ಸೆಣಬಿಗೆ ಮತ್ತೊಂದು ಪರ್ಯಾಯ ಬಾಳೆ ನಾರು !

Update: 2022-01-07 14:56 GMT

ಮಂಗಳೂರು, ಜ.7: ಬಾಳೆಗಿಡದಿಂದ ನಾರನ್ನು ತೆಗೆದು ವಿವಿಧ ಉತ್ಪನ್ನಗಳನ್ನು ತಯಾರಿಸುವ ಉದ್ಯಮ ಜನಪ್ರಿಯವಾಗುತ್ತಿದ್ದು, ಇದು ಸಣ್ಣ ಉದ್ಯಮ ನಡೆಸುವವರಿಗೆ, ಮಹಿಳೆಯರಿಗೆ ಉತ್ತಮ ಆದಾಯ ತಂದುಕೊಡಬಲ್ಲದು ಎಂದು ತಮಿಳುನಾಡಿನ ಕೊಯಮತ್ತೂರಿನ ಇಕೋ ಗ್ರೀನ್ ಯುನಿಟ್‌ನ ಎಸ್.ಕೆ.ಬಾಬು ತಿಳಿಸಿದ್ದಾರೆ.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬಾಳೆಗಿಡದ ಕಾಂಡದಿಂದ ನಾರಿನ ಅಂಶವನ್ನು ತೆಗೆದು ಅದನ್ನು ಸಂಸ್ಕರಿಸಿ ವಿವಿಧ ಜನೋಪಯೋಗಿ ಉತ್ಪನ್ನಗಳನ್ನು ತಯಾರಿಸುವ ತಂತ್ರಜ್ಞಾನ ಇದೀಗ ತಯಾರಾಗಿ ಲಭ್ಯವಿದ್ದು, ಈ ಮೂಲಕ ಪರಿಸರ ಸ್ನೇಹಿ ಶಖೆ ಆರಂಭಗೊಂಡಿದೆ. ಇದಕ್ಕೆ ಉತ್ತಮ ಮಾರುಕಟ್ಟೆಯೂ ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.

ಕೊಯಮತ್ತೂರಿನ ಇಕೋ ಗ್ರೀನ್ ಯುನಿಟ್ ಸಂಸ್ಥೆ ಇದಕ್ಕೆ ಬೇಕಾದ ಪೂರಕ ತಂತ್ರಜ್ಞಾನವನ್ನು, ಯಂತ್ರೋಪಕರಣಗಳನ್ನು ಸಿದ್ಧಪಡಿಸುತ್ತಿದೆ. ರೈತರು ಅಥವಾ ಸಣ್ಣ ಉದ್ಯಮ ಸ್ಥಾಪಿಸಲು ಆಸಕ್ತಿ ಉಳ್ಳವರು ಇದನ್ನು ಸುಲಭವಾಗಿ ಮನೆಯಲ್ಲೇ ಅನುಷ್ಠಾನ ಗೊಳಿಸಬಹುದು. ಕೇಂದ್ರ ಸರಕಾರದ ಮುದ್ರಾ ಯೋಜನೆ ಅಡಿಯಲ್ಲಿ ಸಾಲ ಸೌಲಭ್ಯವೂ ಇದಕ್ಕೆ ದೊರೆಯುತ್ತದೆ. ಇದೊಂದು ಉಪ ಉದ್ಯಮವಾಗಿಯೂ ಮಾಡಿಕೊಳ್ಳಬಹುದು ಎಂದು ಅವರು ಹೇಳಿದರು.

ಒಂದು ಬಾಳೆಗಿಡದಲ್ಲಿ ಸುಮಾರು ಒಂದು ಕೆಜಿಯಷ್ಟು ನಾರನ್ನು ಪಡೆಯಬಹುದಾಗಿದೆ. ದೇಶೀ ಮಾರುಕಟ್ಟೆಯಲ್ಲಿ ಒಂದು ಕೆಜಿಗೆ 60 ರೂ. ದರ ಇದ್ದರೆ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 250 ರೂ. ವರೆಗೆ ಮಾರುಕಟ್ಟೆ ಇದೆ ಎಂದು ಅವರು ತಿಳಿಸಿದರು.

ತರಬೇತುದಾರ ಸುಬ್ರಹ್ಮಣ್ಯ ಮಾತನಾಡಿ, ಕರ್ನಾಟಕದಲ್ಲಿ ಬಾಳೆ ನಾರು ತಯಾರಿ ಉದ್ಯಮ ಕೇವಲ ಕರ್ನಾಟಕ ಕಲಬುರ್ಗಿ ಯಲ್ಲಿ ಮಾತ್ರ ಇದೆ. ಇದೀಗ ಈ ಉದ್ಯಮವನ್ನು ಅಲ್ಲಲ್ಲಿ ವಿಸ್ತರಿಸುವ ಪ್ರಯುಕ್ತ ಎಲ್ಲಡೆ ತರಬೇತಿ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಮಂಗಳೂರಿನ ಪಿಲಿಕುಳದಲ್ಲೂ ತರಬೇತಿ ನೀಡುವ ಸಿದ್ಧತೆ ಮಾಡುತ್ತಿದ್ದೇವೆ ಎಂದು ಅವರು ತಿಳಿಸಿದರು. ಮಹೇಶ್ ಆರ್.ನಾಯಕ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News