‘ಕಿರುಕುಳ’ದ ವಿರುದ್ಧ ಸಮೀರ್ ವಾಂಖೆಡೆ ದೂರು: ವಿಚಾರಣೆಗೆ ಹಾಜರಾಗುವಂತೆ ಮುಂಬೈ ಪೊಲೀಸ್ ವರಿಷ್ಠರಿಗೆ ನೋಟಿಸ್

Update: 2022-01-07 14:37 GMT
ಸಮೀರ್ ವಾಂಖೆಡೆ

ಹೊಸದಿಲ್ಲಿ,ಜ.7: ಜಾತಿ ವಿಷಯದಲ್ಲಿ ತನಗೆ ಕಿರುಕುಳ ನೀಡಲಾಗುತ್ತಿದೆಯೆಂದು ಆರೋಪಿಸಿ ಮಾದಕದ್ರವ್ಯ ನಿಯಂತ್ರಣ ದಳದ ಮುಂಬೈ ವಲಯದ ನಿರ್ದೇಶಕ ಸಮೀರ್ ವಾಂಖೆಡೆ ನೀಡಿರುವ ದೂರಿಗೆ ಸಂಬಂಧಿಸಿ ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ (ಎನ್‌ಸಿಎಸ್‌ಸಿ)ಯು ಮುಂಬೈಯ ಪೊಲೀಸ್ ಆಯುಕ್ತ ಹೇಮಂತ್ ನಗ್ರಾಲೆ ಅವರಿಗೆ ಜನವರಿ 31ಕ್ಕೆ ವಿಚಾರಣೆಗೆ ಹಾಜರಾಗುವಂತೆ ತಿಳಿಸಿದೆ

ವಿಚಾರಣೆಯ ವೇಳೆ ಉಪಸ್ಥಿತರಿರುವಂತೆ ವಾಂಖೆಡೆಯವರಿಗೂ ಆಯೋಗ ಸೂಚಿಸಿದೆ.ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಬಂಧನಕ್ಕೆ ಕಾರಣವಾದ ವಿಲಾಸಿ ಹಡಗಿನಲ್ಲಿ ಮಾದಕದ್ರವ್ಯ ಪತ್ತೆ ಪ್ರಕರಣದ ತನಿಖೆಯ ನೇತೃತ್ವ ವಹಿಸಿದ್ದ ಸಮೀರ್ ವಾಂಖೆಡೆ ಅವರು ನಕಲಿ ಜಾತಿ ಪ್ರಮಾಣಪತ್ರ ಹೊಂದಿದ್ದಾರೆಂದು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಆರೋಪಿಸಿದ್ದರು.

ವಾಂಖೆಡೆ ಅವರು ಮುಸ್ಲಿಂ ಧರ್ಮೀಯರಾಗಿದ್ದು, ಯುಪಿಎಸ್‌ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾದ ಬಳಿಕ ಪರಿಶಿಷ್ಟ ಮೀಸಲಾತಿ ಕೋಟಾಡದಿ ಭಾರತೀಯ ಕಂದಾಯ ಸೇವೆ(ಐಆರ್‌ಎಸ್)ಯಲ್ಲಿ ಉದ್ಯೋಗವನ್ನು ಗಿಟ್ಟಿಸಿಕೊಳ್ಳಲು ನಕಲಿ ಪರಿಶಿಷ್ಟ ಜಾತಿ ಪ್ರಮಾಣ ಪತ್ರವನ್ನು ಬಳಸಿಕೊಂಡಿದ್ದಾರೆಂದು ಮಲಿಕ್ ಆಪಾದಿಸಿದ್ದರು.

ಆದರೆ ಈ ಆರೋಪಗಳನ್ನು ವಾಂಖೆಡೆ ನಿರಾಕರಿಸಿದ್ದರು. ತನಗೆ ಕಿರುಕುಳ ನೀಡಲಾಗುತ್ತಿದೆಯೆಂದು ವಾಂಖೆಡೆ ಅವರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗಕ್ಕೆ ದೂರು ನೀಡಿದ್ದರು.

ವಾಂಖೆಡೆ ವಿರುದ್ಧದ ನಕಲಿ ಜಾತಿ ಪ್ರಮಾಣಪತ್ರಕ್ಕೆ ಸಂಬಂಧಿಸಿದ ಆರೋಪದ ಕುರಿತ ತನಿಖೆಯು ತನ್ನ ಮುಂದೆ ವಿಚಾರಣೆಗೆ ಬಾಕಿಯಿರುವುದರಿಂದ ಈ ನಿಟ್ಟಿನಲ್ಲಿ ಯಾವುದೇ ನಿರ್ಧಾರವನ್ನು ಕೈಗೊಳ್ಳದಂತೆ ರಾಷ್ಟ್ರೀಯ ಪರಿಶಿಷ್ಟ ಜಾತಿ ಆಯೋಗವು ಮಹಾರಾಷ್ಟ್ರ ಸರಕಾರಕ್ಕೆ ಸೂಚಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News