ವೀಕೆಂಡ್ ಕರ್ಫ್ಯೂ ವಿರೋಧಿಸಿ ಸಿಪಿಎಂ ಪ್ರತಿಭಟನೆ
ಮಂಗಳೂರು, ಜ.7: ರಾಜ್ಯ ಸರಕಾರದ ವೈಫಲ್ಯ ಮುಚ್ಚಿ ಹಾಕಲು ವಿಧಿಸಿದ ವೀಕೆಂಡ್ ಕರ್ಫ್ಯೂ ಹಾಗೂ ಕೋವಿಡ್ ನಿರ್ಬಂಧ ಗಳನ್ನು ವಿರೋಧಿಸಿ ಹಾಗೂ ಜನಸಾಮಾನ್ಯರ ಬದುಕನ್ನು ಸಂಕಷ್ಟಕ್ಕೆ ದೂಡಿದ ರಾಜ್ಯ ಸರಕಾರದ ವಿರುದ್ಧ ಸಿಪಿಎಂ ವತಿಯಿಂದ ನಗರದ ಕ್ಲಾಕ್ ಟವರ್ ಬಳಿ ಶುಕ್ರವಾರ ಪ್ರತಿಭಟನೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಸಿಪಿಎಂ ದ.ಕ.ಜಿಲ್ಲಾ ಕಾರ್ಯದರ್ಶಿ ಕೆ.ಯಾದವ ಶೆಟ್ಟಿ ಬಸವರಾಜ್ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಜನವಿರೋಧಿ ನೀತಿಗಳನ್ನು ಜಾರಿಗೊಳಿಸುವುದರ ಜೊತೆಗೆ ತನ್ನ ಕೋಮುವಾದಿ ಅಜೆಂಡಾವನ್ನು ಅಳವಡಿಸಿಕೊಂಡು ಜನರ ಗಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದೆ. ಸರಕಾರದ ವಿರುದ್ಧ ಭುಗಿಲೆದ್ದ ಜನಾಕ್ರೋಶವನ್ನು ಶಮನ ಮಾಡಲು ಕೊರೋನವನ್ನು ಮುಂದಿಟ್ಟುಕೊಂಡು ಕೀಳು ಮಟ್ಟದ ರಾಜಕೀಯ ನಡೆಸುತ್ತಿದೆ ಎಂದು ಹೇಳಿದರು.
ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯರಾದ ಜೆ. ಬಾಲಕೃಷ್ಣ ಶೆಟ್ಟಿ, ಸುಕುಮಾರ್, ಮುನೀರ್ ಕಾಟಿಪಳ್ಳ, ಸುನೀಲ್ ಕುಮಾರ್ ಬಜಾಲ್ ಮಾತನಾಡಿದರು. ಪ್ರತಿಭಟನೆಯಲ್ಲಿ ಸಿಪಿಎಂ ಜಿಲ್ಲಾ ನಾಯಕರಾದ ಸದಾಶಿವದಾಸ್, ಜಯಂತ ನಾಯಕ್, ಬಶೀರ್ ಪಂಜಿಮೊಗರು, ಸಂತೋಷ್ ಬಜಾಲ್, ಯೋಗೀಶ್ ಜಪ್ಪಿನಮೊಗರು, ಬಿ.ಕೆ.ಇಮ್ತಿಯಾಝ್, ಸಿಐಟಿಯು ಮುಖಂಡರಾದ ಜಯಂತಿ ಶೆಟ್ಟಿ, ರಾಧಾ ಮೂಡುಬಿದಿರೆ, ಗಿರಿಜಾ, ರವಿಚಂದ್ರ ಕೊಂಚಾಡಿ, ಮುಹಮ್ಮದ್ ಮುಸ್ತಫಾ, ಸಂತೋಷ್ ಆರ್.ಎಸ್, ನಾಗೇಶ್ ಕೋಟ್ಯಾನ್, ಡಿವೈಎಫ್‌ಐ ನಾಯಕರಾದ ನವೀನ್ ಕೊಂಚಾಡಿ, ದಯಾನಂದ ಶೆಟ್ಟಿ, ಮನೋಜ್ ವಾಮಂಜೂರು, ನೌಷಾದ್ ಬೆಂಗರೆ, ದಲಿತ ಹಕ್ಕುಗಳ ಸಮಿತಿ ಮುಖಂಡರಾದ ತಿಮ್ಮಯ್ಯ ಕೊಂಚಾಡಿ, ಕೃಷ್ಣ ತಣ್ಷೀರುಬಾವಿ, ಜನವಾದಿ ಮಹಿಳಾ ಸಂಘಟನೆಯ ನಾಯಕರಾದ ಭಾರತಿ ಬೋಳಾರ, ಪ್ರಮೀಳಾ ಶಕ್ತಿನಗರ, ಕಲಾವಿದ ಕೀತು ಫುರ್ಟಾಡೋ, ಸಾಮಾಜಿಕ ಚಿಂತಕರಾದ ಪ್ರಮೀಳಾ ದೇವಾಡಿಗ, ಜೆರಾಲ್ಡ್ ಟವರ್, ಉದಯ ಆಚಾರ್ಯ, ಎಸ್‌ಎಫ್‌ಐ ನಾಯಕಿ ಮಾಧುರಿ ಬೋಳಾರ, ಸಮುದಾಯ ಸಂಘಟನೆಯ ಮುಖಂಡ ವಾಸುದೇವ ಉಚ್ಚಿಲ್ ಮತ್ತಿತರರು ಪಾಲ್ಗೊಂಡಿದ್ದರು.