಗಳ ವ್ಯವಸ್ಥೆ ಇಲ್ಲದ ಕಾರಣ ಕತ್ತಲಾದರೆ ಈ ರಸ್ತೆಯಲ್ಲಿ ನಡೆಯಲು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
ಶ್ರೀಕೃಷ್ಣಮಠಕ್ಕೆ ಹೋಗಲು ಹೆಚ್ಚಿನ ಜನ ಇದೇ ರಸ್ತೆಯನ್ನು ಅವಲಂಬಿಸಿ ಕೊಂಡಿರುವುದರಿಂದ ಸಂಬಂಧಪಟ್ಟವರು ಕೂಡಲೇ ಈ ರಸ್ತೆಗೆ ಬೇಕಾದ ಮೂಲ ಭೂತ ಸೌಕರ್ಯಗಳನ್ನು ಒದಗಿಸಿಕೊಡುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ